ಪ್ರಮುಖ ಸುದ್ದಿ

ವಿಜಯಪುರ ಪತ್ರಕರ್ತರ ಸಮ್ಮೇಳನ ಐತಿಹಾಸಿಕವಾಗಿಸಲು ಪಣ; ತಗಡೂರ್

ಪತ್ರಕರ್ತರ ಸಮ್ಮೇಳನ ಯಶಸ್ಸಿಗೆ ಪಣ

ವಿಜಯಪುರ ಪತ್ರಕರ್ತರ ಸಮ್ಮೇಳನ ಐತಿಹಾಸಿಕವಾಗಿಸಲು ಪಣ; ತಗಡೂರ್

ವಿಜಯಪುರಃ ಗಡಿ ಭಾಗದ ಆಕರ್ಷಕ ನಗರವಾಗಿರುವ ಇಲ್ಲಿ ಜ.೯ ಮತ್ತು ೧೦ರಂದು ನಡೆಯುವ ಮೂವತ್ತೇಳನೆಯ ರಾಜ್ಯ ಪತ್ರಕರ್ತರ ಸಮ್ಮೇಳನವನ್ನು ಐತಿಹಾಸಿಕವಾಗಿಸಲು ಪಣ ತೊಡಬೇಕು ಎಂದು ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಅಧ್ಯಕ್ಷ ಶಿವಾನಂದ ತಗಡೂರು ಹೇಳಿದರು.
ಇಲ್ಲಿನ ಬೆಂಗಳೂರು ಹೋಟೆಲ್‌ನ ಸಭಾಂಗಣದಲ್ಲಿ ಕೊನೆಯ ಪೂರ್ವ ಭಾವಿ ಸಭೆಯಲ್ಲಿ ಮಾತನಾಡಿದರು.

ಹಲವು ಜಿಲ್ಲೆಗಳವರು ಸಮ್ಮೇಳನ ನಡೆಸಲು ಮುಂದೆ ಬಂದಿದ್ದರೂ ಆ ಸದವಕಾಶ ವಿಜಯಪುರ ಜಿಲ್ಲೆಗೆ ಸಿಕ್ಕಿದೆ. ಮುಖ್ಯಮಂತ್ರಿಗಳು ಜ.೯ರಂದು ಸಮ್ಮೇಳನ ಉದ್ಘಾಟಿಸಲಿದ್ದು, ಅವರ ಪಾಲ್ಗೊಳ್ಳುವಿಕೆ ಮುಖ್ಯವಾಗಿದೆ.

ಜಗತ್ಪ್ರಸಿದ್ಧ ‘ಗುಮ್ಮಟ ನಗರ’ದಲ್ಲಿ ಸಮ್ಮೇಳನವನ್ನು ಅಷ್ಟೇ ವಿಶೇಷವಾಗಿ ಎಲ್ಲರೂ ಸೇರಿ ರೂಪಿಸಬೇಕಿದೆ. ಪರಸ್ಪರರೆಲ್ಲ ಜವಾಬ್ದಾರಿ ತೆಗೆದುಕೊಂಡು ಒಬ್ಬರಿಗೊಬ್ಬರು ಸಂಹವನದಲ್ಲಿದ್ದು ಸಮ್ಮೇಳನ ಅನನ್ಯ ಮತ್ತು ಅಪರೂಪವಾಗಿಸುವ ಕೆಲಸವಾಗಬೇಕು ಎಂದು ಸಲಹೆ ನೀಡಿದರು.

ಜವಾರಿ ಊಟ, ಆದರಾತಿಥ್ಯ

ಸುಮಾರು ಎರಡು ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳು ರಾಜ್ಯದ ಎಲ್ಲ ಭಾಗಗಳಿಂದ ಬರುತ್ತಾರೆ. ಅವರೆಲ್ಲರ ನೋಂದಣಿ, ಈ ಭಾಗದ ವಿಶೇಷ ಊಟದ ವ್ಯವಸ್ಥೆ, ಉತ್ತಮ ಗೋಷ್ಠಿಗಳ ಆಯೋಜನೆ ಇರಲಿದೆ. ವಸ್ತು-ವ್ಯಂಗ್ಯ ಹಾಗೂ ಛಾಯಾ ಚಿತ್ರಗಳ ಪ್ರದರ್ಶನ, ಪತ್ರಿಕೋದ್ಯಮ ಸಾಗಿ ಬಂದ ದಾರಿ ಹೇಳುವ ಕಾರ್ಯ ಹಾಗೂ ಸಂಜೆ ನಾಟಕ-ರೂಪಕ ಸೇರಿ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಬಿಜಾಪುರ ನೆಲವನ್ನು ಬಿಂಬುಸುವ ವೇದಿಕೆ, ಮೊದಲ ದಿನ ಹಲವು ತಂಡಗಳ ಜತೆಗಿನ ಮೆರವಣಿಗೆ, ನಾಡಿನ ಖ್ಯಾತ ಪತ್ರಕರ್ತರ ಸಮಾಗಮ ಇರಲಿದೆ.

ಜ.೧೦ರಂದು ಹಲವು ಗೋಷ್ಠಿಗಳ ಜತೆ ಸಮಾರೋಪ ಆಗಲಿದೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿ ಹಲವು ಗಣ್ಯರು ಅಂದು ಪಾಲ್ಗೊಳ್ಳಲಿದ್ದಾರೆ. ಸಮ್ಮೇಳನಕ್ಕೆ ದಿನಗಣನೆ ಶುರುವಾಗಿದ್ದು ಎಲ್ಲರೂ ಒಗ್ಗಟ್ಟಿನಿಂದ ಜೋರಾದ ತಯಾರಿಯಲ್ಲಿ ತೊಡಗಬೇಕು ಎಂದರು.

ಹಲವು ಸಮಿತಿಗಳ ಪರಿಶೀಲನೆ

ವಸತಿ, ವೇದಿಕೆ, ಸಾರಿಗೆ, ಸ್ಮರಣ ಸಂಚಿಕೆ, ಸಾಧಕ ಪತ್ರಕರ್ತರ ಪುಸ್ತಕ, ಹಲವು ಪತ್ರಕರ್ತರಿಗೆ-ವಿವಿಧ ಕ್ಷೇತ್ರಗಳವರಿಗೆ ಸನ್ಮಾನ, ಸಂಘದ ಮಹತ್ವದ ಪ್ರಶಸ್ತಿಗಳ ವಿತರಣೆ, ಊಟ ಸೇರಿದಂತೆ ಹಲವು ಸಮಿತಿಗಳ ಕಾರ್ಯಗಳ ಕುರಿತು ಚರ್ಚಿಸಲಾಯಿತು.

ಸಂಘದ ಜಿಲ್ಲಾಧ್ಯಕ್ಷ ಸಂಗಮೇಶ ಚೂರಿ, ಉಪಾಧ್ಯಕ್ಷ ಇಂದುಶೇಖರ ಮಣೂರ, ಹಿರಿಯ ಪತ್ರಕರ್ತರಾದ ಸುಶಿಲೇಂದ್ರ ನಾಯಕ, ಬಾಬುರಾವ್ ಕುಲಕರ್ಣಿ, ಕಾರ್ಯದರ್ಶಿ ಮೋಹನ್ ಕುಲಕರ್ಣಿ, ಅಲ್ಲಮಪ್ರಭು ಮಲ್ಲಿಕಾರ್ಜುನಮಠ, ರಾಜ್ಯ ಸದಸ್ಯೆ ಕೌಸಲ್ಯ ಪನಾಳಕರ್, ರಶ್ಮಿ ಪಾಟೀಲ, ಪ್ರದೀಪ್ ದೇಶಪಾಂಡೆ, ಟಿ.ಕೆ.ಮಲಗೊಂಡ, ಸಚೇಂದ್ರ ಲಂಬೂ, ಶಿವಕುಮಾರ್ ಉಪ್ಪಿನ, ಅಶೋಕ್ ಯಡಹಳ್ಳಿ, ಶಶಿಕಾಂತ್ ಮೆಂಡೇಗಾರ, ಮಹೇಶ ಶಟಗಾರ್, ವಿಠ್ಠಲ ಲಂಗೋಟಿ, ಗುರುರಾಜ ಗದ್ದಕೇರಿ, ವಿಜಯ ಸಾರವಾಡ, ಬಸವರಾಜ ಉಳ್ಳಾಗಡ್ಡಿ, ದೀಪಕ ಶಿಂತ್ರೆ, ಫಯಾಜ್ ಕಲಾದಗಿ, ನಾವಿ ಸೇರಿದಂತೆ ಹಲವರು ಇದ್ದರು.

Related Articles

Leave a Reply

Your email address will not be published. Required fields are marked *

Back to top button