ಸಿಎಂ ಯೋಗಿ ಆದಿತ್ಯನಾಥ್ ತಾಜಮಹಲ್ ಗೆ ಭೇಟಿ ನೀಡಿದ್ದೇಕೆ?
ತಾಜಮಹಲ್ ವಿವಾದಕ್ಕೆ ತೆರೆ ಎಳೆದರಾ ಯೋಗಿ ಆದಿತ್ಯನಾಥ್!
ಉತ್ತರ ಪ್ರದೇಶದ ಬಿಜೆಪಿ ಶಾಸಕ ಸಂಗೀತ್ ಸಿಂಗ್ ಸೋಮ್ಸ್ ತಾಜ್ ಮಹಲ್ ಭಾರತದ ಸಂಸ್ಕೃತಿಯ ಸಂಕೇತ ಅಲ್ಲ. ಐತಿಹಾಸಿಕ ಹಿನ್ನಲೆಯ ಸಂಕೇತವೂ ಅಲ್ಲ. ತನ್ನ ತಂದೆಯನ್ನು ಕೂಡಿ ಹಾಕಿ ಕಿರುಕುಳ ನೀಡಿದ ವ್ಯಕ್ತಿ ನಿರ್ಮಾಣ ಮಾಡಿದ ಮಹಲ್ ಅದ್ಹೇಗೆ ಮಾಡಲ್ ಆಗುತ್ತದೆ ಎಂದು ಪ್ರಶ್ನಿಸಿ ವಿವಾದ ಹುಟ್ಟು ಹಾಕಿದ್ದರು. ಬಳಿಕ ತಾಜ್ ಮಹಲ್ ಬಗ್ಗೆ ಪರ ವಿರೋಧ ಚರ್ಚೆಗಳು ನಡೆದಿದ್ದವು.
ಇದೇ ಮೊದಲ ಬಾರಿಗೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಪ್ರೇಮಸೌಧ ತಾಜಮಹಲ್ ಗೆ ಭೇಟಿ ನೀಡಿದ್ದಾರೆ. ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ತಾಜ ಮಹಲ್ ವೀಕ್ಷಣೆ ಮಾಡಿದ್ದಾರೆ. ಅಲ್ಲದೆ ಷಹಜಹಾನ್ ಪಾರ್ಕನ್ನು ವೀಕ್ಷಿಸಿದ್ದಾರೆ. ಬಿಜೆಪಿ , ಹಿಂದುತ್ವದ ಫೈರ್ ಬ್ರ್ಯಾಂಡ್ ಎಂದೇ ಕರೆಸಿಕೊಳ್ಳುವ ಕಾವಿಧಾರಿ ಸಿಎಂ ಯೋಗಿ ಆದಿತ್ಯನಾಥ್ ತಾಜಮಹಲ್ ಭೇಟಿ ಭಾರೀ ಮಹತ್ವ ಪಡೆದುಕೊಂಡಿದೆ.
ಇದೇ ಸಂದರ್ಭದಲ್ಲಿ ಪ್ರೇಕ್ಷಣೀಯ ಸ್ಥಳದ ಅಭಿವೃದ್ದಿಗಾಗಿ 370ಕೋಟಿ ವೆಚ್ಚದಲ್ಲಿ ನಡೆಯುವ ಕಾಮಗಾರಿಗಳಿಗೆ ಸಿಎಂ ಆದಿತ್ಯನಾಥ್ ಚಾಲನೆ ನೀಡಿದ್ದಾರೆ. ಆ ಮೂಲಕ ತಾಜಮಹಲ್ ಪ್ರದೇಶದ ತಾಜ್ ನಗರ ಅಭಿವೃದ್ಧಿಗೆ ಕ್ರಮ ಕೈಗೊಂಡಿದ್ದಾರೆ. ಅಂತೆಯೇ ಉತ್ತರ ಪ್ರದೇಶದ ಬಿಜೆಪಿ ಶಾಸಕ ಸಂಗೀತ್ ಸೋಮ್ಸ್ ಹೇಳಿಕೆಯ ಡ್ಯಾಮೇಜ್ ಕಂಟ್ರೋಲ್ ಗಾಗಿ ಸಿಎಂ ಯೋಗಿ ಆದಿತ್ಯನಾಥ್ ತಾಜಮಹಲ್ ಗೆ ಭೇಟಿ ನೀಡಿದ್ದಾರೆ ಎನ್ನಲಾಗಿದೆ.