ಸಿದ್ಧಗಂಗಾ ಶ್ರೀಗಳ ಹೆಸರು ರಾಜಕೀಯಕ್ಕೆ ಬಳಕೆ ಸರಿಯಲ್ಲಃ ದೇವೆಗೌಡ
ಸಿದ್ಧಗಂಗಾ ಶ್ರೀಗಳ ಹೆಸರು ರಾಜಕೀಯಕ್ಕೆ ಬಳಕೆ ಸರಿಯಲ್ಲಃ ಮಾಜಿ ಪ್ರಧಾನಿ ದೇವೆಗೌಡ
ಶಹಾಪುರ: ವೀರಶೈವ-ಲಿಂಗಾಯತ ವಿಚಾರ ಸಮಾಜದ ಮುಖಂಡರು ಬಗೆಹರಿಸಿಕೊಳ್ಳುತ್ತಾರೆ. ಅದರಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ನಾವು ಮಧ್ಯ ಪ್ರವೇಶಿಸುವದಿಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೆಗೌಡ ಅವರು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದರು.
ನಗರದಲ್ಲಿ ಆಯೋಜಿಸಿದ್ದ ಜೆಡಿಎಸ್ ಬೃಹತ್ ಸಮಾವೇಶ ಹಿನ್ನೆಲೆಯಲ್ಲಿ ಶುಕ್ರವಾರ ನಗರಕ್ಕೆ ಆಗಮಿಸಿದ ಅವರು, ಸಮಾವೇಶಕ್ಕೆ ತೆರಳುವ ಮುನ್ನ ಭೀಮರಾಯನ ಗುಡಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.
ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತ ಸಿದ್ಧಗಂಗಾ ಶ್ರೀಗಳ ಹೆಸರನ್ನು ರಾಜಕೀಯ ಕಾರಣಗಳಿಗಾಗಿ ಬಳಸಿಕೊಳ್ಳುವುದು ಸರಿಯಲ್ಲ ಎಂದು ತಿಳಿಸಿದರು. ಕೆಲವರು ಹಿರಿಯಶ್ರೀಗಳನ್ನು ತಮ್ಮ ರಾಜಕೀಯ ಬೇಳೆ ಬೆಳೆಸಿಕೊಳ್ಳಲು ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ವಿಷಾಧ ವ್ಯಕ್ತಪಡಿಸಿದರು.
ನಂತರ ಸುದ್ದಿಗಾರರು ಕೇಳಿದ ಹಂಪಿ ವಿವಿ ಕುಲಪತಿ ಮಲ್ಲಿಕಾ ಘಂಟಿ ನೀಡಿರುವ ಹೇಳಿಕೆ ಕುರಿತು ಮಾತನಾಡಲು ನಿರಾಕರಿಸಿದರು. ಗೌರಿ ಲಂಕೇಶ ಹತ್ಯೆ ಪ್ರಕರಣ ಕುರಿತು ಪ್ರತಿಕ್ರಿಯಿಸಿ ಈಗಾಗಲೇ ತನಿಖೆ ನಡೆಯುತ್ತಿದೆ. ಅಧಿಕಾರಿಗಳು ಸಮಗ್ರ ತನಿಖೆ ನಡೆಸುತ್ತಿದ್ದಾರೆ. ಹಂತಕರನ್ನು ಶೀಘ್ರವೇ ಬಂಧಿಸುವ ವಿಶ್ವಾಸವಿದೆ ಎಂದರು.