ನಮ್ಮ ಕರ್ನಾಟಕದಲ್ಲಿನ್ನು ವಾರ ಪತ್ರಿಕೆಗಳ ಯುಗಾಂತ್ಯ!
–ಮಲ್ಲಿಕಾರ್ಜುನ ಮುದನೂರ್
ಮುಂದುವರೆದ ತಂತ್ರಜ್ಞಾನ, ಕ್ಷಣಾರ್ಧದಲ್ಲೇ ಲಭಿಸುವ ಕ್ಷಣಕ್ಷಣದ ಮಾಹಿತಿ. ಸಾಮಾಜಿಕ ಜಾಲತಾಣ, ಲೈವ್ ಸುದ್ದಿ ವಾಹಿನಿಗಳು, ಆನ್ ಲೈನ್ ಪತ್ರಿಕೆಗಳಿಂದಾಗಿ ಪತ್ರಿಕೆಗೆಳ ಪ್ರಸಾರ ಸಂಖ್ಯೆ ಇಳಿಮುಖಗೊಂಡಿದೆ. ಅದರಲ್ಲೂ ವಾರ ಪತ್ರಿಕೆಗಳ ಸಂಖ್ಯೆಯಂತೂ ಪಾತಾಳಕ್ಕೆ ಕುಸಿದಿದೆ ಎಂಬುದು ಪರಮ ಸತ್ಯ. ಪರಿಣಾಮ ಬಹುತೇಕ ದಿನ ಪತ್ರಿಕೆಗಳೂ ಆ ಕ್ಷಣದ ಮಾಹಿತಿ ಅಪಡೇಟ್ ಮಾಡಲು ಮುಂದಾಗಿದ್ದು, ಆನ್ ಲೈನ್ ನಲ್ಲೂ ಲಭ್ಯವಾಗುತ್ತಿವೆ.
ಆದರೆ ವಾರ ಪತ್ರಿಕೆಗಳು ಮಾತ್ರ ಅಕ್ಷರಶ: ಅಳಿವಿನಂಚಿನಲ್ಲಿವೆ ಅಂದರೆ ತಪ್ಪಾಗದು?. ಒಂದು ಕಾಲದಲ್ಲಿ ಸರ್ಕಾರವನ್ನು ಉರುಳಿಸುವ ಶಕ್ತಿ ಹೊಂದಿದ್ದ ಲಂಕೇಶ್ ಪತ್ರಿಕೆ ಈಗ ಬರೀ ನೆನಪು. ರಾಜ್ಯದ ಜನರ ವಿಚಾರ ಲಹರಿಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವ ದೀಪ ನಂದಿದಂತಾಗಿದೆ. ಜನಪರವಾಗಿದ್ದ ಪವರ್ ಒಂದು ಇಲ್ಲದಂತಾಗಿದೆ. ಲಂಕೇಶ್ ಮೇಷ್ಟ್ರ ಮಗಳು ಹೊರ ತರುತ್ತಿದ್ದ ಗೌರಿ ಲಂಕೇಶ್ ಪತ್ರಿಕೆಯೂ ಸಹ ಗೌರಿ ಹತ್ಯೆಯ ನಂತರ ಪ್ರಕಟವಾಗುತ್ತಿಲ್ಲ. ಪರಿಣಾಮ ಪ್ರಗತಿಪರ ನಿಲುವಿನ ಪ್ರಬಲ ಅಸ್ತ್ರವೊಂದು ಉರುಳಿದಂತಾಗಿದೆ. ಅಗ್ನಿ ಶ್ರೀಧರ್ ನೇತೃತ್ವದ ಅಗ್ನಿ ಪತ್ರಿಕೆಯೂ ಸಹ ಕಳೆದ 3 ವಾರಗಳಿಂದ ಪ್ರಕಟವಾಗುತ್ತಿಲ್ಲ. ಇತ್ತೀಚೆಗಷ್ಟೇ ಅಗ್ನಿ ಪತ್ರಿಕೆಯ ಪ್ರಕಟಣೆ ನಿಲ್ಲಿಸಲಾಗಿದೆ ಎನ್ನಲಾಗುತ್ತಿದೆ.
ಇನ್ನು ರವಿ ಬೆಳಗೆರೆ ಸಾರಥ್ಯದ ಹಾಯ್ ಬೆಂಗಳೂರ್ ಪತ್ರಿಕೆಯನ್ನು ಒಂದು ಕಾಲದಲ್ಲಿ ಯುವ ಪೀಳಿಗೆ ಕಾದು ಕುಳಿತು ಕೊಂಡುಕೊಳ್ಳುವ ಸ್ಥಿತಿ ಇತ್ತು. ರವಿ ಬೆಳಗೆರೆ ಬರಹಗಳಿಂದಾಗಿಯೇ ಅನೇಕರು ಪತ್ರಿಕೋದ್ಯಮದತ್ತ ಆಕರ್ಷಿತರಾದರೆಂಬುದು ಪರಮ ಸತ್ಯ. ಹೀಗಾಗಿ, ತಾಲೂಕು ಮಟ್ಟದಲ್ಲೂ ಸಹ ಒಂದೊಂದು ಬುಕ್ ಸ್ಟಾಲ್ ಗಳಲ್ಲಿ ನೂರಾರು ಪತ್ರಿಕೆಗಳು ಸೇಲ್ ಆಗುತ್ತಿದ್ದವು. ಇತ್ತೀಚೆಗೆ ಅದೂ ಸಹ ಬೆರಳೆಣಿಕೆಗೆ ಇಳಿದಿದೆ. ಪರಿಣಾಮ ಕಳೆದ ವಾರವಷ್ಟೇ ಹಾಯ್ ಬೆಂಗಳೂರ್ ಪತ್ರಿಕೆ ನಿಲ್ಲಿಸುವ ಬಗ್ಗೆ ರವಿ ಬೆಳಗೆರೆ ಚಿಂತನೆ ನಡೆಸಿದ್ದಾರೆಂಬ ಸುದ್ದಿ ಇತ್ತು.
ಹಾಯ್ ಬೆಂಗಳೂರ್ ಪತ್ರಿಕೆ ಬಂದಾಗುತ್ತದೆ ಎಂಬ ಸುದ್ದಿಯ ಬೆನ್ನಲ್ಲೇ ಸಹೋದ್ಯೋಗಿ ಸುನೀಲ್ ಹೆಗ್ಗರವಳ್ಳಿ ಹತ್ಯೆಗೆ ಸುಪಾರಿ ನೀಡಿದ ಕೇಸಿನಲ್ಲಿ ರವಿ ಬೆಳಗೆರೆ ಬಂಧನಕ್ಕೊಳಗಾಗಿದ್ದರು. ಹೀಗಾಗಿ, ಹಾಯ್ ಬೆಂಗಳೂರ್ ಪತ್ರಿಕಾ ಕಚೇರಿಯೂ ಸಹ ಬಾಗಿಲು ಹಾಕುವ ಹಂತದಲ್ಲಿದೆ ಎಂದೇ ಹೇಳಲಾಗುತ್ತಿದೆ. ಪರಿಣಾಮ ಕರ್ನಾಟಕದ ಬಹುತೇಕ ಪ್ರಮುಖ ವಾರ ಪತ್ರಿಕೆಗಳೀಗ ಜೀವ ಕಳೆದು ಕೊಂಡಿವೆ. ವಾರ ಪತ್ರಿಕೆಗಳಿಗೆ ಪರ್ಯಾಯ ರೂಪ ಸಹ ಇಲ್ಲದೆ ಸಮಾಧಿ ಸ್ಥಿತಿ ತಲುಪಿವೆ. ಹೀಗಾಗಿ, ಇದು ವಾರ ಪತ್ರಿಕೆಗಳ ಯುಗಾಂತ್ಯದ ಕಾಲ ಅಲ್ಲವೇ?