ಯಾದಗಿರಿಃ ಪ್ಯಾರಾ ಗ್ಲೈಡರ್ ಮೂಲಕ ಮತದಾನ ಜಾಗೃತಿ
ವಿಶಿಷ್ಠ ರೀತಿಯಲ್ಲಿ ಮತದಾನ ಜಾಗೃತಿ
ಯಾದಗಿರಿ: ಲೋಕಸಭಾ ಸಾರ್ವತ್ರಿಕ ಚುನಾವಣೆ-2019ರ ಪ್ರಯುಕ್ತ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಯಾದಗಿರಿ ನಗರದ ಬಾನಂಗಳದಲ್ಲಿ ಪ್ಯಾರಾ ಗ್ಲೈಡರ್ ಮೂಲಕ ಶನಿವಾರ ವಿನೂತನವಾಗಿ ಮತದಾರರಲ್ಲಿ ಮತದಾನದ ಕುರಿತು ಜಾಗೃತಿ ಮೂಡಿಸಲಾಯಿತು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ಎಂ.ಕೂರ್ಮಾ ರಾವ್ ಅವರು ಕುಳಿತ ಪ್ಯಾರಾ ಗ್ಲೈಡರ್‍ಗೆ ಜಿಲ್ಲಾ ಪಂಚಾಯಿತಿ ಮುಖ್ಯ ನಿರ್ವಾಹಕ ಅಧಿಕಾರಿಗಳಾದ ಕವಿತಾ ಎಸ್.ಮನ್ನಿಕೇರಿ ಅವರು ವಿದ್ಯುಕ್ತ ಚಾಲನೆ ನೀಡಿದರು.
ನಂತರ ಜಿ.ಪಂ ಸಿಇಒ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷಿಕೇಶ್ ಭಗವಾನ್ ಸೋನಾವಣೆ ಅವರು ಸಹ ಪ್ಯಾರಾ ಗ್ಲೈಡರ್‍ನಲ್ಲಿ ಕುಳಿತು ಮತದಾನದ ಜಾಗೃತಿ ಮೂಡಿಸಿದರು.
ಜಿಲ್ಲೆಯಾದ್ಯಂತ ಏಪ್ರಿಲ್ 23ರಂದು ನಡೆಯುವ ಲೋಕಸಭಾ ಚುನಾವಣೆ ಮತದಾನ ದಿನದಂದು ಪ್ರತಿಯೊಬ್ಬರೂ ಕಡ್ಡಾಯವಾಗಿ ಮತದಾನ ಮಾಡುವಂತೆ ಕೋರಲಾಯಿತು.
ನಗರದ ಸ್ಟೇಷನ್ ಏರಿಯಾ, ಬಸ್ ನಿಲ್ದಾಣ, ಗಾಂಧಿ ವೃತ್ತ ಸೇರಿದಂತೆ ಇನ್ನಿತರ ಪ್ರದೇಶಗಳ ಬಾನಂಗಳದಲ್ಲಿ ಹಾರಾಡಿದ ಪ್ಯಾರಾ ಗ್ಲೈಡರ್ ಮೂಲಕ ಕಡ್ಡಾಯ ಮತದಾನಕ್ಕಾಗಿ ಸಾರ್ವಜನಿಕರಿಗೆ ಮನವಿ ಮಾಡುವ ಕರಪತ್ರಗಳನ್ನು ಗಾಳಿಯಲ್ಲಿ ತೇಲಿಬಿಡಲಾಯಿತು. ವಿನೂತನವಾಗಿ ಮತದಾನ ಜಾಗೃತಿಗೆ ಬಳಸಿದ ಪ್ಯಾರಾ ಗ್ಲೈಡರ್ ಅನ್ನು ಕಂಡ ಸಾರ್ವಜನಿಕರು ಆಕರ್ಷಿತರಾದರು.