ಪ್ರಮುಖ ಸುದ್ದಿ
ಬೆಳಗೆರೆ ಸುಪಾರಿ ಕೇಸ್: 3ನೇ ಆರೋಪಿ ಭೀಮಾ ತೀರದ ವಿಜು ಬಡಿಗೇರ್ ಬಂಧನ
ಬೆಂಗಳೂರು: ಸಹೋದ್ಯೋಗಿ ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ ಹತ್ಯೆಗೆ ಸುಪಾರಿ ನೀಡಿದ ಆರೋಪದ ಮೇಲೆ ಹಾಯ್ ಬೆಂಗಳೂರ್ ಪತ್ರಿಕೆ ಗೌರವ ಸಂಪಾದಕ ರವಿ ಬೆಳಗೆರೆ ಬಂಧನವಾಗಿದೆ. ಭೀಮಾ ತೀರದ ಹಂತಕ ಶಶಿ ಮುಂಡೆವಾಡಿ ನೀಡಿದ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ತನಿಖೆ ನಡೆಸಿ ಕ್ರಮ ಕೈಗೊಂಡಿದ್ದಾರೆ. ಆದರೆ, ಶಶಿ ಮುಂಡೆವಾಡಿ ಜತೆಗೆ ಸುಪಾರಿ ಕೊಲೆಗೆ ಯತ್ನಿಸಿದ್ದ ಮತ್ತೋರ್ವ ಆರೋಪಿ ವಿಜು ಬಡಿಗೇರ್ ನಾಪತ್ತೆಯಾಗಿದ್ದು ಪೊಲೀಸರಿಗೆ ತಲೆ ನೋವಾಗಿ ಪರಿಣಮಿಸಿತ್ತು.
ವಿಜು ಬಡಿಗೇರ್ ಬಂಧನಕ್ಕಾಗಿ ಬಲೆ ಬೀಸಿದ್ದ ಸಿಸಿಬಿ ಪೊಲೀಸರು ಕಳೆದ ಎರಡು ದಿನಗಳಿಂದ ಭೀಮಾ ತೀರದಲ್ಲಿ ಬೀಡು ಬಿಟ್ಟಿದ್ದರು. ಕೊನೆಗೂ ಪ್ರಕರಣದ ಮೂರನೇ ಆರೋಪಿ ವಿಜು ಬಡಿಗೇರನ ಅಡ್ಡೆಯ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಸ್ಥಳೀಯ ಪೊಲೀಸರ ಸಹಾಯದೊಂದಿಗೆಮ ಹಾರಾಷ್ಟ್ರ ದ ಮೀರಜ್ ನ ರೈಲ್ವೆ ನಿಲ್ದಾಣ ಬಳಿ ಭೀಮಾ ತೀರದ ಮತ್ತೋರ್ವ ಕ್ರಿಮಿನಲ್ ವಿಜು ಬಡಿಗೇರ್ ನನ್ನು ಬಂಧಿಸಿದ್ದಾರೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.