ಬೆಂಗಳೂರ ಅಂದ್ರ ನಮ್ ಕಡಿ ಮಂದೀಗಿ ಎದಿ ಡುಗು ಡುಗು ಅಂತಾದ.!
ಬೆಣ್ಣಿ ತಂದಾಳ ಮಾರಾಕಾ ಯಾರ್ಯಾರ ಬಂದಾರ ಒಯ್ಯಾಕ ಫುಲ್ ವೈರಲ್.!
–ಶಿವಕುಮಾರ್ ಉಪ್ಪಿನ.
ನಮ್ಮಜವಾರಿ ಭಾಷಾಕಾ ಈಗ ಜರ ಕಿಮ್ಮತ್ತು ಬಂದಾದ. ಮೊದಲೆಲ್ಲ ಸಿನಿಮಾದಾಗ ಕಾಮಿಡಿ ಮಾಡ್ಲಾಕ ನಮ್ ಭಾಷೆ ಬಳಸ್ಕೋತಿದ್ರು. ಅದಕ ನಮಗ ಭಾಳ ಬ್ಯಾಸರ ಆತಿತ್ತು. ಈಗ ಟಿವಿ, ಟಿಕ್ ಟಾಕ್ ಹಿಡಕೋಂಡು ಸಿನಿಮಾದಾಗೂ ನಮ್ಮಗಟ್ಟಿ ಭಾಷೆಯ ಜೋರು ಕೇಳ್ಸಾಕತ್ತಾದ. ಹುಡಗಿಯರು ‘ಬೆಣ್ಣಿ ತಂದಾಳ ಮಾರಾಕಾ ಯಾರ್ಯಾರ ಬಂದಾರ ಒಯ್ಯಾಕ..’ ಅನ್ನೋ ಹಾಡಿಗೆ ಹೆಜ್ಜೆ ಹಾಕಿ ಫುಲ್ ವೈರಲ್ ಆಗುತ್ತಿದ್ದಾರೆ!
ನಮ್ಮೂರಾಗ ಹರಿಯೋದಿಲ್ಲಾಂದ್ರೂ ‘ಕಾವೇರಮ್ಮ.. ಕಾಪಾಡಮ್ಮ..’ ಅಂತ ಸಿನಿಮಾದಾಗ ಕೇಳಿ ಕೇಳಿ ಹಂಗೇ ಹಾಡೋರು ನಾವು. ಅದು ಕನ್ನಡದ ನದಿ, ಆ ಮಾತು ಬ್ಯಾರೆ.
ಆದ್ರ, ಮನಗಂಡ ಕೃಷ್ಣಾ ಭೀಮಾ ನಮ್ಮ ಮನಿಗೋಳ ಹಿಂದೇನೇ ಹರಿದಿದ್ದರೂ, Krsಗಿಂತ ದೊಡ್ಡ ಆಲಮಟ್ಟಿ, ಬಸವಸಾಗರ, ತುಂಗಭದ್ರಾ ಡ್ಯಾಮ್ ಇದ್ರೂ ನಾವು ಆ ಕಡಿ ಮಂದಿಯ, ಕಂಡಾಪಟಿ ದೂರದ ಬೆಂಗಳೂರ ಕೇಂದ್ರಿತ ಸಿನಿಮಾಗಳನ್ನ ನೋಡಿ ನೋಡಿ ಕಾವೇರಿ ಮುಂದ ನಮ್ಮದೆಲ್ಲಾ ಮರೆತೇ ಇದ್ವಿ. ಬರಬರತಾ ನಮ್ಮ ಅಸ್ಮಿತೆ ಹೊರಗ ಬರಲಾಕ ಈ ಐವತ್ತು ವರ್ಷಗಳೇ ಬೇಕಾದೂ ನೋಡ್ರಿ!
ಈ ಟಿಕ್ ಟಾಕ್ ಹಾಡು, ಅದರ ಸಾಹಿತ್ಯ ತಲ್ಯಾಗ ಇಟಗೊಂಡು ಹೇಳಾಕತ್ತೀನಿ ಅಂತ ನೀವು, ಅದರಾಗ ಬೆಂಗಳೂರ ಕಡಿಯವರು ತಿಳಕೋಬ್ಯಾಡ್ರಿ. ಒಟ್ಟಾರೆ ನಮ್ಮತನ ಎಲ್ಲ ಮಗ್ಗಲುಗಳಿಂದ ಈಗ ಝರಿಯಂತೆ ಹರದ ಬರಲಾಕತ್ತಿದ್ದಂತೂ ಸುಳ್ಳಲ್ಲ.
–
*ನಮಗ ಭಾಳ ಅನ್ಯಾಯ ಆಗ್ಯಾದ್ರಿ.*
ಅದನ್ನು ಅನುಭವಿಸಿದ ನಮಗಷ್ಟ ಅದರ ತ್ರಾಸ ಗೊತ್ತು. ಏನರೆ ನಮ್ಮಲ್ಲಿನ ಪ್ರತಿಭಾ ಹೊರಗ ಬರಬೇಕಂದ್ರ ನಾವು ಬೆಂಗಳೂರಗೇ ಬರಬೇಕು. ಈಗೇನು ಭಯಾ ಇಲ್ಲ, ಈಗೆಲ್ಲ ಬೆಂಗಳೂರಿನ ನಾಕಾಣೆ ಭಾಗದಾಗ ನಮ್ಮ ಮಂದಿ ಅದಾರ.’ಬೆಂಗಳೂರ ಭಾಳ ಹೈರಾಣಾದ ತಮ್ಮಾ ಜರ ನೋಡಿ ಇರು, ಮೊದಲ ಒಂದ್ ಕಡಿ ಎಲ್ಲೆರೆ ಕೆಲಸ ಹತ್ತು’ ಅಂತ ಕುಂದರ್ಸ್ಕೊಂಡು ಹೇಳ್ತಾರ.
ಇದೇ ಹತ್ತು ಹದಿನೈದು ವರ್ಷದ ಹಿಂದ ಏನಿತ್ರಿ? ವಿಧಾನಸೌಧದ ಮುಂದ ನಮ್ಮ ಭಾಗದ ಜನಾ ಅಡ್ರೆಸ್ ಕೇಳ್ಕೋಂತ ತಿರುಗುತ್ತಿದ್ರ ‘ಎಲ್ಲಿಂದ್ಲೋ ತಪ್ಪಿಸಿಗೊಂಡು ಬಂದಾರ’ ಅನ್ನೋರಂಗ ನಮಗ ನೋಡತಿದ್ರು. ನಮ್ಮ ಭಾಷೆ ಮಾತಾಡಿದ್ರ, ‘ಇವ್ನು ಧಾರವಾಡ ಕಡೆಯವನು’ ಅಂತ ನಾಜೂಕಿನ ‘ಕಡಿಮಿ ನೋಟ’ದಿಂದ ನೋಡೋದಲ್ದೆ ಆಟೋದವರಿಂದ ಹಿಡಿದು ಎಲ್ಲಾರೂ ಒಂದ ಕಡೀಯಿಂದ ಮೆಜೆಸ್ಟಿಕ್ಕಿನ ಸಂದಿಗಳಲ್ಲಿ ಮಾರಿ ಸಿಂಡರಿಸಿಕೊಳ್ತಿದ್ದರು.
ಇನ್ನ ಸಾಂಸ್ಕೃತಿಕ, ಸಿನಿಮಾ ಲೋಕದ ಕೆಲವರಂತೂ ನಮ್ಮನ್ನ ‘ದಡ್ಡರು, ತಿಳಿದಿಲ್ಲ’ ಅನ್ನೋತರ ನಮ್ಮನ್ನ ಕಾಣತಿದ್ರು! ಆದ್ರ ನಾವ್ ‘ಹಂಗಿರಲಿಲ್ರಿ’ ಯಪ್ಪಾ, ನಾವ್ ‘ಛೊಲೊ’ ಇದ್ವಿ. ಬೆಂಗಳೂರಿನ ನಯವಾದ ಮಾತುಗಳು, ಅಲ್ಲಿನ ತಣ್ಣನೆಯ ವಾತಾವರಣಕ ನಾವ್ ಬಿಸಿಲುಂಡ ಜನ ಹೊಂದ್ಲಾಕೇ ಆಗ್ತಿರಲಿಲ್ರಿ. ನಮ್ಮ ಮಾತ ನಿಮಗ ತಿಳೀತಿರಲಿಲ್ರಿ, ನಮಗ ನಿಮ್ಮ ಮಾತ ಬರ್ತಿರಲಿಲ್ಲ. ಒಂದ್ ನಮೂನಿ ಹಿಂಸೆಯದು.
ಭಾಳ ಹೈರಾಣ, ಕೀಳರಿಮೆ, ರೊಟ್ಟಿ ಪಲ್ಯಾನೇ ಬೇಕೆನ್ನಿಸೋ ‘ಹಸುವು’ ಹೊಟ್ಯಾಗ ಕಾಡ್ತಿತ್ತು. ಹಿಂಗಾಗಿ ಇಲ್ಲೀ ತನಕ ಅದೆಷ್ಟು ಸಾವಿರ ಕಲಾವಿದರು, ಹಾಡುಗಾರರು, ಬರೀಬೇಕು ಅನ್ಕೊಂಡವರು, ಸಿನಿಮಾದಾಗ ಮಾಡಬೇಕು ಅಂತ ಬಂದವರು ಹೊಳ್ಳಿ ಊರಿಗೆ ಹೋಗಿ, ಸುಮ್ಮ ಉಗಳ ನುಂಗಕೋಂತ ಜೀವ್ನಾ ತಗದಾರ ಮತ್ತ ಎಷ್ಟೋ ಮಂದಿ ಕನಸುಗಳ ಸಮೇತ ಮಣ್ಣಾಗ್ಯಾರ. ಹಂಗೇ ನೋವು ನುಂಗಿ ಗಟ್ಟಿಯಾಗಿ ಉಳಿದವರು ಕೆಲ ಮಂದಿ ಮಾತ್ರ. ಅವಕಾಶ ಸಿಕ್ಕವರು ಒಂದಷ್ಟು ಬೆಳಕಿಗೆ ಬಂದಾರ. ದೀಪಾ ಹಚ್ಚಿ ಹುಡಕ್ಯಾಡಿ ನೋಡ್ರಿ, ಒಬ್ರರೇ ಸಿನಿಮಾದಾಗ ನಮ್ಮ ಹುಡುಗರು ಸೂಪರ್ ಸ್ಟಾರ್ ಆಗ್ಯಾರೇನು? ಇಲ್ಲಂದ್ರ ಇಲ್ಲ.
ಸ್ಟಾರೇ ಆಗಬೇಕಂತಿಲ್ಲ, ಭಾಳ ಕಲಾವಿದರೂ ಕಣ್ಣಿಗೆ ಬೀಳಲ್ಲ. ಇತ್ತೀಚಿನ ಕೆಲ ವರ್ಷಗಳಲ್ಲಿ ನಮ್ ಭಾಗದ ಮಂದಿ ಜರ ಜರ ಕಾಣ್ಲಿಕತ್ತ್ಯಾರ. ತೆರೆ ಹಿಂದೆ ಲೈಟ್ ಬಾಯ್ ಹಿಡಕೊಂಡು, ತಮ್ಮೂರಾಗಿನ ವ್ಯವಹಾರದಿಂದ ನಿರ್ಮಾಪಕರಾದವರು ಮತ್ತು ಅನೇಕ ತಂತ್ರಜ್ಞರು ಈಗೀಗ ಅಲ್ಲಿಯವರಾಗಿದ್ದಾರೆ. ಕೆಲವರಂತೂ ನಾವು ಆ ಕಡೆಯವರಂತ ಗೊತ್ತಾಗದಿರಲಿ ಅಂತೇಳಿ ಚಂದಗೇ ಬೆಂಗಳೂರ ಭಾಷೆನೇ ರೂಢಿ ಮಾಡ್ಕೊಂಡು, ಬೆಂಗಳೂರ ಮಂದೀಗಿಂತ ಶ್ಯಾಣ್ಯಾ ಆದವರೂ ಇದ್ದಾರ! ಹೊಟ್ಟೆಗಾಗಿ, ಒಳಗಿನ ಕನಸಿಗಾಗಿ ಅಥವಾ ಸ್ವಾರ್ಥಕ್ಕೋ ಹಂಗ ಮಾಡ್ಯಾರ. ಇರಲಿ, ಒಂದ್ ವಿಡಿಯೋ ಹಾಕಲಿಕ್ಕ ಹೋಗಿ ಹೀಂಗ ಬರಕೋಂತ ಹೊಂಟೀನಿ.
*ಕಾರಣ;*
ನಾನೂ ೧೯೯೭ರಲ್ಲೇ ಬೆಂಗಳೂರಿಗೆ ಎಂಟ್ರಿ ಕೊಟ್ಟು, ಕೆಲ ಪತ್ರಿಕೆಗಳಿಗೆ ಕೆಲಸ ಮಾಡಿದೆ. ಅಲ್ಲೇ ಇದ್ದಾಗಲೇ ೧೯೯೮ರಲ್ಲಿ ನನ್ನ ‘ದೆವ್ವ’ ಕವನ ಸಂಕಲನವೂ ಬಂತು. ರವಿ ಬೆಳಗೆರೆ ಆಪ್ತತೆಯಿಂದಲೇ ಬೆನ್ನುಡಿ ಬರೆದುಕೊಟ್ಟಿದ್ದಲ್ಲದೇ ನನ್ನನ್ನ ಈಗಲೂ ಪ್ರೀತಿಯಿಂದಲೇ ಕಾಣುತ್ತಿದ್ದಾರೆ.
ಜೋಗಿ ಅವರು ಕವನದ ರೂಪದಲ್ಲಿಯೇ ‘ದೆವ್ವ’ಕ್ಕೆ ಆಶಿಸಿದ್ದರು. ಪ್ರತಿಭಾ ನಂದಕುಮಾರ್ ಮಮತೆ ತೋರಿದ್ದರು. ಬರಹಗಾರರ, ಪತ್ರಿಕಾ ವಲಯದಲ್ಲಿ ಸಹ್ಯ ವಾತಾವರಣವಿತ್ತು. ಇದೆ ಕೂಡ. ಸುದ್ದಿ ಚಾನೆಲ್ ಬಂದ ಮೇಲೆ ನಮ್ಮೂರುಗಳು ಎಲ್ಲ ಕಡೆ ಕಂಡವು. ಮಾಧ್ಯಮಗಳಲ್ಲಿ ಈಗಲೂ ಬರೆಯುವವರಿಗೆ ಅವಕಾಶಗಳಿವೆ. ನನಗೆ ‘ವಿಜಯ ಕರ್ನಾಟಕ’ದಲ್ಲಿ ಕೆಲ್ಸಾ ಕೊಟ್ಟವರೇ ವಿಶ್ವೇಶ್ವರ ಭಟ್ ಸರ್. ಜತೆಗಾರರಾಗಿದ್ದವರು ಕೆ.ಕರಿಸ್ವಾಮಿ, ಜೆಪಿಯಂಥವರು. ವಿಶೇಷ ಅಂದ್ರ, ಇವರೆಲ್ಲರೂ ತಮ್ಮ ತಮ್ಮ ಊರು ಬಿಟ್ಟು ಬೆಂಗಳೂರಿಗೆ ಬಂದವರೇ.
ನಾನು ಮೊದಲು ಬೆಂಗಳೂರಿಗೆ ಕಾಲಿಟ್ಟಿದ್ದು ಬಹುಶಃ ೧೯೯೩ರ ಆಸುಪಾಸಿರಬೇಕು. ನಮ್ಮ ಮಾವ ಗುರುರಾಜ್ ಪಟ್ಟಣಶೆಟ್ಟಿ ಆಗ ಅಲ್ಲಿದ್ದರು. ನನ್ನ ಅಕ್ಷರ ಗುರು ಲಂಕೇಶರ ‘ನಂ.೯, ಪೂರ್ವಾಂಜನೆಯ ಗುಡಿ ರಸ್ತೆ, ಬಸವನ ಗುಡಿ ಬೆಂಗಳೂರು’ ಎಂಬ ‘ಆಗಿನ ಭೂಮಿ ಮೇಲಿನ ಸೃಜನಲಶೀಲ ಲೋಕ’ ಎನ್ನಿಸಿಕೊಳ್ಳಬಹುದಾದ ‘ಲಂಕೇಶ ಪತ್ರಿಕೆ’ ಕಚೇರಿಯನ್ನ ಎದೆ ಬಡಿತದ ಧಾವಂತ ಮತ್ತು ಬೆರಗುಗಣ್ಣಿನಿಂದ ನೋಡಿದ್ದೆ. ಅವರಿಗೊಂದು ಪತ್ರ ಬರೆದು, ಭೇಟಿಯಾಗಲು ಹೋಗಿ ಬೈಸಿಕೊಂಡಿದ್ದೆ. ಹಾಗೆ ಬೈದದ್ದನ್ನು ಅವರು ಮುಂದಿನ ವಾರ ‘ಮರೆಯುವ ಮುನ್ನ’ದಲ್ಲಿ ಬರೆದಿದ್ದರು. ಇದಾಗಿ ನಾನು, ಕರಿಸ್ವಾಮಿ, ಜೆಪಿ, ಎಚ್.ಎನ್.ಗಾಯತ್ರಿ (ಚೇತನಾ ತೀರ್ಥಹಳ್ಳಿ) ಅವರೆಲ್ಲ ಕಾವ್ಯ ಕಮ್ಮಟಕ್ಕೆಂದು ಮೈಸೂರಲ್ಲಿ ಸೇರಿದಾಗ ‘ಹೀಂಗ’ ಲಂಕೇಶರ ಕೈಲಿ ನಾನು ಬೈಸಿಕೊಂಡಿದ್ದಕ್ಕೆ ಹೀರೋ ಆಗಿದ್ದೆ.
ನಾವೆಲ್ಲ ಆಗ ಪಿಯುಸಿ. ಬರೋವರ್ಗೂ ನನ್ನ ‘ಏ ಬಾರೊ ಮಾರಾಯ ಲಂಕೇಶ್’ ಅಂತ್ಲೇ ಕರದ್ರು! ಇದೆಲ್ಲ ಹೇಳಲೇ ಬೇಕಿತ್ತು. ಯಾಕಂದ್ರ, ಬರಹಗಾರರಾಗಿದ್ರೆ ಊರಲ್ಲೇ ಕುಂತು ಬರೀಬಹುದು. ಬೆಂದು ಬೇಂದ್ರೆ ಆಗಬಹುದೇನೊ! ಕೃಷಿ ಆಗಿದ್ರೆ ಅಲ್ಲೇ ಮಾಡಬಹುದು. ಆದರೆ, ಸಿನಿಮಾ ಸೇರಿ ಬೇರೆ ಬೇರೆ ಸೃಜನಶೀಲ ತುಡಿತಗಳಿಗೆ ಸಿಕ್ಕವರು ಭಾಳ ಹೈರಾಣ ಆಗ್ಯಾರ ಅನ್ನೋದಕ್ಕ ಇಷ್ಟು ಬರೀಬೇಕಾಗ್ಯಾದ.
*ಯಾಕಂದ್ತ;*
ಈಗೆಲ್ಲ ಟಿಕ್ ಟಾಕ್, ಯೂಟ್ಯೂಬ್, fb ಏನೇನೊ ಅದಾವು. ಆಗಿನ ಪರಿಸ್ಥಿತಿ ಹೆಂಗ ಇತ್ತು ಅಂತ ಹೇಳಾಕ ಭಾಳ ಕಷ್ಟ. ಆ ‘ಉಪಾಸ ವನವಾಸ’, ಊರ ಕಡಿ ಸೆಳೆತ, ಇಲ್ಲಿ ಇರಬೇಕೊ ಹೋಗ್ಬೇಕೊ ಅನ್ನೋ ಗೊಂದಲ ಅನುಭವಿಸಿದವರಿಗೇ ಗೊತ್ತು. ಇದು ಬರೀ ಉಕ ಮಂದಿಗಲ್ಲ ಪತ್ರಿಕಾ ಕ್ಷೇತ್ರವೂ ಹಿಡಕೊಂಡು ಎಲ್ಲದರ ಸಲುವಾಗಿ ಕರ್ನಾಟಕದ ಹಳ್ಳಿಗಳಲ್ಲಿಂದ ಮಂಗಳೂರು, ಶಿವಮೊಗ್ಗೆ, ಶಿರಸಿ-ಕಾರವಾರಗಳಿಂದ ಬೆಂಗಳೂರಿಗೆ ಬಂದ ‘ಸಹಜ ಪಾರದರ್ಶಕ’ ನಾಟಿ ಹುಡುಗರ ಕತೆಯೂ ಹೌದು.
ಇರಲಿ, ಇನ್ನಾದರೂ ನಮ್ಮ ಉತ್ತರ ಕರ್ನಾಟಕ ಬೆಳೀಲಿ. ಸರಕಾರ ಮೈಸೂರು, ಚಿಕ್ಕಬಳ್ಳಾಪುರ ಅಂತ ಅಷ್ಟೇ ಅನ್ನದೇ *ಹುಬ್ಬಳ್ಳಿಯಾಗ್ನೂ ಯಾಕ ಫಿಲ್ಮ್ ಸಿಟಿ ಮಾಡಬಾರದು?* ಬೆಂಗಳೂರಾಗ ನಿಮ್ಮ ಮನಿ ಅದಾವು ‘ಹೊಳ್ಳಿ ಸಂಜೀಕಿ ಹೋಗಿ ರೆಸ್ಟ್ ಮಾಡೋಣ’ ಅಂತ ಅನ್ಕೋಂಡ್ರ ಎಂಟುನೂರು, ಐನೂರು ಕಿಲೋಮೀಟರ್ ದವ್ರು ನಾವು ಹೆಂಗ್ ಮಾಡೋದಂತ ಒಮ್ಮೆಯಾದ್ರೂ ಯಾರರೇ ವಿಚಾರ ಮಾಡೀರೇನು? ನಮ್ಮವರ ಮನ್ಯಾಗ ಬಡತನ ಬೇರೆ. ನಿಮಗ ಮನಿಗಳಾದರೂ ಅದಾವು. ನಮ್ಮೂಹೊಳಿ ಬಂದು ಹರ್ಕೊಂಡು ಹೋಗ್ಯಾವು! ಅದಕ್ಕೇ ನಮ್ಮ ಮಂದಿ ಬ್ಯಾರೇ ರಾಜ್ಯಾ ಮಾಡ್ಕೋಬೇಕಂತ ಕಾಟರಸಿ ಒದರಾಡೋದು. ನಿಮಗ ಅನಸ್ತದ ಅಖಂಡ ಕರ್ನಾಟಕ ಅಂತ. ಆದ್ರ ಆ ‘ಅಖಂಡ ಕರ್ನಾಟಕ’ದೊಳಗಿರೋವ್ರಿಗೆ ಏನ ಸಿಕ್ಕದ ಹೇಳ್ರಿ? ನಿಮ್ ಕಡೆ ಹೆಂಗದ ನಮ್ಮ ಕಡೆ ಹೆಂಗದ ನೋಡ್ರಿ. ನಮ್ಮ ಕಡೀಗಿ ಈಗೀಗ ನೀವು ಬರ್ತಾ ಇದೀರಿ. ಜೀವನದಾಗೇ ಉಕ ಮುಖ ನೋಡದವರು ನೋಡ್ಲಿಕತ್ತಾರ.
ಮಾತೆತ್ತಿದ್ರ ‘ಏನ್ ಬಿಸ್ಲಪ್ಪಾ ಅಲ್ಲಿ ಮಾರಾಯಾ, ಏನ್ ಧೂಳು ಆ ಕಡೆಗೆ’ ಅಂತೀರಿ. ನಮ್ಮ ಬಿಸಿಲೇ ನಮಗ ಬೆಳದಿಂಗಳು. ಏನ್ ಮಾಡೋದು. ಬಿಸಿಲುಂಡ ಮೈ ನಮ್ದು, ಈಗರೇ ನಾವು ಸ್ವತಕ್ಕೂ ಬದಲಾಗೀವಿ ಮತ್ತ ನೀವು ನಮಗ ನೋಡೋ ಧಾಟಿನೂ ಬದಲಾಗ್ಯಾದ! ಇದೇ ದೊಡ್ಡದು. ಇದೇ ನಿಜವಾದ ಅಖಂಡತೆ. ನಮಗೂ ಸೌಲಭ್ಯ ಕೊಟ್ರ ನಾವೂ ಛಂದ ಇರ್ತೀದ್ದೇವು. ಇದು ನನ್ನೊಳಗಿನದು ಮಾತ್ರ ಅಲ್ಲ, ಎಲ್ಲಾ ನಮ್ಮ ಮಂದಿಯ ‘ಒಳಗಿನ ದನಿ’ ಅಂತ ತಿಳಿದೀನಿ.
ಭಾಳ ದಿನದಿಂದ ಕಾಡಾಕತ್ತಿತ್ತು. ಈಗ ‘ಬೆಣ್ಣಿ’ ಹಾಡಿನಿಂದ ಬರೆಯೋವಂಗ ಆಯ್ತು. ಮುಂದ ಹಿಂಗೇ ತುಪ್ಪ ಆಗೋವಂಗ್ ನಮ್ಮ ನೆಲ ಆದ್ರ ಮಾಡಿದವರಿಗೆ ಪುಣ್ಯಾ ಬರ್ತದ. ನಮ್ಮ ಮಂದೀನೂ ಛಂದ ಇರ್ಲಾಕ ಸಾಧ್ಯ ಆಗ್ತದ. ಅಲ್ಲೇನ್ರಿ?
ಯಾರಿಗೂ ನೋವು ಮಾಡೋ ಉದ್ದೇಶ ನನಗಿಲ್ರಿ, ಇರೋ ವಿಚಾರ ಹೇಳ್ದೆರಿ.
ನೀವೇ ನಮ್ಮ ಜಾಗದಾಗ ಇದ್ರ ಏನ್ ಮಡ್ತಿದ್ರಿ? ನಿಂತು ನೋಡ್ರಿ ನಿಜ ಅನ್ನಿಸ್ತಾದ. ನಾವು ಖರೆ ಖರೆ ಭಾಳ ಹೈರಾಣಾಗೀವ್ರಿ, ಜೀವಾ ಸುಟಗೋಂಡೀವ್ರಿ. ನಮ್ಮ ರಾಜಕಾರಣಿಗಳನ್ನ ಬಿಡ್ರಿ, ಅವರಿಗೆ ಅವ್ರು ಉದ್ಧಾರ ಆಗೋದು ಹತ್ತ್ಯಾದ. ನೀವು ಈಗಿದ್ದಂಗ ನಮ್ಮ ಜತಿ ಛಂದ ಇರ್ರಿ, ಸಾಕು. ನಮ್ಮದು ನಾವ್ ನೋಡ್ಕೊಳ್ಳೋದು, ಅದು ಬಿಟ್ರ ಮತ್ತೇನದ’ದಾರಿ’.
ಓದಿದ್ದಕ್ಕ ಧನ್ಯವಾದ ರೀ. ಎಲ್ಲರಿಗೂ ಶರಣ್ರಿ..