ಮದ್ಯದ ದೊರೆ ವಿಜಯ ಮಲ್ಯ ಬಂಧನ
ಕೊನೆಗೂ ಮದ್ಯದ ದೊರೆ, ಉದ್ಯಮಿ ವಿಜಯ ಮಲ್ಯ ಲಂಡನ್ ನಲ್ಲಿ ಬಂಧನಕ್ಕೊಳಗಾಗಿದ್ದಾರೆ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಪೊಲೀಸರು ಬಂಧಿಸಿದ್ದಾರೆ. ಜಾರಿ ನಿರ್ದೇಶನಾಲಯ ಈ ಬಗ್ಗೆ ಪ್ರಕರಣ ದಾಖಲಿಸಿತ್ತು. ಸಾವಿರಾರು ಕೋಟಿ ರೂಪಾಯಿ ಸಾಲ ಮಾಡಿದ್ದ ಮಲ್ಯ ವಿದೇಶದಲ್ಲಿ ತಲೆಮರೆಸಿಕೊಂಡಿದ್ದರು.
ಅನೇಕ ಸಲ ಸರ್ಕಾರಕ್ಕೆ ಸವಾಲೆಸೆಯುವಂತ ಮಾತನಾಡಿದ್ದರು. 9ಸಾವಿರ ಕೋಟಿ ರೂಪಾಯಿ ಸಾಲ ಮಾಡಿ ಬ್ಯಾಂಕುಗಳಿಗೆ ವಂಚನೆ ಮಾಡಿದ್ದಾರೆಂಬ ಆರೋಪ ಮಲ್ಯ ಮೇಲಿತ್ತು. ಮಲ್ಯ ಬಂಧನವನ್ನು ಕ್ರೌನ್ ಪ್ರಾಜಿಕೂಷನ್ ಖಚಿತಪಡಿಸಿದೆ.
ಬಂಧನವಾಗಿ ಕೆಲಹೊತ್ತಿನಲ್ಲೇ ಮಲ್ಯಗೆ ಜಾಮೀನು
ಲಂಡನ್ ನಲ್ಲಿ ಬಂಧನಕ್ಕೊಳಗಾದ ಕೆಲ ಹೊತ್ತಿನಲ್ಲೇ ಉದ್ಯಮಿ ವಿಜಯ ಮಲ್ಯ ಜಾಮೀನು ಪಡೆದಿದ್ದಾರೆ. ಬಂಧಿಸಿ ಲಂಡನ್ನಿನ ಕೋರ್ಟ್ ಗೆ ಪೊಲೀಸರು ಹಾಜರು ಪಡಿಸಿದ್ದಾರೆ. ಅಂತೆಯೇ ಮಲ್ಯ ವಿರುದ್ಧ ಜಾರಿ ನಿರ್ದೇಶನಾಲಯ ಸಲ್ಲಿಸಿದ್ದ ಪ್ರಕರಣದ ಬಗ್ಗೆ ಕೋರ್ಟಿನಲ್ಲಿ ವಾದ ಮಂಡಿಸಲಾಗಿದೆ.
ಆದರೆ, ಕೋರ್ಟ್ ವಿಜಯ ಮಲ್ಯ ಪರ ವಕೀಲರ ವಾದ ಮನ್ನಿಸಿ ಜಾಮೀನು ಮಂಜೂರು ಮಾಡಿದೆ. 2016ರ ಮಾರ್ಚ್ ನಲ್ಲಿ ಮಲ್ಯ ಭಾರತದಿಂದ ಎಸ್ಕೇಪ್ ಆಗಿದ್ದರು. ಈ ಹಿಂದೊಮ್ಮೆ ಎಪ್ರಿಲ್ 19 ರಂದು ಬಂಧನಕ್ಕೊಳಗಾಗಿದ್ದರು. ಕಳೆದ 6 ತಿಂಗಳಲ್ಲಿ ವಿಜಯ ಮಲ್ಯ ಎರಡು ಸಲ ಬಂಧನಕ್ಕೊಳಗಾಗಿದ್ದಾರೆ. ಆದರೆ, ಎರಡೂ ಸಲವೂ ಬಂದನವಾಗಿ ಕೆಲಹೊತ್ತಿನಲ್ಲೇ ಜಾಮೀನು ಪಡೆದಿದ್ದಾರೆ.