ನೋಟಿಗಾಗಿ ಓಟು ಮಾರಿಕೊಳ್ಳಬೇಡಿ: ಮಹಾಮನಿ
ಯಾದಗಿರಿಃ ಲೋಕಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಏಪ್ರಿಲ್ 23ರಂದು ಮತದಾನ ನಡೆಯಲಿದ್ದು, ಪ್ರತಿಯೊಬ್ಬ ಮತದಾರ ಮತದಾನ ಮಾಡುವುದು ಪವಿತ್ರ ಕಾರ್ಯ ಎಂಬುದನ್ನು ಅರಿತು ತಮ್ಮ ಹಕ್ಕು ಚಲಾಯಿಸಬೇಕು. ಯಾವುದೇ ಕಾರಣಕ್ಕೂ ನೋಟಿಗಾಗಿ ಓಟು ಮಾರಿಕೊಳ್ಳಬಾರದು ಎಂದು ಜಿಲ್ಲಾ ಚುನಾವಣಾ ರಾಯಭಾರಿಗಳಾದ ಹಾಸ್ಯ ಕಲಾವಿದ ಬಸವರಾಜ ಮಹಾಮನಿ ಅವರು ಹೇಳಿದರು.
ಸೈದಾಪುರ ಗ್ರಾಮ ಪಂಚಾಯಿತಿ ಆವರಣದಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಯಾದಗಿರಿ ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಸಂಯುಕ್ತಾಶ್ರಯದಲ್ಲಿ ಲೋಕಸಭಾ ಸಾರ್ವತ್ರಿಕ ಚುನಾವಣೆ-2019ರ ಪ್ರಯುಕ್ತ ಆಯೋಜಿಸಿದ್ದ ಮತದಾನದ ಅರಿವು ಮೂಡಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ, ಅವರು ಮಾತನಾಡಿದರು.
ಮತದಾನ ದಿನವನ್ನು ಹಬ್ಬದ ರೀತಿಯಲ್ಲಿ ಆಚರಿಸಬೇಕು. ಮನೆಯಲ್ಲಿನ ಮದುವೆ ದಿನಾಂಕ ತಿಳಿಸಿದಂತೆಯೆ ಮತದಾನ ದಿನಾಂಕದ ಬಗ್ಗೆ ತಿಳಿಸಬೇಕಾಗುತ್ತದೆ. ಭಾರತ ಚುನಾವಣಾ ಆಯೋಗವು ಅಕ್ರಮ ತಡೆಗಟ್ಟಲು “ಸಿ-ವಿಜಿಲ್” ಆ್ಯಪ್ ಪರಿಚಯಿಸಿದ್ದು, ಇದರ ಮೂಲಕ ಚುನಾವಣೆಯಲ್ಲಿ ಮದ್ಯ, ಹಣ ಅಥವಾ ಇನ್ನಿತರೆ ಯಾವುದೇ ವಸ್ತುಗಳನ್ನು ಹಂಚಿಕೆ ಮಾಡಿದರೆ ಅಥವಾ ಆಮಿಷ ಒಡ್ಡಿದರೆ ಫೋಟೊ ಹಾಗೂ ವೀಡಿಯೊ ಸಹಿತ ದೂರು ನೀಡಬಹುದಾಗಿದೆ ಎಂದು ಮಾಹಿತಿ ನೀಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರಾದ ಪ್ರಭಾಕರ ಅವರು ಮಾತನಾಡಿ, ಮತದಾನ ಮಾಡುವಲ್ಲಿ ಮಹಿಳೆಯರ ಪಾತ್ರ ತುಂಬಾ ಮಹತ್ವದಾಗಿದೆ. ಒಬ್ಬ ಮಹಿಳೆ ಶಿಕ್ಷಿತಳಾದರೆ ಇಡೀ ಕುಟುಂಬವೆ ಶಿಕ್ಷಿತರಾದಂತೆ. ಅದರಂತೆ ಮತದಾನ ಮಹತ್ವವನ್ನು ಒಬ್ಬ ಮಹಿಳೆ ಅರಿತುಕೊಂಡರೆ ಅದು ನೂರು ಮಹಿಳೆಯರಿಗೆ ಹೇಳಿದಂತಾಗುತ್ತದೆ.
ಮತದಾನ ಎಂಬುದು ತುಂಬಾ ಶ್ರೇಷ್ಠ ಮತ್ತು ಪವಿತ್ರವಾದದ್ದು. ಇದನ್ನು ನಾವು ಯಾವುದೇ ಕಾರಣಕ್ಕೂ ಆಮಿಷಗಳಿಗೆ ಬಲಿಕೊಡಬಾರದು. ಯಾದಗಿರಿ ಜಿಲ್ಲೆಯು ಮತದಾನ ಪ್ರಮಾಣದಲ್ಲಿ ಮುಂಚೂಣಿಯಲ್ಲಿರಲು ಪ್ರತಿಯೊಬ್ಬ ಮತದಾರ ಮತದಾನ ಮಾಡುವ ಅವಶ್ಯಕತೆ ಇದೆ ಎಂದು ಹೇಳಿದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ರಾಧಾ ಜಿ.ಮಣ್ಣೂರ ಅವರು ಮತದಾನ ಪ್ರತಿಜ್ಞಾ ವಿಧಿ ಬೋಧಿಸಿದರು. ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಗಿರೀಜಾ ಅವರು ಸೇರಿದಂತೆ ಪೊಲೀಸ್ ಇಲಾಖೆ ಸಿಬ್ಬಂದಿ, ಸ್ತ್ರೀಶಕ್ತಿ ಸಂಘದ ಮಹಿಳೆಯರು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಪ್ರಧಾನಮಂತ್ರಿ ಮಾತೃವಂದನಾ ಯೋಜನೆಯ ಜಿಲ್ಲಾ ಸಂಯೋಜಕ ಯಲ್ಲಪ್ಪ ಕೆ. ಅವರು ನಿರೂಪಿಸಿದರು. ಮೇಲ್ವಿಚಾರಕಿ ಮಲ್ಲಮ್ಮ ಬಂದರವಾಡ ವಂದಿಸಿದರು.