ಯಾದಗಿರಿಃ ನಿರಂತರ 10 ತಾಸು ತ್ರಿ-ಫೇಸ್ ವಿದ್ಯುತ್ ನೀಡಲು ವೆಂಕಟರಡ್ಡಿ ಮುದ್ನಾಳ ಆಗ್ರಹ
ಜೆಸ್ಕಾಂ ವಿರುದ್ಧ ಬಿಜೆಪಿ ಬೃಹತ್ ಪ್ರತಿಭಟನೆ
ಯಾದಗಿರಿಃಕಳೆದ ಹದಿನೈದು ದಿನಗಳಿಂದ ಮಳೆ ಜಾಸ್ತಿಯಾಗಿದ್ದು, ಬಹುತೇಕ ರಾಜ್ಯದ ಎಲ್ಲಾ ಜಲಾಶಯಗಳು ಭರ್ತಿಯಾಗಿವೆ. ಕಾರಣ ರಾಜ್ಯ ಸರ್ಕಾರ ನಿರಂತರವಾಗಿ 7 ತಾಸು ಬದಲು 10 ತಾಸು ತ್ರೀ-ಫೇಸ್ ವಿದ್ಯುತ್ ಸರಬರಾಜು ಸೌಲಭ್ಯ ಕಲ್ಪಿಸುವ ಮೂಲಕ ಉದ್ಯಮದಾರರಿಗೆ, ರೈತಾಪಿ ಜನರಿಗೆ ಅನುಕೂಲ ಕಲ್ಪಿಸಬೇಕು ಎಂದು ಬಿಜೆಪಿ ಮುಖಂಡ ವೆಂಕಟರಡ್ಡಿ ಮುದ್ನಾಳ ಆಗ್ರಹಿಸಿದರು.
ವಿವಿಧ ವಿದ್ಯುತ್ ಸಮಸ್ಯೆಗಳ ಪರಿಹಾರಕ್ಕೆ ಜೆಸ್ಕಾಂ ಇಲಾಖೆ ಸ್ಪಂಧನೆ ನೀಡುತ್ತಿಲ್ಲ ಎಂದು ಆರೋಪಿಸಿ, ಮತ್ತು ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ನಗರದಲ್ಲಿ ಬಿಜೆಪಿಯಿಂದ ನಡೆದ ಬೃಹತ್ ಪ್ರತಿಭಟನೆಯ ನೇತೃತ್ವವಹಿಸಿ ಅವರು ಮಾತನಾಡಿದರು.
ಜಿಲ್ಲಾದ್ಯಂತ ವಿದ್ಯುತ್ ಸಮಸ್ಯೆಗಳು ಸಾಕಷ್ಟಿವೆ. ಹತ್ತಾರು ಬಾರಿ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮೀಣ ಭಾಗದಲ್ಲಿ ಒಂದ್ಸಲ ವಿದ್ಯುತ್ ಪರಿವರ್ತಕ ಯಂತ್ರ ಕೆಟ್ಟಿದೆ ಎಂದಾದರೆ, ವಿದ್ಯುತ್ ಇಲಾಖೆ ಅಧಿಕಾರಿ, ಸಿಬ್ಬಂದಿ ಸ್ಥಳಕ್ಕೆ ಬಂದು ದುರಸ್ತಿ ಮಾಡಿ ಹಾಕುತ್ತೇವೆ ಎಂದು ಹೋದರೆ ಮುಗೀತು. ಮತ್ತೇ ಆ ಗ್ರಾಮದ ಜನತೆ ರೊಚ್ಚಿಗೆದ್ದು ಇಲಾಖೆ ಕಚೇರಿಗೆ ತೆರಳಿ ಗದ್ದಲ ಮಾಡಿದ ನಂತರವೇ ಆ ಗ್ರಾಮಕ್ಕೆ ವಿದ್ಯುತ್ ಸರಬರಾಜು ಮಾಡುವ ವ್ಯವಸ್ಥೆ ಇಲ್ಲಿದೆ.
ಅಲ್ಲದೆ ಬಹುತೇಖ ಗ್ರಾಮಗಳಲ್ಲಿ ಹಳೇ ವಿದ್ಯುತ್ ಕಂಬಗಳಿದ್ದು, ವಿದ್ಯುತ್ ತಂತಿಗಳು ಜೋತು ಬಿದ್ದಿವೆ. ಮಳೆ ಗಾಳಿಗೆ ಸಾಕಷ್ಟು ಅವಘಡಗಳು ಸಂಭವಿಸಿವೆ. ಕೂಡಲೇ ಅವುಗಳನ್ನು ದುರಸ್ತಿಗೊಳಿಸಬೇಕು. ಅಲ್ಲದೆ ಸುಮಾರು ವರ್ಷಗಳಿಂದ ಗಂಗಾ ಕಲ್ಯಾಣ ಯೋಜನೆಯಡಿ ಸೌಲಭ್ಯ ಕಲ್ಪಿಸಲಾದ ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕಿಸುವಲ್ಲಿ ಜೆಸ್ಕಾಂ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು. ಮತ್ತು ಈಗಾಗಲೇ ವಿದ್ಯುತ್ ಉಪಕೇಂದ್ರಗಳ ನಿರ್ಮಾಣ ಕಾಮಗಾರಿ ನಡೆದಿದ್ದು, ಕೂಡಲೇ ಪೂರ್ಣಗೊಳಿಸಿಬೇಕು.
ಯಾದಗಿರಿ ನಗರ ಸುತ್ತಮುತ್ತಲಿನ ಗ್ರಾಮಗಳಿಗೆ ನಗರದ ವಿದ್ಯುತ್ ಲೈನ್ ಸಂಪರ್ಕ ಸೌಲಭ್ಯ ಕಲ್ಪಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಚಂದ್ರಶೇಖರ ಮಾಗನೂರ, ನಗರದ ಪ್ರಮುಖರು ಸೇರಿದಂತೆ ಸುತ್ತಲಿನ ಗ್ರಾಮಸ್ಥರು, ಬಿಜೆಪಿ ಕಾರ್ಯಕರ್ತರು ಅಪಾರ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ನಗರದ ಸುಭಾಷ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಬೃಹತ್ ಪ್ರತಿಭಟನೆ ಮೆರವಣಿಗೆ ಜರುಗಿತು. ಹಲವು ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿಗಳು ಕೂಡಲೇ ಬೇಡಿಕೆ ಈಡೇರಿಸುವ ಭರವಸೆ ನೀಡಿದರು.