ಇಂವ ‘ನಡೆದಾಡುವ ದೇವರ’ಲ್ಲ, ಆದರೂ ನನ್ನ ಪಾಲಿನ ನಿಜ ಸಂತ. ಸಿದ್ದೇಶ್ವರ ಶ್ರೀ ‘ಹೇಳ್ತಾರೆ’, ಇವನು ಸರಳವಾಗಿದ್ದಾನೆ!
✍️Shivakumar uppin
ಈತ ‘ಅಪ್ಪಿ’ ಅಂದ ಮತ್ತೆ ಸಿಕ್ಕು. ಶಹಾಪುರದ ಉದಯನ ಪಾಲಿಗೆ ನಾನು ಯಾವತ್ತೂ ಅಪ್ಪಿಯೇ! ನನ್ನ ಮೇಲೆ ಅದೇನು ಮಮತೆಯೋ, ಪ್ರೇಮವೊ ಇವನಿಗೆ. ಈ ಉದಯ್ ಆಣಿಕೇರಿ ಸಿಕ್ಕಾಗಿನಿಂದ ಈವರೆಗೆ ಕೊಟ್ಟ ಪ್ರೀತಿಗೆ ಪಾರವೇ ಇಲ್ಲ.
ನಮ್ಮ ಪ್ರಿಂಟಿಂಗ್ ಪ್ರೆಸ್‌ನಲ್ಲಿ ಈತ ಕೆಲಸಕ್ಕಿದ್ದಾಗ ನಾನು ಹದಿ ವಯಸ್ಸಿನವ. ಅದೇ ಪಿಯುಸಿಗಿದ್ದವ ನಾನು. ಆಲಮೇಲದಲ್ಲಿ ಹತ್ತನೆ ತರಗತಿ ಮುಗಿಸಿ ನಮ್ಮಪ್ಪನ ಸಂಗಡ ಶಹಾಪುರಕ್ಕೆ ಹೋದವರು ನಾವು. ನಮ್ಮಜ್ಜರ ನಾಟಕ ಸಜ್ಜಿಕೆಗಳು ಆ ಭಾಗದಲ್ಲೇ ಹೆಚ್ಚು ಬಾಡಿಗೆ ಹೋಗುತ್ತಿದ್ದರಿಂದ ನಮ್ಮ ಅಶೋಕ್ ಕಾಕಾ ಅವರು ಮೊದಲೇ ಆ ಊರು ಸೇರಿದ್ದರು.
ಬಿಜಾಪುರದ ನೆಲದಿಂದ ಮೊಗಲಾಯಿ ಪ್ರದೇಶ ಸೇರಿದ್ದ ನಮಗೆ ಅಲ್ಲಿನವರು ನೀಡಿದ, ಈಗಲೂ ನೀಡುತ್ತಿರುವ ಪ್ರೀತಿ ಅನನ್ಯ. ಹಾಗೆ ಹೋದ ನಮ್ಮ ಪ್ರೆಸ್ಸಿನಲ್ಲಿ ಉದಯ್ ಕೆಲಸಕ್ಕೆ ಬಂದವ. ಅಂದಿನಿಂದ ಇಂದಿನ ತನಕ ನನ್ನ ಒಡಲ ದನಿ ಅರಿತ, ಅರಿವ ಪುಣ್ಯಾತ್ಮನಾಗಿದ್ದಾನೆ. ಜರವೂ ಆಸೆ ಇಲ್ಲದ, ಒಬ್ಬ ಮಗನಿದ್ದರೂ ಹೆಂಡತಿ ಜತೆ ಅಂವ ಇರುವುದರಿಂದ ಈತ ಈಗಲೂ ಒಂದು ಪ್ರೆಸ್‌ನಲ್ಲಿ ಅದೇ ಕೆಲಸ ಮಾಡುತ್ತ ಹಂಗೇ ಜೀವನ ಸಾಗಿಸುತ್ತಿದ್ದಾನೆ.
ದಿನಾ ನೈಂಟಿ ಮೇಲೆ ಸಿಕ್ಸ್ಟಿ ಹೊಡೆದು ವೇದಾಂತಿಯಂತೆ ಮಾತಾಡುತ್ತಾನೆ. ಅವು ಬದುಕಿನ ವಾಸ್ತವದ ವೇದಾಂತ. ಒಪ್ಪತ್ತಿನ ಊಟ ಮಾಡಿ ಹೆಂಗಿದ್ದ ಹಂಗೇ ಇದ್ದಾನೆ. ಮೊದಲು ಬೆಂಗಳೂರಿನಲ್ಲಿ ಇದ್ದು, ಕುಮಾರ ಅಂತ ಕರೆಸಿಕೊಳ್ಳುತ್ತಿದ್ದ. ಆಗಿನ ಕಾಲಕ್ಕೆ ಇಂವ ಬೆಂಗಳೂರಿಗೆ ದುಡಿಯಲು ಹೋಗಿ ಬರುತ್ತಿದ್ದದ್ದೇ ಕೌತುಕ.
ಯಾವ ಆಸೆ ಇಲ್ಲ. ಜೀವನ ಎಷ್ಟೆಲ್ಲ ಇಲ್ಲ, ಇಷ್ಟೇ ಅಂತ ಅರಿತಿದ್ದಾನೆ. ಅದನ್ನು ತನ್ನ ಮುಗ್ಧ ಮಾತಲ್ಲಿ ಹೇಳುತ್ತಾನೆ. ಪರಮಾತ್ಮ, ಪಾರಮಾರ್ಥದ ಅರ್ಥ ಬಿಡಿಸುತ್ತಾನೆ. ನೀವೆಷ್ಟೇ ಓಡಿದರೂ ನಿಲ್ಲುವ ಬಗೆ ವಿವರಸುತ್ತಾನೆ. ಈತ ಪಂಡಿತನಲ್ಲ, ಪ್ರವಚನಕಾರನಲ್ಲ.
ಆದರೆ, ಸಿದ್ದೇಶ್ವರ ಶ್ರೀಗಳ ಮಾತು ಹೇಗಿವಿಯೋ ಇವನೂ ಹಾಗೇ ಇದ್ದಾನೆ. ಇವನೂ ಫಕೀರ. ಆದರೆ ತನಗೋಸ್ಕರ ದುಡಿಯುತ್ತಾನೆ. ಸಂಜೆಯ ಮತ್ತು ಊಟದ ವ್ಯವಸ್ಥೆ ಮಾಡಿಕೊಳ್ಳುತ್ತಾನೆ. ಇವನ ಜತೆ ಎಣ್ಣೆ ಹೊಡೆದು ನಾವೂ ‘ಪರಮಾತ್ಮನ’ ಕಂಡಿದ್ದೇವೆ! ನನ್ನ ಮೇಲೆ, ನನ್ಮ ಅಕ್ಷರಗಳ ಮೇಲೆ ವಿಪರೀತ ವ್ಯಾಮೋಹ.
ಉದಯ್‌ಗೆ ನಾನು ಜತೆಗಿಟ್ಟುಕೊಂಡು ಮುಂದೆ ಆಸರೆಯಾಗುವ ಆಸೆ ಇದೆ. ಸುಮ್ನೆ ಇಂವ ನಮ್ಮ ಜತೆಗಿರಬೇಕು ಅಷ್ಟೇ. ಈತ ಇದ್ದರೆ ಎಲ್ಲ ಸಹಜ ಶಾಂತ. ಎಲ್ಲ ಊರಲ್ಲಿ ಇರುವ ಇಂತಹ ಅಪರೂಪದವರನ್ನು ನಾವು ಕೈ ಹಿಡಿಯಬೇಕಿದೆ.
–ಶಿವಕುಮಾರ್ ಉಪ್ಪಿನ, ಆಲಮೇಲ