ದರ್ಶನಾಪುರ-ಶಿರವಾಳ ಕ್ಷೇತ್ರದ ಸಂಗಯ್ಯ-ಭೀಮರಾಯ ಮುತ್ಯಾರಿದ್ದಂತೆಃ ಸುರಪುರಕರ್
ಕಾಟಾಚಾರದ ಆಯವ್ಯಯ ಸದಸ್ಯ ವಸಂತಕುಮಾರ ಆರೋಪ
ಕುಡಿಯುವ ನೀರಿನ ಸಮಸ್ಯೆಗಿಲ್ಲ ಪರಿಹಾರ ಕ್ರಮ
ಮನವಿ ಮಾಡಿದರೂ ಸಭೆ ಮುಂದೂಡದ ಆಡಳಿತ ವರ್ಗ, ಅಧಿಕಾರಿಗಳ ವಿರುದ್ಧ ಆಕ್ರೋಶ
ಯಾದಗಿರಿ, ಶಹಾಪುರಃ ನಗರಸಭೆಯಲ್ಲಿ ನಿನ್ನೆ ನವೆಂಬರ್ 2018 ರಿಂದ ಫೆಬ್ರವರಿ 2019 ರವರೆಗಿನ ಆದಾಯ ಮತ್ತು ಖರ್ಚು ವೆಚ್ಚಗಳ ಕುರಿತು ನಡೆದ ಸಾಮಾನ್ಯ ಸಭೆ ಸಂಪೂರ್ಣ ಕಾಟಾಚಾರದ್ದಾಗಿದೆ ಎಂದು ನಗರಸಭೆ ಸದಸ್ಯ ವಸಂತಕುಮಾರ ಸುರಪುರಕರ್ ಆರೋಪಿಸಿದ್ದಾರೆ.
ಅಲ್ಲದೆ ಮುಖ್ಯವಾಗಿ ಮಾಜಿ ಶಾಸಕ ದಿವಂಗತ ಶಿವಶೇಖರಪ್ಪಗೌಡ ಪಾಟೀಲ್ ಶಿರವಾಳ ಅವರ 9 ನೇ ಪುಣ್ಯ ಸ್ಮರಣೆ ಸಮಾರಂಭವು ಮಾ. 7 ರಂದು ಆಯೋಜಿಸಲಾಗಿತ್ತು. ಆ ಕಾರಣಕ್ಕೆ ಸಾಮಾನ್ಯ ಸಭೆ ಒಂದು ದಿನದ ಮಟ್ಟಿಗೆ ಮುಂದೂಡಲು ಎರಡು ಬಾರಿ ಆಡಳಿತ ಮಂಡಳಿ ಹಾಗೂ ನಗರಸಭೆ ಪೌರಾಯುಕ್ತರ ಗಮನಕ್ಕೆ ತಂದರೂ ನಿರ್ಲಕ್ಷವಹಿಸಿ ಮಾ. 7 ರಂದೆ ಸಾಮಾನ್ಯ ಸಭೆ ನಡೆಸುವ ಮೂಲಕ, ಮೂರು ಬಾರಿ ಈ ಕ್ಷೇತ್ರದ ಶಾಸಕರಾಗಿ ಸೇವೆ ಸಲ್ಲಿಸಿದ್ದ ದಿ.ಶಿವಶೇಖರಪ್ಪಗೌಡ ಶಿರವಾಳ ಇವರಿಗೆ ನಗರಸಭೆ ಅಗೌರವ ತೋರಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಹಾಪುರ ಮತಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿ, ಕೃಷ್ಣಾ ಕಾಡಾ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಮಹಾನ್ ವ್ಯಕ್ತಿಯ ಪುಣ್ಯ ಸ್ಮರಣೆಯಂದೇ ಉದ್ದೇಶ ಪೂರ್ವಕವಾಗಿ ಸಾಮಾನ್ಯ ಸಭೆ ಆಯೋಜಿಸುವ ಉದ್ದೇಶವೇನಿತ್ತು ಎಂದು ಅವರು ಪ್ರಶ್ನಿಸಿದ್ದಾರೆ.
ಮಾಜಿ ಶಾಸಕರೊಬ್ಬರ ಪುಣ್ಯ ಸ್ಮರಣೆ ಕಾರ್ಯಕ್ರಮಕ್ಕೆ ಜನಪ್ರತಿನಿಧಿಗಳು, ಗಣ್ಯರು ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುವದು ಸಹಜ. ಇದು ಪಕ್ಷಾತೀತವಾದ ಕಾರ್ಯಕ್ರಮ. ಅಲ್ಲದೆ ಆಡಳಿತ ನಗರಸಭೆ ಸದಸ್ಯರಿಗೂ ಈ ಪರಿಜ್ಞಾನ ಬೇಡವೆ. ಎರಡು ಬಾರಿ ಸಾಮಾನ್ಯ ಸಭೆಯ ದಿನಾಂಕ ಬದಲಾಯಿಸಲು ಕೋರಿದರು ಅದನ್ನು ನಿರ್ಲಕ್ಷವಹಿಸಿ ಅದೇ ದಿನವೇ ನೆರವೇರಿಸುವದು ಎಷ್ಟರ ಮಟ್ಟಿಗೆ ಸರಿ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ದರ್ಶನಾಪುರ ಮತ್ತು ಶಿರವಾಳ ಕುಟುಂಬ ಈ ಕ್ಷೇತ್ರಕ್ಕೆ ದಿಗ್ಗಿ ಸಂಗಯ್ಯ ಮತ್ತು ಭೀ.ಗುಡಿ ಭೀಮರಾಯ ಮುತ್ಯಾರಂತೆ ಈ ಕ್ಷೇತ್ರದ ಸೇವೆಯಲ್ಲಿ ತೊಡಗಿಸಿಕೊಂಡು ಬಂದಿದ್ದಾರೆ. ಮಹನೀಯರಾದ ಬಾಪುಗೌಡ ದರ್ಶನಾಪುರ ಹಾಗೂ ಶಿವಶೇಖರಪ್ಪಗೌಡ ಶಿರವಾಳ ಈ ಎರಡು ಕುಟುಂಬಗಳು ಕ್ಷೇತ್ರದ ಅಭಿವೃದ್ಧಿಗೆ ಯಾವುದೇ ಸಮಸ್ಯೆಗೆ ಪೂರಕ ಸ್ಪಂಧನೆ ನೀಡುತ್ತಾ ಬಂದಿದ್ದಾರೆ.
ಬೇರಡೆ ಕಂಡು ಬರುವ ರಾಜಕೀಯ ಜಿದ್ದಾಜಿದ್ದಿ ಅಸಹನೀಯತೆ ಇಲ್ಲಿಲ್ಲ. ಆದರೆ ಇಂತಹ ದುರಾಡಳಿತ ಅಧಿಕಾರಿಗಳಿಂದಲೇ ನಿರ್ಲಕ್ಷಕ್ಕೆ ಗುರಿಯಾಗಿ ಜನಮಾನಸದಲ್ಲಿ ಇಲ್ಲಿನ ಮಹನೀಯರನ್ನು ನಿರ್ಲಕ್ಷವಹಿಸುವ ಮೂಲಕ ಹೊಸ ಸಮಸ್ಯೆ ಸೃಷ್ಟಿಗೆ ಕಾರಣರಾಗಲಿದ್ದಾರೆ ಎಂದ ಅವರು, ಅಧಿಕಾರ ವರ್ಗದ ಅನೀತಿಯನ್ನು ಖಂಡಿಸಿದ್ದಾರೆ.
ಶಾಸಕ ದರ್ಶನಾಪುರರ ತಂದೆ ಬಾಪುಗೌಡ ದರ್ಶಾನಾಪುರ ಮತ್ತು ಮಾಜಿ ಶಾಸಕ ಗುರು ಪಾಟೀಲ್ ಅವರ ತಂದೆ ಶಿವಶೇಖರಪ್ಪಗೌಡ ಪಾಟೀಲ್ ಇವರ ಸೇವೆ ಕ್ಷೇತ್ರಕ್ಕೆ ಅಪಾರ. ಎರಡು ಕುಟುಂಬದ ಮೇಲೆ ಜನರ ಆಶೀರ್ವಾದ ಪ್ರೀತಿಯು ಅದೇ ರೀತಿ ಇದೆ. ತಾಲೂಕು ಆಡಳಿತವಾಗಲಿ ನಗರಸಭೆಯಾಗಲಿ ಒಂದಿಷ್ಟು ಇಲ್ಲಿನ ರಾಜಕೀಯ ಇತಿಹಾಸ ಕುರಿತು ತಿಳಿದುಕೊಂಡು ನಡೆಯುವದು ಒಳಿತು ಎಂದು ಎಚ್ಚರಿಸಿದ್ದಾರೆ.
ಕಾಟಾಚಾರದ ಆಯವ್ಯಯ- ನೀರು ಸೌಲಭ್ಯಕ್ಕಿಲ್ಲ ಕ್ರಮ
2019-20 ಸಾಲಿನ ಎಸ್‍ಎಫ್‍ಸಿ ವಿಶೇಷ ಅನುದಾನದಡಿ 4 ಕೋಟಿ ವೆಚ್ಚದ ಕ್ರಿಯಾ ಯೋಜನೆಗೆ ಮಂಜೂರಾತಿ ಪಡೆದಿರುವದು ಹಾಸ್ಯಸ್ಪದವಾಗಿದೆ. ಇದು ಕಾಟಾಚಾರದ ಆಯವ್ಯವವಾಗಿದೆ ಎಂದು ನಗರಸಭೆ ಸದಸ್ಯ ವಸಂತಕುಮಾರ ಆರೋಪಿಸಿದ್ದಾರೆ.
ಒಂದು ವರ್ಷ ಬಜೆಟ್ ಮಂಡನೆ ಸವಿಸ್ತಾರವಾಗಿ ಚರ್ಚಿಸದೆ ಕೇವಲ ಬಜೆಟ್ ಕುರಿತು ಅರ್ಧ ಗಂಟೆಯಲ್ಲಿ ತರಾತುರಿಯಲ್ಲಿ ಮುಗಿಸಿರುವ ಹಿಂದಿನ ಹುನ್ನಾರವೇನು ಎಂದು ಅವರು ಪ್ರಶ್ನಿಸಿದ್ದಾರೆ.
ದಿ.ಶಿವಶೇಖರಪ್ಪಗೌಡ ಶಿರವಾಳರ ಪುಣ್ಯ ಸ್ಮರಣೆಗೆ ಹೋಗಿ ಬರುವಷ್ಟರಲ್ಲಿ 2;30 ಕ್ಕೆ ಆರಂಭಗೊಂಡ ಬಜೆಟ್ ಮಂಡನೆ ಕುರಿತ ವಿಷಯ ಕೇವಲ 3:00 ಗಂಟೆಯೊಳಗೆ ಮುಗಿಸಲಾಗಿದೆ ಎಂದು ದೂರಿದರು. ಅಲ್ಲದೆ ಪ್ರಸಕ್ತ ನಗರಕ್ಕೆ ಕುಡಿಯುವ ನೀರಿ ಸ್ಥಿತಿ ಭೀಖರತೆ ಕಂಡಿದ್ದರೂ ಇಲ್ಲಿನ ಅಧಿಕಾರಿಗಳು ಮಾತ್ರ ಗಾಢ ನಿದ್ರೆಯಲ್ಲಿದ್ದಾರೆ ಎಂದು ಆರೋಪಿಸಿದರು.
ಬಜೆಟ್‍ನಲ್ಲಿ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲು ಸಾಕಷ್ಟು ಅನುದಾನವಿದ್ದರೂ ಅದನ್ನು ಸದ್ಭಳಿಕೆ ಮಾಡದ ಕಾರಣ, ಈ ಬಾರಿ ನಗರ ನಿವಾಸಿಗಳು ನೀರಿನ ಅಭಾವದಿಂದ ತೊಂದರೆ ಅನುಭವಿಸುವಂತಾಗಿದೆ. ಅಧಿಕಾರಿಗಳ ನಿರ್ಲಕ್ಷ ದೂರದೃಷ್ಟಿ ಕೊರತೆಯಿಂದ ನೀರಿಲ್ಲದೆ ನಗರದಲ್ಲಿ ಹಾಹಕಾರ ಉಂಟಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.