ಇಂದು ವರಮಹಾಲಕ್ಷ್ಮಿ ವೃತ: ಹೆಂಗಳೆಯರು, ಮುತ್ತೈದೆಯರು ದೇವಿಯ ಆರಾಧನೆ ಮಾಡುವ ಹಬ್ಬ
ಶ್ರಾವಣ ಮಾಸವೆಂದರೆ ಮನೆ-ಮನಗಳಲ್ಲಿ ಅದೇನೋ ಸಡಗರ, ಸಂಭ್ರಮ. ಪ್ರಕೃತಿಯಲ್ಲೂ ಹಚ್ಚಹಸಿರು. ಮನೆಗಳಲ್ಲೂ ತಳಿರು ತೋರಣ ಕಟ್ಟುವ ಸಾಲು ಸಾಲು ಹಬ್ಬ. ಇಂದು (ಆಗಸ್ಟ್ 16) ವರಮಹಾಲಕ್ಷ್ಮಿ ಹಬ್ಬ. ಹೆಂಗಳೆಯರು, ಮುತ್ತೈದೆಯರು ಬಹಳ ಭಕ್ತಿಯಿಂದ ಆಚರಿಸುವ ಈ ಹಬ್ಬದಲ್ಲಿ ದೇವಿಯ ಆರಾಧನೆ ಮಾಡುತ್ತಾರೆ. ಸದಾ ಮುತ್ತೈದೆಯಾಗಲಿ ಎಂದು ಬೇಡಿಕೊಳ್ಳುತ್ತಾರೆ.
ಪ್ರತಿ ಮನೆ ಮನೆಯಲ್ಲೂ ಪೂಜೆ ನಡೆಯುತ್ತದೆ. ಈ ವರಮಹಾಲಕ್ಷ್ಮಿ ಹಬ್ಬದಂದು ದೇವಿಗೆ ನೈವೇದ್ಯ ಮಾಡಬಹುದಾದ ಅನ್ನದ ಖಾದ್ಯಗಳ ರೆಸಿಪಿ ಇಲ್ಲಿದೆ. ಅನ್ನ ಮಾಡಿಕೊಳ್ಳಿ ಅದರಿಂದಲೇ ಇನ್ನೂ ನಾಲ್ಕು ವಿಧದ ಭಕ್ಷಗಳನ್ನು ತಯಾರಿಸಬಹುದು.
ಅಕ್ಕಿ ಪಾಯಸ: ಒಂದು ಸ್ವಲ್ಪ ಅನ್ನಕ್ಕೆ ಬೆಲ್ಲ ಚಿಟಿಕೆ ಉಪ್ಪು ಹಾಗೂ ಬೇಯಿಸಿದ ಕಡಲೆ ಬೇಳೆ ಹಾಕಿ ಚೆನ್ನಾಗಿ ಸ್ಮಾಷ್ ಆಗುವ ರೀತಿ ಮಿಕ್ಸ್ ಮಾಡಿಕೊಳ್ಳಿ. ಗೋಡಂಬಿ, ಬಾದಾಮಿ, ಒಣ ದ್ರಾಕ್ಷಿ ಸೇರಿಸಿದರೆ ಅಕ್ಕಿ ಪಾಯಸ ರೆಡಿ.
ಪುಳಿಯೋಗರೆ: ಅನ್ನವನ್ನು ಅರ್ಧ ಪಾಯಸಕ್ಕೆ ಬಳಸಿದರೆ ಈಗ ಇನ್ನೊಂದು ಅರ್ಧ ಪುಳಿಯೋಗರೆ ಮಾಡಲು ಬಳಸಿಕೊಳ್ಳಬಹುದು. ಪುಳಿಯೋಗರೆ ಪೌಡರ್‌ನ್ನು ಎಣ್ಣೆಯಲ್ಲಿ ಮಿಕ್ಸ್ ಮಾಡಿ ಬಿಸಿಯಾದ ನಂತರ ಅದನ್ನು ಅನ್ನಕ್ಕೆ ಹಾಕಿ. ಅನ್ನಕ್ಕೆ ಉಪ್ಪು ಹಾಗೂ ಸಕ್ಕರೆಯನ್ನು ರುಚಿಗೆ ತಕ್ಕಂತೆ ಮಿಕ್ಸ್ ಮಾಡಿ ಚೆನ್ನಾಗಿ ಮಿಶ್ರಣ ಮಾಡಿದರೆ ಪುಳಿಯೋಗರೆ ಸಿದ್ಧ.
ಕೋಕೋನಟ್ ರೈಸ್: ಅನ್ನ ತಣ್ಣಗಾಗಲು ಬಿಡಿ. ನಂತರ ಒಗ್ಗರಣೆ ಪಾತ್ರೆಯಲ್ಲಿ ಸ್ವಲ್ಪ ತುಪ್ಪ ಹಾಗೂ ಸ್ವಲ್ಪ ಎಣ್ಣೆ ಮಿಕ್ಸ್ ಮಾಡಿ. ನಂತರ ಗೋಡಂಬಿ, ಕಡಲೆ ಬೇಳೆ, ಉದ್ದಿನ ಬೇಳೆ ಹಾಗೂ ಕರಿಬೇವಿನ ಸೊಪ್ಪು ಇವೆಲ್ಲವನ್ನೂ ಹಾಕಿ. ಹಸಿಮೆಣಸು ಹಾಕಿ. ಇದರ ಘಮ ಹರಡಿದ ಮೇಲೆ ಅದನ್ನು ಅನ್ನಕ್ಕೆ ಹಾಕಿ ಮೇಲಿಂದ ಉಪ್ಪು ಹಾಗೂ ತೆಂಗಿನ ತುರಿಯನ್ನು ಉದುರಿಸಿ ಮಿಕ್ಸ್ ಮಾಡಿದರೆ ಕೊಕೊನಟ್ ರೈಸ್ ರೆಡಿ.
ಚಿತ್ರಾನ್ನ: ಮೊದಲಿಗೆ ಒಂದಷ್ಟು ಅನ್ನವನ್ನು ತೆಗೆದುಕೊಳ್ಳಿ. ನಂತರ ಒಗ್ಗರಣೆ ಹಾಕಿ. ಒಗ್ಗರಣೆಗೆ ಸಾಸಿವೆ, ಜೀರಿಗೆ ಇಂಗು, ಕರಿಬೇವಿನ ಸೊಪ್ಪನ್ನು ಬಳಸಿ. ನಂತರ ಇದನ್ನು ಅನ್ನಕ್ಕೆ ಹಾಕಿ ನಂತರ ಮೇಲಿನಿಂದ ಉಪ್ಪು, ರುಚಿಗೆ ತಕ್ಕಷ್ಟು ಸಕ್ಕರೆ ಹಾಗೆ ಲಿಂಬುರಸ ಸೇರಿಸಿ. ಇದನ್ನು ಚೆನ್ನಾಗಿ ಮಿಕ್ಸ್ ಮಾಡಿ ಈಗ ಚಿತ್ರಾನ್ನ ಸವಿಯಲು ಸಿದ್ಧ.
ಹೆಸರುಕಾಳು ಉಸುಳಿ: ಹೆಸರುಕಾಳನ್ನು ಚೆನ್ನಾಗಿ ಲ ಬೇಯಿಸಿಕೊಳ್ಳಿ. ಅದನ್ನು ಐದರಿಂದ ಆರು ಸೀಟಿ ಕೂಗಿಸಿಕೊಳ್ಳಿ. ಅದಕ್ಕೆ ಕಾಯಿತುರಿ ಹಾಕಿ ಮಿಕ್ಸ್ ಮಾಡಿಕೊಳ್ಳಿ. ನಂತರ ಇನ್ನೊಂದು ಪಾತ್ರೆಯಲ್ಲಿ ಒಗ್ಗರಣೆ ಮಾಡಿ. ಎಣ್ಣೆ, ಅರಿಶಿನ, ಸಾಸಿವೆ, ಜೀರಿಗೆ ಹಾಗೂ ಹಸಿಮೆಣಸಿನಕಾಯಿಯನ್ನು ಬೇಯಿಸಿದ ಹೆಸರು ಕಾಳಿಗೆ ಮಿಕ್ಸ್ ಮಾಡಿ. ಹೆಸರುಕಾಳಿನ ಉಸುಳಿಗೆ ಅಗತ್ಯವೆನಿಸಿದರೆ ಸ್ವಲ್ಪ ಬೆಲ್ಲ ಸೇರಿಸಿಕೊಳ್ಳಬಹುದು.