ಜೇವರಗಿ: ಗ್ರಾಮ ಲೆಕ್ಕಾಧಿಕಾರಿ ಮೇಲೆ ದರ್ಪ, ತಾ.ಪಂ ಮಾಜಿ ಸದಸ್ಯ ಮಾನಪ್ಪ ಬಂಧನ
ಜೇವರಗಿ: ಗ್ರಾಮ ಲೆಕ್ಕಾಧಿಕಾರಿ ಮೇಲೆ ದರ್ಪ, ತಾ.ಪಂ ಮಾಜಿ ಸದಸ್ಯ ಮಾನಪ್ಪ ಬಂಧನ
ಕಲಬುರ್ಗಿ: ಜಿಲ್ಲೆಯ ಜೇವರ್ಗಿ ತಾಲೂಕಿನ ಯಲಗೋಡ ಗ್ರಾಮ ಪಂಚಾಯತಿ ಲೆಕ್ಕಾಧಿಕಾರಿ ರಮೇಶಗೆ ಕಾಂಗ್ರೆಸ್ ಮುಖಂಡ, ತಾಪಂ ಮಾಜಿ ಸದಸ್ಯ ಮಾನಪ್ಪ ಜೀವ ಬೆದರಿಕೆ ಒಡ್ಡಿದ್ದಾನೆ. ಫೋನ್ ಮಾಡಿ ಅವಾಚ್ಯ ಶಬ್ಧಗಳಿಂದ ನಿಂದಿಸಿ ದರ್ಪ ತೋರಿದ್ದಾನೆಂಬ ಆರೋಪ ಕೇಳಿಬಂದಿದೆ.
ಅಕ್ರಮ ಸಕ್ರಮ ಯೋಜನೆಯಡಿ ಭೂಮಿಯೊಂದನ್ನು ತನ್ನ ಹೆಸರಿಗೆ ಮಾಡಿಕೊಡುವಂತೆ ಮಾನಪ ಬೆದರಿಕೆವೊಡ್ಡಿದ್ದ, ಬೆದರಿಕೆಗೆ ಬಗ್ಗದಿದ್ದಾಗ ಫೋನ್ ಮಾಡಿ ಜೀವ ಬೆದರಿಕೆ ಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ ಪತ್ನಿಯನ್ನು ಅಪಹರಿಸುವುದಾಗಿ ಬೆದರಿಕೆ ಒಡ್ಡಿದ್ದಾನೆ ಎಂದು ಗ್ರಾ.ಪಂ ಲೆಕ್ಕಾಧಿಕಾರಿ ರಮೇಶ ಶನಿವಾರ ಯಡ್ರಾಮಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಕಾಂಗ್ರೆಸ್ ಮುಖಂಡ ಮಾನಪ್ಪ ಅಕ್ರಮ ಸಕ್ರಮ ಯೋಜನೆಯಲ್ಲಿ ಭೂಮಿ ಮಂಜೂರಾತಿಗೆ ಅರ್ಜಿ ಹಾಕಿದ್ದ, ಆದರೆ ಮಾನಪ್ಪ, ಸಾಗುವಳಿ ಮಾಡುತ್ತಿದ್ದ ಭೂಮಿ ಮೀಸಲು ಅರಣ್ಯಕ್ಕೆ ಸೇರಿತ್ತು, ಹೀಗಾಗಿ, ಗ್ರಾಮ ಲೆಕ್ಕಾಧಿಕಾರಿಯಾಗಿದ್ದ ರಮೇಶ್, ಮೀಸಲಿಟ್ಟ ಅರಣ್ಯ ಭೂಮಿ ಅಂತ ಪಂಚನಾಮೆ ಬರೆದು ಕಳುಹಿಸಿದ್ದರು. ಇದರಿಂದ ರೊಚ್ಚಿಗೆದ್ದಿದ್ದ ಮಾನಪ್ಪ ಶನಿವಾರ ಮುಂಜಾನೆ ಲೆಕ್ಕಾಧಿಕಾರಿ ರಮೇಶಗೆ ಕರೆ ಮಾಡಿ ಬೆದರಿಕೆಯೊಡ್ಡಿದ್ದನಂತೆ.
ಗ್ರಾಮ ಲೆಕ್ಕಾಧಿಕಾರಿಗೆ ನೀಡಿರುವ ಜೀವ ಬೆದರಿಕೆ ಪ್ರಕರಣದಡಿ ಇಂದು ಕರಕಳ್ಳಿ ಕ್ರಾಸ್ ಬಳಿ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ತಾಲೂಕು ಪಂಚಾಯತಿ ಸದಸ್ಯ ಮಾನಪ್ಪನನ್ನು ಯಡ್ರಾಮಿ ಪೊಲೀಸರು ಬಂಧಿಸಿದ್ದಾರೆ.