ಯೂತ್ ಐಕಾನ್

ಬಸವಧರ್ಮ ಹೋರಾಟಕ್ಕಾಗಿ ವೃತ್ತಿಗೆ ಗುಡ್ ಬೈ ಹೇಳಿದ ಪತ್ರಕರ್ತ ಉಪ್ಪಿನ್ ಕುರಿತು

ಅನೇಕ ಸಂತರು, ಶರಣರು, ದಾರ್ಶನಿಕರು, ಕವಿಗಳು, ಹೋರಾಟಗಾರರು ತಮ್ಮ ಒಯಕ್ತಿಕ ಬದುಕನ್ನು ಬದಿಗಿಟ್ಟು ಸಮಾಜ ಸೇವೆ ಮೂಲಕ ಬದುಕಿನ ನಿಜರ್ಥವನ್ನು ಸಾಕಾರಗೊಳಿಸಿದ್ದಾರೆ. ಆ ಮೂಲಕ ಆದರ್ಶ ಮೌಲ್ಯಗಳನ್ನು ಬಿತ್ತಿ ಇಂದಿಗೂ ಉತ್ತಮ ಸಮಾಜಕ್ಕೆ ಮಾದರಿ ಆಗಿದ್ದಾರೆ. ಅಂಥ ಜೀವಾತ್ಮರ ತತ್ವಾದರ್ಶಗಳು ಮಾಧ್ಯಮದ ಮೂಲಕ ಹೆಚ್ಚೆಚ್ಚು ಜನರನ್ನು ತಲುಪಬೇಕಿದೆ. ಜೀವಪರ ಸಂದೇಶಗಳು ಗಾಳಿಯಂತೆ, ಗಗನದಂತೆ, ನೀರಿನಂತೆ ಎಲ್ಲೆಡೆ ಜೀವ ಪಡೆಯಬೇಕಿದೆ. ಸಂವೇದನಶೀಲ ಸಮಾಜ ನಿರ್ಮಾಣ ಆಗಬೇಕಿದೆ.

ಅಂತ ಸಮ ಸಮಾಜದ ಪರಿಕಲ್ಪನೆ ಇಟ್ಟುಕೊಂಡಿರುವ ಬಸವ ಭಕ್ತ ಶಿವಕುಮಾರ್ ಉಪ್ಪಿನ್ ವೃತ್ತಿಯಿಂದ ಪತ್ರಕರ್ತರು. ವಿಜಯ ಕರ್ನಾಟಕ ಸೇರಿದಂತೆ ಇತರೆ ಪತ್ರಿಗಳಲ್ಲಿ ಕಾರ್ಯನಿರ್ವಹಿಸಿರುವ ಉಪ್ಪಿನ್ ವಿಶಿಷ್ಟ ಬರಹದ ಮೂಲಕ ತಮ್ಮದೇ ಆದ ಛಾಪು ಮೂಡಿಸಿದವರು. ಆದ್ರೆ, ಕಳೆದ ಆರು ತಿಂಗಳಿಂದ ಪತ್ರಕರ್ತ ವೃತ್ತಿಯನ್ನೇ ಬಿಟ್ಟು ಹೋರಾಟಕ್ಕಿಳಿದಿದ್ದಾರೆ. ಬಸವ ಧರ್ಮಕ್ಕಾಗಿ ಗಾಣಕ್ಕೆ ಕಟ್ಟಿದ ಎತ್ತಿನಂತೆ ಅವಿರತ ಶ್ರಮ ಪಡುತ್ತಿದ್ದಾರೆ. ಆ ಮೂಲಕ ಪತ್ರಕರ್ತನಾಗಿ ಪ್ರಗತಿಪರ ಬರಹಗಳ ಮೂಲಕ ಸಮಾಜ ತಿದ್ದುವ ಕೆಲಸ ಮಾತ್ರವಲ್ಲ, ಬಸವಣ್ಣನಿಗಾಗಿ ಒಯಕ್ತಿಕ ಬದುಕು ತ್ಯಜಿಸಿ ಹೋರಾಟಕ್ಕೂ ಸಿದ್ಧ ಎಂದು ಹೊರಟಿದ್ದು ಆಧುನಿಕ ಶರಣ ಪತ್ರಕರ್ತ ಎಂಬ ಸಂದೇಶ ನೀಡುತ್ತಿದ್ದಾರೆ.

ಹೌದು, ಶಹಾಪುರದಲ್ಲಿ ಉಪ್ಪಿನ್ ಅಂದರೆ ಸಾಕು ಇಡೀ ಊರು ಗುರುತಿಸುವ ಮನೆತನದಿಂದ ಬಂದವರು ಶಿವಕುಮಾರ್ ಉಪ್ಪಿನ್. ಸದಾ ಖಾದಿ ಜುಬ್ಬಾ, ಜೀನ್ಸ್ ಪ್ಯಾಂಟು, ಕೈಯಲೊಂದು ಡೈರಿ, ಜೇಬಲ್ಲಿ ಪೆನ್ನು. ಆಡಂಬರವಿಲ್ಲದ ಸರಳ ಜೀವಿ. ಎಲ್ಲರೊಳಗೊಂದಾಗುವ ಪರಿ ಇವರಿಗೆ ಸಿದ್ಧಿಸಿದೆ. ಆದರೆ, ರಾಜಿ ಸಂಧಾನದಿಂದ ಮಾತ್ರ ದೂರ ದೂರ. ಸುಮಾರು ವರ್ಷದ ಹಿಂದೆಯೇ ಮನೆ ಜಗುಲಿ ಮೇಲಿನ ಮೂರ್ತಿಗಳನ್ನು ಸ್ವಾಮೀಜಿಯೊಬ್ಬರನ್ನು ಕರೆಸಿ ‘ತಗೋಂಡು ಹೋಗಿ..’ ಎಂದು ಜೋಳಿಗೆಗೆ ಹಾಕಿದ್ದರು. ಅಲ್ಲದೆ ಆ ಬಗ್ಗೆ ಜಾಗೃತಿ ಕಾರ್ಯಕ್ರಮ ಮಾಡಿ ಆಲಮೇಲದಲ್ಲಿ ಚರ್ಚೆಗೆ ಕಾರಣರಾಗಿದ್ದರು. ಸರ್ವರ ಸಂಗಡವು ಸಂವಾದಕ್ಕೆ ಬರುವ ಇವರು ಶರಣ ತತ್ವ ಮಾತ್ರ ಎಂದಿಗೂ ಬಿಟ್ಟು ಕೊಡುವುದಿಲ್ಲ. ಬಸವ ಪ್ರಿಯ ಶಿವಕುಮಾರ್ ಜೊತೆಗೆ ಹತ್ತು ನಿಮಷ ಮಾತನಾಡಿದರೂ ಸಾಕು ಅಷ್ಟರೊಳಗೇ ಅಲ್ಲಿ ಯಾವುದಾದರೂ ರೂಪದಲ್ಲಿ ಬಸವಣ್ಣ ಎಂಟ್ರಿ ಆಗಿರುತ್ತಾನೆ.

ಪರಮ ಬಸವ ಭಕ್ತರಾದ ಪತ್ರಕರ್ತ ಶಿವಕುಮಾರ್ ಉಪ್ಪಿನ್ ಯಾವುದೇ ಹಂಗಿಲ್ಲದೆ ನೇರವಾಗಿ ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟದಲ್ಲಿ ಭಾಗಿಯಾಗುತ್ತಿದ್ದಾರೆ. ರಾಜ್ಯದ ಯಾವುದೇ ಮೂಲೆಯಲ್ಲಿ ಸಮಾವೇಶ ನಡೆದರೂ ಅಲ್ಲಿ ಶಿವಕುಮಾರ್ ಉಪ್ಪಿನ್ ಹಾಜರಿರುತ್ತಾರೆ. ಬಸವಣ್ಣನೇ ನಿಜವಾದ ಮಾಧ್ಯಮ, ಬೌದ್ಧ ಧರ್ಮದಂತೆ ಬಸವಣ್ಣನೂ ಜಾಗತಿಕವಾದರೆ ಎಲ್ಲ ಸಮಸ್ಯೆಗಳಿಗೂ ಉತ್ತರ ಸಿಗಲಿದೆ. ಲಿಂಗಾಯತ ಧರ್ಮದ ಹೋರಾಟ ಜಾತಿ ಮತ್ತು  ಬರೀ ಮೀಸಲಾತಿಗೆ ನಡೆದ ಹೋರಾಟವಲ್ಲ. ಬಸವ ಧರ್ಮ ಅಥವಾ ಲಿಂಗಾಯತ ಧರ್ಮ ಅಂದರೆ ಸಂವಿಧಾನದ ರೂಪವಿದ್ದಂತಿದೆ ಎಂದು ಜನ ಜಾಗೃತಿ ಮೂಡಿಸುತ್ತ ಸಾಗಿದ್ದು ಸದ್ಯ ವಿಜಯಪುರದ ಲಿಂಗಾಯತ ಧರ್ಮ ಸಮಾವೇಶದಲ್ಲಿ ಫುಲ್ ಬಿಜಿಯಾಗಿದ್ದಾರೆ. ಆ ಮೂಲಕ ಶಿವಕುಮಾರ್ ಉಪ್ಪಿನ್ ಮಾದರಿ ಶರಣ ಪತ್ರಕರ್ತರಾಗಿದ್ದಾರೆ ಅಂದರೆ ಅತಿಶಯೋಕ್ತಿ ಆಗದು.

-ಸಿದ್ದು ಸಿಂದಗಿ

Related Articles

Leave a Reply

Your email address will not be published. Required fields are marked *

Back to top button