ಕೊರೊನಾ ಎಫೆಕ್ಟ್ಃ ಶ್ರೀಶೈಲಕ್ಕೆ ಬರುವ ಯಾತ್ರಾರ್ಥಿಗಳು ವಾಪಸ್ ತೆರಳುವಂತೆ ಮನವಿ
ವಿವಿಡೆಸ್ಕ್ಃ: ಜಗತ್ತಿನಾದ್ಯಂತ ಕೊರೊನಾ ರೋಗ ತಾಂಡವವಾಡುತ್ತಿದ್ದು, ಅದರ ನಿಯಂತ್ರಣಕ್ಕೆ ಮುನ್ನೆಚ್ಚರಿಕೆವಹಿಸಲಾಗುತ್ತಿದೆ, ಅದರಂತರ ನಮ್ಮ ದೇಶದಲ್ಲೂ ಮಾರಕ ಕೊರೊನಾ ವೈರಸ್ ಹಲವಾರು ಕಡೆಗಳಲ್ಲಿ ಹರಡುತ್ತಿರುವುದರಿಂದ ಶ್ರೀಶೈಲದ ಯುಗಾದಿ ಜಾತ್ರೆಯಲ್ಲಿ ಪಾಲ್ಗೊಳ್ಳಲು ಆಗಮಿಸುವ ಭಕ್ತರು ತಮ್ಮ ಯಾತ್ರೆಯನ್ನು ಸ್ಥಗಿತಗೊಳಿಸುವದು ಒಳಿತು ಎಂದು ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ ತಿಳಿಸಿದ್ದಾರೆ.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕೊರೊನಾ ಸೋಂಕು ಒಂದು ಮಾರಣಾಂತಿಕ ರೋಗಾಣು ಆಗಿದ್ದು, ಸೋಂಕು ತಗುಲಿದ ಒಬ್ಬ ವ್ಯಕ್ತಿಯು ಜನರ ಸಮ್ಮುಖದಲ್ಲಿ ಸೀನು ಅಥವಾ ಕೆಮ್ಮಿದರೆ ಅದು ಅಲ್ಲಿರುವ ನೂರಾರು ಜನರಿಗೆ ಹರಡುವ ಸಾಧ್ಯತೆ ಇದೆ.
ಕಾರಣ ಸೋಂಕು ತಗುಲಿದ ನಂತರ ಇದನ್ನು ತಡೆಗಟ್ಟಲು ಯಾವುದೇ ಸಮರ್ಪಕ ಔಷಧ ಇಲ್ಲ. ಇದು ಎಲ್ಲಿಯೂ ಹರಡದಂತೆ ಇದರ ವಿರುದ್ಧ ಹೋರಾಡುವುದು ಎಲ್ಲರ ಕರ್ತವ್ಯವಾಗಿದೆ.
ಈಗಾಗಲೇ ಆಗಮಿಸಿದ್ದರೆ ಕುಡಲೇ ದೇವರ ದರ್ಶನ ಪಡೆದು ವಾಪಸ್ ಹೋಗಬೇಕು. ಸಾಂಪ್ರದಾಯಿಕ ಪೂಜಾವಿಧಿವಿಧಾನ ಇದ್ದವರು ಶೀಘ್ರದಲ್ಲಿ ವಾಹನ ಮೂಲಕ ಆಗಮಿಸಿ ಮುಗಿಸಿಕೊಂಡು ತಮ್ಮೂರಿಗೆ ತೆರಳಬೇಕು.
ಜಾತ್ರಾ ಅಂಗವಾಗಿ ಆಯೋಜಿಸಲಾದ ಸಿಎಂ ಯಡಿಯೂರಪ್ಪನವರ ಕಾರ್ಯಕ್ರಮವು ಸಹ ರದ್ದುಗೊಳಿಸಲಾಗಿದೆ. ದಾರಿಯಲ್ಲಿದ್ದ ಯಾತ್ರಾರ್ಥಿಗಳು ಅಲ್ಲಿಂದಲೇ ಶ್ರೀಶೈಲ ಮಲ್ಲಿಕಾರ್ಜುನ ಸ್ಮರಿಸಿ ಕೂಡಲೇ ಕೊರೊನಾ ರೋಗಾಣು ಆರ್ಭಟ ನಿಲ್ಲಿಸಿ ಮುಂದೆ ಬರಲು ಆರೋಗ್ಯಕರ ವಾತಾವರಣ ಕಲ್ಪಿಸಿದ್ದಲ್ಲಿ ಮತ್ತೊಮ್ಮೆ ಬರುವೆವು ಎಂದು ಅಲ್ಲಿಂದಲೇ ವಾಪಾಸ್ ತಮ್ಮ ತಮ್ಮ ಊರಿಗೆ ಸುರಕ್ಷಿತವಾಗಿ ತೆರಳುವಂತೆ ಅವರು ಕೋರಿದ್ದಾರೆ.
ಹೀಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ನೀಡಿದ ಆದೇಶ ಕ್ರಮಗಳನ್ನು ಅನುಸರಿಸಬೇಕಿದೆ ಎಂದು ಸಹ ಅವರು ತಿಳಿಸಿದ್ದಾರೆ ಎನ್ನಲಾಗಿದೆ.