ಎದುರು ಬರುವ ಸ್ನೇಹಿತನ ಕಂಡು ಬೇರೆ ದಾರಿ ಹಿಡಿದ ಸಜ್ಜನ.? ಈ ಅದ್ಭುತ ಕಥೆ ಓದಿ
ದಿನಕ್ಕೊಂದು ಕಥೆ
ಸಜ್ಜನರ ಸ್ನೇಹ
ಆಗಿನ್ನೂ ಚುಮು ಚುಮು ಬೆಳಕು. ತಂದೆ ಮತ್ತು ಮಗ ವಾಯುಸಂಚಾರಕ್ಕೆ ಹೊರಟಿದ್ದರು. ತಣ್ಣಗಿನ ಗಾಳಿ ತುಂಬ ಚೇತೋಹಾರಿಯಾಗಿತ್ತು. ತಿರುಗಾಡಿದ್ದು ಸಾಕು ಇನ್ನು ಮನೆಗೆ ಹೋಗೋಣವೆಂದು ತಿರುಗಿ ರಸ್ತೆ ಹಿಡಿದರು.
ರಸ್ತೆಯಲ್ಲೂ ಜನರು ಹೆಚ್ಚಿಲ್ಲ. ದೂರದಲ್ಲಿ ಎದುರಾಗಿ ಬರುತ್ತಿದ್ದ ವ್ಯಕ್ತಿಯನ್ನು ತಂದೆ ಕಂಡರು. ತಕ್ಷಣವೇ ಮಗನಿಗೆ ಹೇಳಿದರು, ‘ಮಗೂ, ಸ್ವಲ್ಪ ನಿಲ್ಲು. ಇದೇ ದಾರಿಯಲ್ಲಿ ಮುಂದೆ ಹೋಗುವುದು ಬೇಡ. ಸ್ವಲ್ಪ ಒಳಗಿದ್ದ ಕಚ್ಚಾ ದಾರಿಯಲ್ಲೇ ಮನೆಗೆ ಹೋಗೋಣ’. ‘ಯಾಕಪ್ಪಾ, ಏನು ತೊಂದರೆ?’ ಕೇಳಿದ ಮಗ.
‘ತೊಂದರೆ ಏನಿಲ್ಲ. ಎದುರಿಗೆ ದೂರದಲ್ಲಿ ಒಬ್ಬ ವ್ಯಕ್ತಿ ಬರುತ್ತಿದ್ದಾರೆ ಅಲ್ಲವೇ? ಅವರನ್ನು ಭೆಟ್ಟಿಯಾಗುವುದು ಬೇಡ’ ಎಂದರು ತಂದೆ. ‘ಯಾಕೆ ಅವರಿಂದ ತಪ್ಪಿಸಿಕೊಳ್ಳಬೇಕು? ಏನಾದರೂ ಅಂತಹ ವಿಷಯವಿದೆಯೇ?’ ಮಗ ಕೇಳಿದ. ‘ತಪ್ಪು ನನ್ನಿಂದ ಏನಿಲ್ಲ. ಅವರು ನನ್ನ ಸ್ನೇಹಿತರು. ಅವರಿಗೆ ಮುಜುಗರ ಮಾಡುವುದು ನನಗೆ ಇಷ್ಟವಿಲ್ಲ.’
‘ನೀವು ಎದುರಿಗೆ ಬಂದರೆ ಅವರಿಗೇಕೆ ಮುಜುಗರವಾಗುತ್ತದೆ?’. ‘ಅವರು ಕೆಲ ವರ್ಷಗಳ ಕೆಳಗೆ ನನ್ನಿಂದ ಐದು ಸಾವಿರ ರೂಪಾಯಿಗಳನ್ನು ಸಾಲವಾಗಿ ಪಡೆದಿದ್ದರು. ಆರು ತಿಂಗಳಿನ ನಂತರ ಮರಳಿಸುತ್ತೇನೆ ಎಂದಿದ್ದರು. ಪಾಪ! ಅವರಿಗೆ ಮರಳಿ ಕೊಡಲು ಆಗುತ್ತಿಲ್ಲ. ಯಾವಾಗಲಾದರೂ ದಾರಿಯಲ್ಲಿ ಸಿಕ್ಕಾಗ ಇನ್ನು ಸ್ವಲ್ಪ ದಿನಗಳಲ್ಲಿ ಮತ್ತೊಬ್ಬ ಸ್ನೇಹಿತನಿಂದ ಹಣ ಸಾಲ ಪಡೆದು ನಿಮ್ಮ ಹಣ ಕೊಟ್ಟುಬಿಡುತ್ತೇನೆ ಎಂದು ಹೇಳುತ್ತಾರೆ. ಹೀಗೆಯೇ ಅನೇಕ ಬಾರಿ ಹೇಳಿದ್ದಾರೆ.
ಈಗ ಮತ್ತೆ ಅವರಿಗೆ ಎದುರಾದರೆ ಮತ್ತೇನೋ ಸುಳ್ಳು ಹೇಳಬೇಕಾಗುತ್ತದೆ. ಅವರಿಗೆ ಈ ಮುಜುಗರ ಮಾಡುವುದು ಏಕೆ? ನಾವೇ ಬೇರೆ ರಸ್ತೆಯಿಂದ ಹೋಗೋಣ’ ಎಂದರು ತಂದೆ.
ಆಗ ಮಗ ಕೇಳಿದ, ‘ಅಪ್ಪಾ, ಅವರ ಕಷ್ಟ ನಿಮಗೆ ಆಗಿದ್ದರೆ ಮತ್ತು ಅವರಿಗೆ ತೊಂದರೆ ಕೊಡಬಾರದು ಎಂದಿದ್ದರೆ ನೀವೇ ಅವರಿಗೆ ಹಣ ಮರಳಿಸುವುದು ಬೇಡ ಎಂದು ಹೇಳಿ ಬಿಡಬಹುದಲ್ಲ?’
‘ಅದನ್ನೂ ಹೇಳಿ ನೋಡಿದೆನಪ್ಪ. ಅವರು ಮಹಾ ಆತ್ಮಾಭಿಮಾನವುಳ್ಳ ವ್ಯಕ್ತಿ. ದೊಡ್ಡದಾಗಿ ಬಾಳಿದವರು. ಅವರು ಏನು ಹೇಳಿದರು ಗೊತ್ತೇ? ಹಾಗೆ ಮರಳಿ ಕೊಡಬೇಡಿ ಎನ್ನಬೇಡಿ. ಹಾಗೆಯೇ ತೆಗೆದುಕೊಳ್ಳಲು ನಾನೇನು ಭಿಕ್ಷುಕನೇ? ಒಂದಲ್ಲ ಒಂದು ದಿನ ಹಣ ಮರಳಿಸಿಯೇ ಸಾಯುತ್ತೇನೆ, ಸಾಲಗಾರನಾಗಿ ಸಾಯುವುದಿಲ್ಲ ಎಂದು ಬಿರುಸಾಗಿ ಮಾತನಾಡುತ್ತಾರೆ.
ಪಾಪ! ಏನೋ ಅವರಿಗೆ ಸಮಯ ಸರಿಯಾಗಿಲ್ಲ. ನಾನೇಕೆ ಅವರ ಮನಸ್ಸಿಗೆ ಕಿರಿಕಿರಿ ಮಾಡಲಿ?’ ಅಪ್ಪ ಹೇಳಿದರು. ಮಗ ಆಶ್ಚರ್ಯದಿಂದ ಅಪ್ಪನ ಮುಖ ನೋಡಿದ.‘ಅಪ್ಪಾ, ನೀವು ನಿಜವಾಗಿಯೂ ಸಜ್ಜನರು. ಸಾಮಾನ್ಯವಾಗಿ ಸಾಲ ತೆಗೆದುಕೊಂಡವರು, ಕೊಟ್ಟವರು ಎದುರಿಗೆ ಬಂದಾಗ ತಪ್ಪಿಸಿಕೊಂಡು ಹೋಗುತ್ತಾರೆ.
ಅಂಥದ್ದರಲ್ಲಿ ಸಾಲ ಕೊಟ್ಟು ನೀವೇ ಅವರಿಗೆ ನೋವುಂಟು ಮಾಡಬಾರದೆಂದು ದೂರ ಹೋಗುತ್ತೀರಿ. ನಿಮ್ಮಿಂದ ಗೆಳೆತನವನ್ನು ಕಾಪಾಡಿಕೊಳ್ಳುವುದು ಹೇಗೆ ಮತ್ತು ಕಷ್ಟದಲ್ಲಿ ಇರುವವರಿಗೆ ಸಹಾನುಭೂತಿಯನ್ನು ತೋರುವುದು ಯಾವ ರೀತಿ ಎಂಬುದನ್ನು ನಾನು ಕಲಿತೆ.
ಆಯ್ತು, ಬೇರೆ ದಾರಿಯಲ್ಲೇ ಹೋಗೋಣ’ ಎಂದ. ಇಬ್ಬರೂ ಮತ್ತೊಂದು ದಾರಿ ಹಿಡಿದರು. ಸಾಮಾನ್ಯವಾಗಿ ಗೆಳೆತನದಲ್ಲಿ ಸಾಲ ಮಾಡಬಾರದು. ಅನಿವಾರ್ಯವಾಗಿ ಆ ಪ್ರಸಂಗ ಬಂದರೆ ಅದನ್ನು ಬೇಗನೇ ತೀರಿಸಬೇಕು. ಸಾಲ ಪಡೆದವರು ಆತ್ಮೀಯ ಸ್ನೇಹಿತರಾದಾಗ ಅದನ್ನು ಮರಳಿ ಪಡೆಯುವಾಗ ಇಬ್ಬರೂ ಎಚ್ಚರವಾಗಿರಬೇಕು. ಅತ್ಯಂತ ಸಜ್ಜನರು ಸ್ನೇಹಿತನಿಗೆ ಅವಮಾನವಾಗದಂತೆ, ಸ್ನೇಹಕ್ಕೆ ಭಂಗಬರದಂತೆ ನಡೆದುಕೊಳ್ಳುತ್ತಾರೆ.
ಸಂಗ್ರಹ
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.