ಕೆಳ ಭಾಗದ ರೈತರ ಜಮೀನಿಗೆ ನೀರು ಹರಿಸಲು ಮಾಗನೂರ ಆಗ್ರಹ
ಸಮರ್ಪಕವಾಗಿ ಕಾಲುವೆಗೆ ನೀರು ಹರಿಸಲು ಬಿಜೆಪಿ ಮನವಿ
ಯಾದಗಿರಿಃ ಜಿಲ್ಲೆಯ ಶಹಾಪುರ ತಾಲೂಕಿನ ಕೆಳಭಾಗದ ವಿವಿಧ ಗ್ರಾಮಗಳ ಜಮೀನುಗಳಿಗೆ ಕೃಷ್ಣಾ ಕಾಲುವೆ ಮೂಲಕ ಸಮರ್ಪಕವಾಗಿ ನೀರು ತಲುಪುತ್ತಿಲ್ಲ. ಕೂಡಲೇ ನಂದಳ್ಳಿ, ಪರಸಾಪುರ, ಬೀರನೂರ, ಮರಮಕಲ್ ಸೇರಿದಂತೆ ಇತರೆ ಗ್ರಾಮಗಳ ಜಮೀನುಗಳಿಗೆ ಕಾಲುವೆ ಮೂಲಕ ನೀರು ಹರಿಸಬೇಕೆಂದು ಆಗ್ರಹಿಸಿ ಬಿಜೆಪಿ ಜಿಲ್ಲಾಧ್ಯಕ್ಷ ಚಂದ್ರಶೇಖರಗೌಡ ಮಾಗನೂರ ಆಗ್ರಹಿಸಿದರು.
ಮಂಗಳವಾರ ಭೀಮರಾಯನ ಗುಡಿಯಲ್ಲಿರುವ ಕೃಷ್ಣಾ ಭಾಗ್ಯ ಜಲ ನಿಗಮ ಕಚೇರಿಯ ಮುಖ್ಯ ಇಂಜಿನೀಯರರಿಗೆ ಮನವಿ ಸಲ್ಲಿಸಿದ ಅವರು, ವಾರಬಂದಿ ಪದ್ಧತಿ ಮೂಲಕ ನೀರು ಸಮಪರ್ಕವಾಗಿ ತಲುಪಲು ಸಾಧ್ಯವಿಲ್ಲ. ರೈತರ ಬಾಯಿಗೆ ಬಂದ ತುತ್ತು ಕೈಗೆ ಬಾರದಂತಾಗುತ್ತಿದೆ. ರೈತರು ಫಸಲು ಕೈಗೆಟುಕುತ್ತದೆ ಅನ್ನುವಷ್ಟರಲ್ಲಿ ನೀರು ದೊರೆಯದೆ ಬೆಳೆ ಹಾಳಾಗುತ್ತಿದೆ. ಕಾರಣ ಅಧಿಕಾರಿಗಳು ವಸ್ತುಸ್ಥಿತಿ ಅರಿತು ನೀರು ಹರಿಸಬೇಕು ಎಂದು ಒತ್ತಾಯಿಸಿದರು.
ಕೂಡಲೇ ಕಾಲುವೆಗೆ 1.75 ರಷ್ಟು ನೀರು ಹರಿಸಬೇಕು ಇಲ್ಲವಾದಲ್ಲಿ ರೈತರೊಂದಿಗೆ ಹೋರಾಟ ಅನಿವಾರ್ಯ ಎಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ಅಡಿವೆಪ್ಪ ಜಾಕಾ, ತಾಲೂಕು ಬಿಜೆಪಿ ಉಪಾಧ್ಯಕ್ಷ ವೆಂಕಟೇಶ ಆಲೂರ ಸೇರಿದಂತೆ ವಿವಿಧ ಗ್ರಾಮಗಳ ರೈತರು ಭಾಗವಹಿಸಿದ್ದರು.