ಯೂನೊಕಾಯಿನ್ ಟೆಕ್ನಾಲಜೀಸ್ ಕಂಪನಿಯ ಸರ್ವರ್ ಹ್ಯಾಕ್ ಮಾಡಿ 60.6 ಬಿಟ್ ಕಾಯಿನ್ ಕಳ್ಳತನ
ಬೆಂಗಳೂರು: ಯೂನೊಕಾಯಿನ್ ಟೆಕ್ನಾಲಜೀಸ್ ಕಂಪನಿಯ ಸರ್ವರ್ ಹ್ಯಾಕ್ ಮಾಡಿ 60.6 ಬಿಟ್ ಕಾಯಿನ್ ಕಳ್ಳತನ ಮಾಡಿದ್ದ ಪ್ರಕರಣದಲ್ಲಿ ಆರೋಪಿ ರಾಬಿನ್ ಖಂಡೇನ್ವಾಲ ಅವರನ್ನು ಎಸ್ಐಟಿ ಅಧಿಕಾರಿಗಳು ಬಂಧಿಸಿರುವ ಘಟನೆ ನಡೆದಿದೆ.
ಪಶ್ಚಿಮ ಬಂಗಾಳದ ರಾಬಿನ್ ಖಂಡೇನ್ವಾಲ, ಕರೆನ್ಸಿ ವಿನಿಮಯ ಕೆಲಸ ಮಾಡುತ್ತಿದ್ದರು. ರಾಬಿನ್ ಆನ್ಲೈನ್ ಸರ್ವೀಸ್ ಹೆಸರಿನಲ್ಲಿ ಕಂಪನಿ ಸಹ ನಡೆಸುತ್ತಿದ್ದನು. ಪ್ರಕರಣದ ಪ್ರಮುಖ ಆರೋಪಿಯಾದ ಅಂತರರಾಷ್ಟ್ರೀಯ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ (29) ಕಡೆಯಿಂದ ಬಿಟ್ ಕಾಯಿನ್ಗಳನ್ನು ಪಡೆದುಕೊಂಡು, ರೂಪಾಯಿಗೆ ವಿನಿಮಯ ಮಾಡಿಕೊಟ್ಟಿದ್ದ ಎಂದು ಎಸ್ಐಟಿ ಮೂಲಗಳು ಹೇಳಿವೆ. 2017ರಲ್ಲಿ ತುಮಕೂರಿನಲ್ಲಿರುವ ಯೂನೊಕಾಯಿನ್ ಟೆಕ್ನಾಲಜೀಸ್ ಕಂಪನಿಯ ಸರ್ವರ್ ಹ್ಯಾಕ್ ಮಾಡಿ 60.6 ಬಿಟ್ ಕಾಯಿನ್ ಕಳ್ಳತನ ಮಾಡಲಾಗಿತ್ತು. ಈ ಸಂಬಂಧ ಕಂಪನಿ ನಿರ್ದೇಶಕ ಬಿ.ವಿ. ಹರೀಶ್ ಅವರು ತುಮಕೂರಿನ ನ್ಯೂ ಎಕ್ಸ್ಟೆನ್ಶನ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣದ ತನಿಖೆ ಕೈಗೆತ್ತಿಕೊಂಡು ತಾಂತ್ರಿಕ ಪುರಾವೆಗಳನ್ನು ಆಧರಿಸಿ ಶ್ರೀಕಿಯನ್ನು ಇತ್ತೀಚೆಗಷ್ಟೇ ಬಂಧಿಸಲಾಗಿತ್ತು.
ಕಳ್ಳತನ ಮಾಡಿದ್ದ ಬಿಟ್ ಕಾಯಿನ್ಗಳಲ್ಲಿ ಕೆಲ ಬಿಟ್ ಕಾಯಿನ್ಗಳನ್ನು ಆರೋಪಿ ಶ್ರೀಕಿ, ರಾಬಿನ್ಗೆ ನೀಡಿದ್ದನೆಂಬುದು ತನಿಖೆಯಿಂದ ಗೊತ್ತಾಗಿತ್ತು. ರಾಜಸ್ಥಾನದಲ್ಲಿ ತಲೆಮರೆಸಿಕೊಂಡಿದ್ದ ರಾಬಿನ್ನನ್ನು ಬಂಧಿಸಿ ನಗರಕ್ಕೆ ಕರೆತರಲಾಗಿದೆ ಎಂದು ಮೂಲಗಳು ತಿಳಿಸಿವೆ. ಶ್ರೀಕಿ ಹಾಗೂ ರಾಬಿನ್ ಹಲವು ವರ್ಷಗಳ ಸ್ನೇಹಿತರು. ಶ್ರೀಕಿ ನೀಡುತ್ತಿದ್ದ ಬಿಟ್ ಕಾಯಿನ್ಗಳನ್ನು ವಿನಿಮಯ ಮಾಡುತ್ತಿದ್ದ ರಾಬಿನ್, ಹವಾಲಾ ಮೂಲಕ ವಿವಿಧ ಖಾತೆಗಳಿಗೆ ಹಣ ಜಮೆ ಮಾಡುತ್ತಿದ್ದ. ಇದಕ್ಕಾಗಿ ಕಮಿಷನ್ ಪಡೆಯುತ್ತಿದ್ದ ಎಂದು ಹೇಳಿವೆ. ರಾಬಿನ್ನನ್ನು ಈ ಹಿಂದೆಯೂ ಸಿಸಿಬಿ ಹಾಗೂ ಸಿಐಡಿ ಪೊಲೀಸರು ಬಂಧಿಸಿದ್ದರು. ಶ್ರೀಕಿ ಹಾಗೂ ರಾಬಿನ್, ಹಲವು ಕರೆನ್ಸಿ ವಿನಿಮಯ ಏಜೆನ್ಸಿಗಳ ಸರ್ವರ್ ಹ್ಯಾಕ್ ಮಾಡಿ ಹಣ ಗಳಿಸಿರುವ ಮಾಹಿತಿ ಇದೆ. ಈ ಬಗ್ಗೆ ಪುರಾವೆಗಳನ್ನು ಸಂಗ್ರಹಿಸಲು ತನಿಖೆ ಮುಂದುವರಿಸಲಾಗಿದೆ ಎಂದು ಹೇಳಿವೆ. Ad