ಕಲಬುರಗಿ: ವಿದ್ಯುತ್ ಸ್ಪರ್ಶಿಸಿ ಇಬ್ಬರು ಕಾರ್ಮಿಕರು ಸಾವು
ಉದ್ರಿಕ್ತರಿಂದ ಸೆಕುರಿಟಿ ಕೋಣೆಗೆ ಬೆಂಕಿಯಿಟ್ಟು ಆಕ್ರೋಶ
ಕಲಬುರಗಿ: ಚಿತ್ತಾಪುರ ಪಟ್ಟಣದ ಬಳಿಯಿರುವ ಓರಿಯಂಟಲ್ ಸಿಮೆಂಟ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಕಾರ್ಮಿಕರು ವಿದ್ಯುತ್ ಸ್ಪರ್ಶಿಸಿ ಸಾವಿಗೀಡಾದ ಘಟನೆ ನಡೆದಿದೆ. ಇಟಗಾ ಗ್ರಾಮದ ಮಹೇಶ್ ಮತ್ತು ಮೌನಪ್ಪ ಮೃತ ದುರ್ದೈವಿಗಳೆಂದು ತಿಳಿದು ಬಂದಿದೆ.
ಕಾರ್ಖಾನೆಯ ಮುಖ್ಯಸ್ಥರ ಬೇಜವಬ್ದಾರಿಯಿಂದಲೇ ಘಟನೆ ನಡೆದಿದೆ ಎಂಬುದು ಮೃತ ಕಾರ್ಮಿಕರ ಸಂಭಂಧಿಕರ ಆರೋಪವಾಗಿದೆ. ಅಲ್ಲದೆ ಮೃತರ ಕುಟುಂಬಗಳಿಗೆ ಘಟನೆ ಬಗ್ಗೆ ಸೂಕ್ತ ಮಾಹಿತಿ ನೀಡದೆ ಸಿಮೆಂಟ್ ಫ್ಯಾಕ್ಟರಿಯ ಮುಖ್ಯಸ್ಥರು ಬೇಜವಬ್ದಾರಿ ಪ್ರದರ್ಶಿಸಿದ್ದಾರೆನ್ನಲಾಗಿದೆ. ಪರಿಣಾಮ ಆಕ್ರೋಶಗೊಂಡ ಮೃತರ ಸಂಬಂಧಿಕರು ಮತ್ತು ಸ್ಥಳೀಯರು ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೆ ಉದ್ರಿಕ್ತ ಗುಂಪು ಸೆಕುರಿಟಿ ಗಾರ್ಡ್ ವಾಸಿಸುವ ಕೋಣೆಗೆ ಬೆಂಕಿ ಇಟ್ಟಿದೆ. ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸಬೇಕು ಮತ್ತು ಇನ್ನು ಮುಂದೆ ಇಂಥ ಘಟನೆಗಳು ನಡೆಯದಂತೆ ಎಚ್ಚರಿಕೆವಹಿಸಿ ಕಾರ್ಮಿಕರಿಗೆ ರಕ್ಷಣೆ ನೀಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ಚಿತ್ತಾಪುರ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.