ಜೇಟ್ಲಿ ಬಜೆಟ್ : ಯಾದಗಿರಿ ಜಿಲ್ಲೆಯ ಗಣ್ಯರು ಏನ್ ಅಂತಾರೆ.?
ಯಾದಗಿರಿ: ಕೇಂದ್ರ ಸರ್ಕಾರದ ಹಣಕಾಸು ಮಂತ್ರಿ ಅರುಣ್ ಜೇಟ್ಲಿ ಅವರು ಇಂದು ಮಂಡಿಸಿರುವ ಬಜೆಟ್ ಬಗ್ಗೆ ನಾಡಿನ ವಿವಿಧ ಕ್ಷೇತ್ರದ ಗಣ್ಯರು ತಮ್ಮದೇ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಕೇಂದ್ರ ಬಜೆಟ್ ಬಗ್ಗೆ ನಮ್ಮ ಯಾದಗಿರಿ ಜಿಲ್ಲೆಯ ಗಣ್ಯರ ಪ್ರತಿಕ್ರಿಯೆ ಏನೆಂದು ವಿನಯವಾಣಿ ಹಲವರನ್ನು ಮಾತಾಡಿಸಿದೆ. ಆ ಪೈಕಿ ಗಣ್ಯರ ಪ್ರತಿಕ್ರಿಯೆಗಳನ್ನು ಇಲ್ಲಿ ಪ್ರಕಟಿಸಲಾಗಿದೆ.
ಉದ್ಯೋಗ, ಶಿಕ್ಷಣ, ಆರೋಗ್ಯಕ್ಕೆ ಆದ್ಯತೆ ನೀಡಿದ ಜನಪರ ಬಜೆಟ್
ಅರುಣ್ ಜೇಟ್ಲಿ ಅವರು ಈ ಬಾರಿ ಮಂಡಿಸಿದ ಬಜೆಟ್ ದೇಶದ ಬೆಳವಣಿಗೆಗೆ ಪೂರಕವಾಗಿದೆ. ದೂರ ದೃಷ್ಟಿಯುಳ್ಳ ಬಜೆಟ್ ಇದಾಗಿದೆ. ಅಲ್ಲದೆ ವಿಶೇಷವಾಗಿ ಬೆಂಗಳೂರಿಗೆ ರೈಲು ಯೋಜನೆಗೆ 17 ಸಾವಿರ ಕೋಟಿ ಅನುದಾನ ನೀಡಿದ್ದಾರೆ. ಮತ್ತು ರೈತರ ಕಲ್ಯಾಣಕ್ಕಾಗಿ, ವಿವಿದ ಕೃಷಿ ಯೋಜನೆಗಾಗಿ ಸುಮಾರು 11 ಲಕ್ಷ ಕೋಟಿ ಹಣ ಮೀಸಲಿರಿಸಿದ್ದಾರೆ. ಎಲ್ಲ ಸಮುದಾಯದ ಜನರ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ರೂಪಿಸಲಾಗಿದೆ. ಆರೋಗ್ಯ ಮತ್ತು ಶಿಕ್ಷಣಕ್ಕೆ ಒತ್ತು ನೀಡಲಾಗಿದೆ. ದಲಿತ, ಶೋಷಿತ ಸಮುದಾಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಯುವಕರಿಗೆ ಉದ್ಯೋಗ, ಮಹಿಳೆಯರಿಗೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಯೋಜನೆ ರೂಪಿಸದ ಉತ್ತಮ ಬಜೆಟ್.
-ಗುರು ಪಾಟೀಲ್ ಶಿರವಾಳ. ಶಾಸಕರು, ಶಹಾಪುರ
————–
ನಿರಾಶದಾಯಕ ಬಜೆಟ್, ರೈತರ ಸಾಲ ಮನ್ನಾ ಚಕಾರವಿಲ್ಲ
ಈ ಬಾರಿ ಬಜೆಟ್ ಮಂಡಿಸಿದ ಮೋದಿ ಸರ್ಕಾರದ ಹಣಕಾಸು ಮಂತ್ರಿ ಜೇಟ್ಲಿ ರೈತರನ್ನು ಪೂರ್ಣ ಕಡೆಗಣಿಸಿದ್ದಾರೆ. ಯಾವುದೇ ಜನಪರ ಯೋಜನೆಗಳನ್ನು ಜಾರಿಗೆ ತಂದಿಲ್ಲ. ಚುನಾವಣೆ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಸಾಬರಮತಿ ರೈಲು ಯೋಜನೆಗೆ ಒಂದಿಷ್ಟು ಅನುದಾನ ಘೋಷಣೆ ಮಾಡಿದ್ದಾರೆ. 2019 ರ ಲೋಕಸಭೆ ಚುನಾವಣೆ ದೃಷ್ಟಿಯಲ್ಲಿ ಬರೀ ಭರವಸೆಯ ಬಜೆಟ್ ಮಂಡನೆ ಮಾಡಿದ್ದಾರೆ. ಯಾವುದೇ ಮಹತ್ವದ ಯೋಜನೆ ಘೋಷಣೆ ಇಲ್ಲ.
-ಮರಿಗೌಡ ಹುಲಕಲ್. ಅಧ್ಯಕ್ಷರು, ಜಿಲ್ಲಾ ಕಾಂಗ್ರೆಸ್ ಸಮಿತಿ, ಯಾದಗಿರಿ.
———————
ರೈತರ ಮೂಗಿಗೆ ತುಪ್ಪ ಸವರಿದ ಬಜೆಟ್
ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈ ಬಾರಿ ಮಂಡಿಸಿದ ಬಜೆಟ್ ಯಾವುದೇ ಮಹತ್ವದ ಆಕಾಂಕ್ಷೆಗಳನ್ನು ಹೊಂದಿಲ್ಲ. ರೈತರ ಸಾಲ ಮನ್ನಾದ ಬಗ್ಗೆ ಯಾವುದೇ ವಿಷಯ ಪ್ರಕಟಿಸಲಿಲ್ಲ. ಅಲ್ಲದೆ ರೈತರ ಮೂಗಿಗೆ ತುಪ್ಪ ಸವರಿದಂತೆ ಮಾಡಿದೆ. ಇದೊಂದು ಬಿಜೆಪಿ ಪೂರ್ವ ಪೀಡಿತ ಬಜೆಟ್ ಘೋಷಣೆಯಾಗಿದೆ. ಜನ ಕಲ್ಯಾಣದ ಆಶೋತ್ತರಗಳಿಗೆ ಪೂರಕ ಬಜೆಟ್ ಅಲ್ಲ. ರೈತ ಬೆಳೆದ ಬೆಳೆಗೆ ಯಾವುದೇ ಲಾಭವಿಲ್ಲ. ಕಂಪನಿಗಳಿಗೆ ಲಾಭ ಮಾಡಿಕೊಟ್ಟಿದೆ. ನೀರಾವರಿಗೆ ಸಂಬಂಧಿಸಿದ ಅಭಿವೃದ್ಧಿ ಯೋಜನೆಗಳ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಕೇಂದ್ರ ಸರ್ಕಾರ ರೈತರನ್ನು ಮರೆತಿದೆ.
-ಮಲ್ಲಿಕಾರ್ಜುನ ಸತ್ಯಂಪೇಟೆ. ರೈತ ಮುಖಂಡರು, ಸುರಪುರ.