ಪ್ರತಿ ಜೀವಿಗೆ ನೀರು ಅತ್ಯವಶ್ಯಕ -ಬಸಪ್ಪ ತಳಬಿಡಿ
ಯಾದಗಿರಿಃ ಪರಿಸರದ ಪ್ರತಿಯೊಂದು ಜೀವಿಗೆ ನೀರು ಅತ್ಯವಶ್ಯಕವಾಗಿದೆ. ಸೃಷ್ಠಿಯಲ್ಲಿ ಸಿಗುವ ನೀರನ್ನು ಸಂರಕ್ಷಣೆ ಮಾಡಿದಾಗ ಮಾತ್ರ ಮುಂದಿನ ಪೀಳ್ಗೆಗೆ ನೀರಿನ ಭವಣೆ ನೀಗಿಸಿದಂತಾಗುತ್ತದೆ ಎಂದು ಸಮುದಾಯ ಬಲವರ್ಧನ ಅಧಿಕಾರಿ ಬಸಪ್ಪ ತಳಬಿಡಿ ಹೇಳಿದರು.
ನಗರದ ಚಿರಂಜೀವಿ ಮೆಥೋಡಿಸ್ಟ್ ಹೈಸ್ಕೂಲಿನಲ್ಲಿ ಸೋಮವಾರದಂದು ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ಸಂಸ್ಥೆ ನಿಯಮಿತ, ಉತ್ತರ ಕರ್ನಾಟಕ ನಗರ ವಲಯ ಬಂಡವಾಳ ಹೂಡಿಕಾ ಕಾರ್ಯಕ್ರಮ, ನಗರ ಸಭೆ ಯಾದಗಿರಿ ಮತ್ತು ಗ್ರಾಮೀಣ ಮಹಿಳಾ ಅಭಿವೃದ್ಧಿ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ನೀರು ಸಂರಕ್ಷಣೆ ಮತ್ತು ನೈರ್ಮಲ್ಯ ಶುಚಿತ್ವ ಕುರಿತು ಶಾಲಾ ಮಕ್ಕಳಿಗೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಸೃಷ್ಠಿಯಲ್ಲಿನ ನೀರು ಅಮೂಲ್ಯವಾಗಿದೆ. ನಾವು ನೀರು ಪೋಲಾಗದಂತೆ ನಮಗೆಷ್ಠು ಅವಶ್ಯಕವೋ ಅಷ್ಟನ್ನೆ ಬಳಕೆ ಮಾಡಿದರೆ, ಭವಿಷ್ಯದಲ್ಲಿ ಉದ್ಭವಿಸುವ ನೀರಿನ ಭವಣೆ ತಪ್ಪಿಸಲು ಸಾದ್ಯ. ಇಲ್ಲವಾದಲ್ಲಿ ನೀರಿಗಾಗಿ ಪ್ರತಿಯೊಂದು ಜೀವಿ ಪರಿತಪಿಸಬೇಕಾಗುತ್ತದೆ.
ನಮ್ಮ ಬದುಕಿಗೆ ನೀರು ಎಷ್ಟು ಮುಖ್ಯವೋ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅವಶ್ಯಕ. ಅದಕ್ಕಾಗಿ ಸರ್ಕಾರ ಒದಗಿಸುವ ನೆರವು ಪಡೆದು ಪ್ರತಿಯೊಂದು ಮನೆಯಲ್ಲಿ ಶೌಚಾಲಯ ನಿರ್ಮಾಣ ಮಾಡಬೇಕು ಎಂದು ಮನವಿ ಮಾಡಿದರು.
ಶಾಲಾ ಶಿಕ್ಷಕರಾದ ಕುಸುಮಾ ಮತ್ತು ಸುನೀಲ ಕುಮಾರ ಮಾತನಾಡಿ, ವಿಶ್ವದಲ್ಲಿ ಇವತ್ತು ಶುದ್ಧವಾದ ನೀರಿಗಾಗಿ ಪರದಾಡುವಂತಹ ದೃಶ್ಯ ಕಾಣುತ್ತಿದ್ದೇವೆ. ನಮ್ಮ ದೇಹಕ್ಕೆ ಕುಡಿಯುವ ನೀರು ಅತ್ಯವಶ್ಯಕವಾಗಿದ್ದು, ಅದನ್ನು ಪೋಲಾಗದಂತೆ ಮಿತವಾಗಿ ಬಳಕೆ ಮಾಡಿಕೊಳ್ಳಲು ವಿದ್ಯಾರ್ಥಿಗಳು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು ಎಂದು ಕರೆ ನೀಡಿದರು.
ಸಹಶಿಕ್ಷಕಿ ವಿಕ್ಟೋರಿಯಾ ಮೇಡಂ ಪ್ರಾಸ್ತವಿಕವಾಗಿ ಮಾತನಾಡಿ, ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚವಾಗಿಡುವುದರ ಜೊತೆಗೆ ಅಮೂಲ್ಯವಾದ ನೀರಿನ ಸಂರಕ್ಷಣೆಯತ್ತ ಗಮನ ನೀಡಬೇಕು. ಬೇಸಿಗೆ ಪ್ರಾರಂಭಗೊಂಡಿದ್ದು, ನೀರಿನ ಬರಬಾರದಿರಲು ಪೋಲಾಗದಂತೆ ನೋಡಿಕೊಳ್ಳಬೇಕು ಎಂದರು.
ಸಮಾರಂಭದಲ್ಲಿ ಯೋಜನಾ ಸಂಯೋಜಕ ದೇವಿಂದ್ರಪ್ಪ ಬೋಯಿನ್ ಚಿಂತಕುಂಟಾ, ದೇವಮ್ಮ ಅಬ್ಬೆತುಮಕೂರು ಇತರರಿದ್ದರು.