ನಡು ರಸ್ತೆಯಲ್ಲಿ ಚಪ್ಪಲಿ ತೂರಾಟ : ವೀರಶೈವ – ಲಿಂಗಾಯತರ ಬಡಿದಾಟ!
ಕಲಬುರಗಿ: ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಬಸವತತ್ವ ಒಪ್ಪುವ ಲಿಂಗಾಯತ / ವೀರಶೈವ ಸ್ವತಂತ್ರ ಧರ್ಮವಾಗಿದ್ದು ಅಲ್ಪಸಂಖ್ಯಾತ ಮಾನ್ಯತೆ ನೀಡುವಂತೆ ಕೇಂದ್ರಕ್ಕೆ ಶಿಫಾರಸ್ಸು ಮಾಡಲು ನಿರ್ಧರಿಸಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ನಗರದ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಲಿಂಗಾಯತ ಸಮುದಾಯದ ಮುಖಂಡರು ವಿಜಯೋತ್ಸವ ಆಚರಿಸಿದರು. ಇದೇ ವೇಳೆ ಪ್ರತಿಭಟನೆಗೆ ಮುಂದಾಗಿದ್ದ ವೀರಶೈವ ಮುಖಂಡರ ಪೈಕಿ ಎಮ್.ಎಸ್.ಪಾಟೀಲ್ ಚಪ್ಪಲಿ ಪ್ರದರ್ಶನ ಮಾಡಿದ್ದಾರೆ. ಪರಿಣಾಮ ಎರಡೂ ಗುಂಪುಗಳ ಮದ್ಯೆ ಸಂಘರ್ಷ ನಡೆದಿದೆ. ಎಮ್.ಎಸ್.ಪಾಟೀಲ್ ಮೇಲೆ ಲಿಂಗಾಯತ ಮುಖಂಡರು ಹಲ್ಲೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಸಿದ್ಧರಾಮಯ್ಯ ಸರ್ಕಾರದ ನಿರ್ಧಾರ ಖಂಡಿಸಿ ಎಮ್.ಎಸ್.ಪಾಟೀಲ್ ಮತ್ತು ಗುಂಪು ಪ್ರತಿಭಟನೆ ನಡೆಸುತ್ತಿತ್ತು. ಸಿಎಂ ಭಾವಚಿತ್ರಕ್ಕೆ ಬೆಂಕಿಯಿಟ್ಟು ಆಕ್ರೋಶ ವ್ಯಕ್ತಪಡಿಸಲಾಗುತ್ತೊತ್ತು. ಇದೇ ವೇಳೆ ಲಿಂಗಾಯತ ಮುಖಂಡರು ವಿಜಯೋತ್ಸವ ಯಾತ್ರೆ ಬಂದಿದ್ದಾರೆ. ಈ ವೇಳೆ ಎಮ್.ಎಸ್.ಪಾಟೀಲ್ ಚಪ್ಪಲಿ ಪ್ರದರ್ಶಿಸಿದ್ದು ಘರ್ಷಣೆಗೆ ಕಾರಣ ಆಗಿದೆ ಎನ್ನಲಾಗಿದೆ. ಆದರೆ, ನಮ್ಮ ಪ್ರತಿಭಟನೆಯನ್ನು ಹತ್ತಿಕ್ಕಲು ಲಿಂಗಾಯತ ಮುಖಂಡರು ಹಲ್ಲೆ ನಡೆಸಿ ದೌರ್ಜನ್ಯ ಎಸಗಿದ್ದಾರೆ ಎಂದು ಪಾಟೀಲ್ ಆರೋಪಿಸಿದ್ದಾರೆ.
ಸರ್ಕಾರದ ನಿರ್ಧಾರ ಸ್ವಾಗತಿಸಿ ಹೋರಾಟಕ್ಕೆ ಜಯ ಸಿಕ್ಕ ಖುಷಿಯಲ್ಲಿ ವಿಜಯೋತ್ಸವ ಆಚರಿಸಲಾಗುತ್ತಿತ್ತು. ಆದರೆ, ಸರ್ದಾರ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಎಮ್.ಎಸ್.ಪಾಟೀಲ್ ಚಪ್ಪಲಿ ಪ್ರದರ್ಶಿಸಿ ಅನುಚಿತವಾಗಿ ವರ್ತಿಸಿದ್ದಾರೆ. ಪರಿಣಾಮ ಪಾಟೀಲ್ ವರ್ತನೆಯನ್ನು ಖಂಡಿಸಿಲಾಯಿತು. ಅನುಚಿತವಾಗಿ ವರ್ತಿಸಿದ ಪಾಟೀಲ್ ನನ್ನು ಪೊಲೀಸರಿಗೆ ಒಪ್ಪಿಸಲಾಯಿತು ಎಂದು ಲಿಂಗಾಯತ ಸಮುದಾಯದ ಮುಖಂಡರು ಹೇಳುತ್ತಾರೆ.
ವೀರಶೈವ – ಲಿಂಗಾಯತ ಬಣಗಳ ಬೀದಿ ರಂಪಾಟ ಕಂಡು ಜನ ಬೆಚ್ಚಿಬಿದ್ದಿದ್ದಾರೆ. ಸ್ಟೇಷನ್ ಬಜಾರ್ ಠಾಣೆ ಪೊಲೀಸರು ಮದ್ಯೆ ಪ್ರವೇಶಿಸಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಎರಡೂ ಗುಂಪುಗಳ ನಡುವಿನ ಈ ಸಂಘರ್ಷ ಇನ್ನು ಯಾವ ಹಂತ ತಲುಪಲಿದೆ ಎಂಬುದನ್ನು ಕಾದು ನೋಡಬೇಕಿದೆ.