ಶೌರ್ಯ ಮೆರೆದ ಸಮುದಾಯದ ಕೈಗಳು ಪೆನ್ನು ಹಿಡಿಯಲಿ-ದರ್ಶನಾಪುರ
ಶಿಕ್ಷಣ ಸಮುದಾಯದ ಪರಿವರ್ತನೆಗೆ ನಾಂದಿ-ದರ್ಶನಾಪುರ
ಯಾದಗಿರಿ,ಶಹಾಪುರ: ವಾಲ್ಮೀಕಿ ಸಮುದಾಯ ಶೌರ್ಯ, ಸಾಹಸ ಪ್ರವೃತ್ತಿಗೆ ಹೆಸರಾದ ಸಮಾಜ. ಆದರೆ ಶೈಕ್ಷಣಿಕವಾಗಿ ಇನ್ನೂ ಸಾಕಷ್ಟು ದಾರಿ ಕ್ರಮಿಸಬೇಕಾಗಿದೆ. ಹಿಂದೆ ಖಡ್ಗ ಕೈಯಲ್ಲಿ ಹಿಡಿದು ಶೂರತನ ಮೆರೆದ ಸಮುದಾಯದಲ್ಲಿ ಇಂದು ಪೆನ್ನು ಹಿಡಿಯುವ ಕೈಗಳು ಹೆಚ್ಚಾಗಲಿ. ಶಿಕ್ಷಣ ಸಮಾಜದ ಪರಿವರ್ತನೆಗೆ ನಾಂದಿಯಾಗಲಿದೆ ಎಂದು ಶಾಸಕ ಶರಣಬಸಪ್ಪ ದರ್ಶನಾಪುರ ತಿಳಿಸಿದರು.
ನಗರಸಭೆಯ ಆವರಣದಲ್ಲಿ ಭಾನುವಾರ ತಾಲ್ಲೂಕು ಆಡಳಿತ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನಗರದಲ್ಲಿ ವಾಲ್ಮೀಕಿ ಭವನ ನಿರ್ಮಾಣಕ್ಕೆ 1 ಕೋಟಿ ಅನುದಾನ ಬಿಡುಗಡೆಯಾಗಿ ಹಲವು ವರ್ಷಗಳೇ ಕಳೆದಿವೆ. ಜಾಗದ ಸಮಸ್ಯೆಯನ್ನು ಬಗೆಹರಿಸಿದ್ದು ಇನ್ನೂ 15 ದಿನದಲ್ಲಿ ವಾಲ್ಮೀಕಿ ಸಮುದಾಯದ ಮುಖಂಡರ ಜೊತೆ ಚರ್ಚಿಸಿ ಅಡಿಗಲ್ಲು ಸಮಾರಂಭ ನೆರವೇರಿಸಲಾಗುವದು.
ಪರಿಶಿಷ್ಟ ಪಂಗಡದ ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ಅರ್ಹ ಫಲಾನುಭವಿಗಳನ್ನು ಗುರುತಿಸಿ ಸುಮಾರು 4 ಕೋಟಿ ವೆಚ್ಚದಲ್ಲಿ ಕೊಳವೆಬಾವಿ ಕೊರೆಸುವ ಕಾರ್ಯ ನಿರಂತರ ಸಾಗಿದೆ. ಅಲ್ಲದೆ ಈಗಾಗಲೇ ತಾಲ್ಲೂಕಿನ ವನದುರ್ಗ, ನಗನೂರ, ಮುಡಬೂಳ, ದಂಡ ಸೊಲ್ಲಾಪುರ, ನಾಗನಟಗಿ ಗ್ರಾಮದಲ್ಲಿ ತಲಾ 5 ಲಕ್ಷ ವೆಚ್ಚದಲ್ಲಿ ವಾಲ್ಮೀಕಿ ಭವನ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ. ಈಗಾಗಲೇ ಅವುಗಳು ಮುಕ್ತಾಯದ ಹಂತಕ್ಕೆ ಬಂದಿವೆ ಎಂದರು.
ವಾಲ್ಮೀಕಿ ರಾಮಾಯಣದ ಬಗ್ಗೆ ಚಿಂತಕ ಭಾಸ್ಕರರಾವ ಮುಡಬೂಳ ಉಪನ್ಯಾಸ ನೀಡುತ್ತಾ, ರಾಮಾಯಣದ ಕಥೆಯಲ್ಲಿ ಪ್ರತಿಯೊಂದು ಪಾತ್ರದಲ್ಲಿ ಮಾನವ ಸಂಕುಲದ ಬೇರುಗಳಿವೆ. ಸಹೋದರತ್ವದ ಬಗ್ಗೆ ಲಕ್ಷ್ಮಣ, ಭರತ ರಾಜ್ಯಭಾರ ನಡೆದ ಸನ್ನಿವೇಶ ಹೀಗೆ ಧರ್ಮವನ್ನು ಬಿಟ್ಟು ನಾವು ಬದುಕು ಸಾಗಿಸಬಾರದು ಎಂಬ ತತ್ವ ಅದರಲ್ಲಿ ಅಡಗಿದೆ.
ಅಲ್ಲದೆ ವಾಲ್ಮೀಕಿ ಸಮುದಾಯ ಸುರಪುರ ಸಂಸ್ಥಾನ ರಾಜರ ಕೊಡುಗೆ ಈ ದೇಶ ಎಂದಿಗೂ ಮರೆಯಲು ಸಾಧ್ಯವಿಲ್ಲ. ದಿಲ್ಲಿ ಸಾಮ್ರಾಟ ಔರಂಗಜೇಬನನ್ನು ಸೋಲಿಸದಿದ್ದರೆ ಭಾರತದ ಮುಕುಟದಂತೆ ಇರುವ ದೇವಸ್ಥಾನಗಳು ನೆಲ ಸಮವಾಗುತ್ತಿದ್ದವು. ಅಲ್ಲದೆ ಸ್ವಾತಂತ್ರ್ಯ ಸಂಗ್ರಾಮದಲ್ಲಿ ದಕ್ಷಿಣ ಭಾರತದ ನೇತೃತ್ವವನ್ನು ರಾಜಾ ನಾಲ್ವಡಿ ವೆಂಕಟಪ್ಪ ನಾಯಕ ವಹಿಸಿದ್ದನ್ನು ಇತಿಹಾಸಕಾರರು ಸಮರ್ಪಕವಾಗಿ ನ್ಯಾಯ ದೊರಕಿಸಿಕೊಡುವಲ್ಲಿ ಸೋತಿದ್ದಾರೆ.
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನಿಗೆ ಬ್ರಿಟಿಷರ್ ವಿರುದ್ದ ಯುದ್ಧಭೂಮಿಯಲ್ಲಿ ಹೋರಾಡಲು ಬೇಡರ ಸೈನಿಕ ಪಡೆಯನ್ನು ನೀಡಿದ ಕೊಡುಗೆ ಇತಿಹಾಸ ಎಂದು ಮರೆಯುವುದಿಲ್ಲ. ಇಂತಹ ರೋಮಾಂಚನ ಸಮುದಾಯ ಇಂದು ಶೈಕ್ಷಣಿಕವಾಗಿ ಮುಂದೆ ಬರಬೇಕು ಎಂದರು.
ಈ ಸಂದರ್ಭದಲ್ಲಿ ತಹಶೀಲ್ದಾರ ಸಂಗಮೇಶ ಜಿಡಗೆ, ಪೌರಾಯುಕ್ತ ಬಸವರಾಜ ಶಿವಪೂಜೆ, ತಾಲ್ಲೂಕು ಸಮಾಜ ಕಲ್ಯಾಣ ಅಧಿಕಾರಿ ರಾವುತಪ್ಪ ಹವಾಲ್ದಾರ, ಶಶಿಕಾಂತ ಕಟ್ಟಿಮನಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ನಾಗಣ್ಣ ಪೂಜಾರಿ, ತಾಲ್ಲೂಕು ವಾಲ್ಮೀಕಿ ಸಂಘದ ಅಧ್ಯಕ್ಷ ಮರೆಪ್ಪ ಪ್ಯಾಟಿ ಶಿರವಾಳ, ಕುರುಬ ಸಮುದಾಯ ಮುಖಂಡ ಗಿರೆಪ್ಪಗೌಡ ಬಾಣತಿಹಾಳ, ಕೋಲಿ ಸಮಾಜದ ಮುಖಂಡ ಅಯ್ಯಣ್ಣ ಕನ್ಯಾಕೋಳೂರ, ನಾಗಪ್ಪ ಕಾಶಿರಾಜ, ದಲಿತ ಮುಖಂಡ ನೀಲಕಂಠ ಬಡಿಗೇರ ಹಾಗೂ ವಾಲ್ಮೀಕಿ ಸಮುದಾಯದ ಮುಖಂಡರಾದ ಹಣಮಂತರಾಯ ದೊರೆ ದಳಪತಿ, ಗೌಡಪ್ಪಗೌಡ ಆಲ್ದಾಳ, ಹನುಮೇಗೌಡ ಮರಕಲ್, ರಾಜಾ ಮಲ್ಲಪ್ಪ ನಾಯಕ, ಆರ್.ಚೆನ್ನಬಸ್ಸು ವನದುರ್ಗ, ಶೇಖರ ದೊರೆ ಕಕ್ಕಸಗೇರಾ, ರವಿಕುಮಾರ ಯಕ್ಷಿಂತಿ, ಯಲ್ಲಯ್ಯ ನಾಯಕ ವನದುರ್ಗ, ಸತ್ಯನಾರಾಯಣ ಅನವಾರ, ಹಣಮಂತರಾಯ ಟೋಕಾಪುರ, ತಿರುಪತಿ ಯಕ್ಷಿಂತಿ, ಜಯರಾಜ ದೊರೆ, ರಾಘವೇಂದ್ರ ಯಕ್ಷಿಂತಿ, ಹಯ್ಯಾಳಪ್ಪ ಹಳಿಸಗರ, ಮಲ್ಲಪ್ಪ ಅರಳಿಹಳ್ಳಿ, ಹೊನ್ನಪ್ಪಗೌಡ ಕೊಳ್ಳುರ, ಭೀಮಣ್ಣ ಆಲ್ದಾಳ, ಅಮರೇಶ ನಾಯಕ ಇಟಗಿ, ಶರಣಪ್ಪ ಪ್ಯಾಟಿ ಇದ್ದರು.
ವಾಲ್ಮೀಕಿ ಸಮುದಾಯಕ್ಕೆ ಕುಡಿತ ಶಾಪ
ಶಹಾಪುರ: ವಾಲ್ಮೀಕಿ ಸಮುದಾಯಕ್ಕೆ ಕುಡಿತ ಶಾಪವಾಗಿದೆ. ಕುಡಿತದಿಂದ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಮನುಕುಲದ ಆರಾಧ್ಯದೈವ ರಾಮನ ಬದುಕಿನ ಬಗ್ಗೆ ಚಿತ್ರಣ ರೂಪಿಸಿದ ಮಹರ್ಷಿ ವಾಲ್ಮೀಕಿಯ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಮುದಾಯದವರು ಕುಡಿತದ ದುಶ್ಚಟದಿಂದ ದೂರವಾಗುತ್ತೇನೆ ಎಂಬ ಶಪಥ ಮಾಡಬೇಕು ಎಂದು ನೆರೆದ ಜನ ಸಮುದಾಯದ ಮುಂದೆ ಚಿಂತಕ ಭಾಸ್ಕರರಾವ ಮುಡಬೂಳ ಮನವಿ ಮಾಡಿದರು.
ಆಗ ಶಾಸಕ ಶರಣಬಸಪ್ಪ ದರ್ಶನಾಪುರ ವಾಲ್ಮೀಕಿ ಸಮುದಾಯ ಒಂದೇ ಅಲ್ಲ ಇಡೀ ಎಲ್ಲಾ ಸಮುದಾಯ ಶಪಥ ಮಾಡಲಿ ಎಂದು ಧ್ವನಿಗೂಡಿಸಿದಾಗ ಸಭೆ ನಗೆಗಡಲಲ್ಲಿ ತೇಲಿತು.