ಹೈವೇಲಿ ಬ್ರೇಕ್ ಹಾಕಿದ ಸರ್ಕಾರಿ ಬಸ್ ಚಾಲಕ : ಸರಣಿ ಅಪಘಾತ
ಚಿತ್ರದುರ್ಗ: ನಗರದ ಚಳ್ಳಕೆರೆ ಗೇಟ್ ಬಳಿಯ ರಾಷ್ಟ್ರೀಯ ಹೆದ್ದಾರಿಯ 4ರಲ್ಲಿ ಬೆಂಗಳೂರಿನಿಂದ ಕೊಪ್ಪಳಕ್ಕೆ ತೆರಳುತ್ತಿದ್ದ ಕೆಎಸ್ಆರ್ ಟಿಸಿ ಬಸ್ ಚಾಲಕ ಏಕಾಏಕಿ ಬಸ್ ಗೆ ಬ್ರೇಕ್ ಹಾಕಿ ನಿಲ್ಲಿಸಿದ್ದಾನೆ. ಬಸ್ ಹಿಂದೆ ಚಲಿಸುತ್ತಿದ್ದ ಲಿಕ್ಕರ್ ಸಾಗಿಸುತ್ತಿದ್ದ ಲಾರಿ ಚಾಲಕನೂ ಸಹ ತಕ್ಷಣಕ್ಕೆ ಬ್ರೇಕ್ ಹಾಕಿ ಲಾರಿ ನಿಲ್ಲಿಸಿದ್ದಾನೆ. ಆದರೆ, ಲಾರಿಯ ಹಿಂದೆ ಬರುತ್ತಿದ್ದ ವಿಆರ್ ಎಲ್ ಬಸ್ ಚಾಲಕ ಮಾತ್ರ ವೇಗ ನಿಯಂತ್ರಿಸಲಾಗದೆ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಘಟನೆ ನಡೆದಿದೆ. ಪರಿಣಾಮ ಕೆಲ ಕಾಲ ಹೆದ್ದಾರಿ ಸಂಚಾರ ಅಸ್ತವ್ಯಸ್ಥಗೊಂಡಿತ್ತು.
ಸರಣಿ ಅಪಘಾತದ ಪರಿಣಾಮ ಬೆಂಗಳೂರಿನಿಂದ ಬೆಳಗಾವಿಗೆ ತೆರಳುತ್ತಿದ್ದ ವಿಆರ್ ಎಲ್ ಬಸ್ ನಲ್ಲಿದ್ದ ಐವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಅದೃಷ್ಠವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಅಪಘಾತಕ್ಕೆ ನಿಖರವಾದ ಕಾರಣವೇನು. ಯಾರ ತಪ್ಪಿನಿಂದ ಅಪಘಾತ ಸಂಭವಿಸಿದೆ ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.