ಇದ್ಯಾವ ಸೀಮೆ ಪಕ್ಷ? ನಟ ಉಪೇಂದ್ರ, ಕೆಪಿಜೆಪಿ ವಿರುದ್ಧ ಮಹದಾಯಿ ಹೋರಾಟಗಾರರ ಆಕ್ರೋಶ
ಧಾರವಾಡ: ಹೋರಾಟಗಾರರಿಗೆ ತತ್ಕಾಲ ಟಿಕೆಟ್ ಬುಕ್ ಮಾಡಿದವರಾರು?, ಮಿನರಲ್ ವಾಟರ್ ಬಾಟಲ್ ಬಂದದ್ದೆಲ್ಲಿಂದ? ಎಂದು ಕೆಪಿಜೆಪಿ ಪಕ್ಷದ ಸಂಸ್ಥಾಪಕ, ನಟ ಉಪೇಂದ್ರ ಟ್ವೀಟರ್ ನಲ್ಲಿ ಟ್ವೀಟ್ ಮಾಡಿರೋದಕ್ಕೆ ಮಹದಾಯಿ ಹೋರಾಟಗಾರರು ಗರಂ ಆಗಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಹದಾಯಿ ಹೋರಾಟಗಾರ ವಿರೇಶ ಸಬರದಮಠ ಕೆಪಿಜೆಪಿ ಇದ್ಯಾವ ಸೀಮೆ ಪಕ್ಷ, ಉಪೇಂದ್ರ ಅವರೇನು ಅಣ್ಣಾ ಹಜಾರೆ ಥರಾನಾ ಎಂದು ಕಿಡಿಕಾರಿದ್ದಾರೆ.
ಉಪೇಂದ್ರ ಮೊದಲು ರೈತ ಕಷ್ಟ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಲಿ. ನಾವು ಟಿಕೆಟ್ ಪಡೆಯದೆಯೇ ಬೆಂಗಳೂರಿಗೆ ಹೋಗಿದ್ದೆವು. ಉಚಿತ ಪ್ರಯಾಣಕ್ಕಾಗಿ ರೈಲ್ವೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೆವು. ಅವರು ಅಸಹಾಯಕತೆ ತೋರಿದಾಗ ಬೇಕಿದ್ದರೆ ನಮ್ಮನ್ನು ಬಂಧಿಸಿ ಎಂದು ಹೇಳಿದ್ದೆವು. ನಮಗೆ ಯಾರೂ ಟಿಕೆಟ್ ತೆಗೆಸಿ ಕೊಟ್ಟಿಲ್ಲ. ಅನವಶ್ಯಕ ಮಾತನಾಡುವುದನ್ನು ಬಿಟ್ಟು ಅಗತ್ಯವಿದ್ದರೆ ನನ್ನ ಬಳಿ ಬರಲಿ. ನಾನೇ ಹೋರಾಟದ ಹಾದಿ ಹೇಳಿಕೊಡುತ್ತೇನೆ. ಬೇರೆ ರಾಜಕೀಯ ಪಕ್ಷದವರಂತೆ ಮಾತನಾಡಿದರೆ ಇವರು ಹೇಗೆ ಭಿನ್ನವಾಗುತ್ತಾರೆ ಎಂದು ನಟ ಉಪೇಂದ್ರ ವಿರುದ್ಧ ಹೋರಾಟಗಾರ ವಿರೇಶ ಸಬರದಮಠ ಕಿಡಿಕಾರಿದ್ದಾರೆ.