ಶೋಕಾಚರಣೆ ಮಾಡದ ತಹಸೀಲ್ದಾರ ಜನರ ಆಕ್ರೋಶ
ತಹಸೀಲ್ದಾರರಿಂದ ವಾಜಪೇಯಿ ನಿಧನಕ್ಕೆ ಅಗೌರವ ಜನರ ಆಕ್ರೋಶ
ಯಾದಗಿರಿಃ ಜಿಲ್ಲೆಯ ಶಹಾಪುರ ನಗರದ ತಹಸೀಲ್ ಕಚೇರಿಯಲ್ಲಿ ಅಧಿಕಾರಿಗಳು ಸರ್ಕಾರಿ ಆದೇಶಕ್ಕೂ ಕವಡೆ ಕಾಸಿನ ಕಿಮ್ಮತ್ತು ನೀಡದೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ನಿಧನಕ್ಕೆ ಅಗೌರವ ತೋರಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾಜಿ ಪ್ರಧಾನಿ ವಾಜಪೇಯಿ ಅವರ ನಿಧನಕ್ಕೆ ಇಡೀ ದೇಶವೇ ಶೋಕಸಾಗರದಲ್ಲಿ ಮುಳುಗಿದೆ.
ರಾಜ್ಯ ಸೇರಿದಂತೆ ದೇಶದಾದ್ಯಂತ ಶೋಕಾಚರಣೆ ನಡೆಸಲಾಗುತ್ತಿದೆ. ಅಲ್ಲದೆ, ಸರ್ಕಾರಿ ಕಚೇರಿಗಳಲ್ಲಿ ಅರ್ಧಕ್ಕೆ ಧ್ವಜ ಹಾರಿಸುವಂತೆ ಸರ್ಕಾರ ಸೂಚನೆ ನೀಡಿದೆ.
ಆದಾಗ್ಯೂ ಶಹಾಪುರ ತಹಸೀಲ್ದಾರ ಸಂಗಮೇಶ ಅವರು, ತಾಲೂಕು ಆಡಳಿತ ಕಚೇರಿ ಮೇಲೆ ಅರ್ಧಕ್ಕೆ ಧ್ವಜ ಹಾರಿಸದೆ ಅಟಲಜೀಗೆ ಅವಮಾನ ಮಾಡಿದ್ದಾರೆ ಎಂದು ಕನ್ನಡಪರ ಸಂಘಟನೆಗಳು ದೂರಿವೆ.
ಸರ್ಕಾರ ರಜೆ ಆದೇಶ ನೀಡಿದ ಕೂಡಲೇ ಕಚೇರಿಗೆ ಬಾರದ ಅಧಿಕಾರಿ, ಸಿಬ್ಬಂದಿ ಕಚೇರಿಯ ಮೇಲೆ ಅರ್ಧಕ್ಕೆ ಧ್ವಜವನ್ನು ಹಾರಿಸದೆ ಸರ್ಕಾರಿ ಆದೇಶವನ್ನು ಧಿಕ್ಕರಿಸಿದ್ದಾರೆ ಎಂದು ಕರಸೇನಾ ಜಿಲ್ಲಾಧ್ಯಕ್ಷ ಮೌನೇಶ ಸುರಪುರಕರ್ ಮತ್ತು ಕನ್ನಡ ಸೇನೆ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ನಗನೂರ ಆರೋಪಿಸಿದ್ದಾರೆ.
ಶೋಕಾಚರಣೆ ನಿಮಿತ್ತ ಅರ್ಧ ಧ್ವಜಾರೋಹಣ ನೆರವೇರಿಸದೆ, ಮಾಜಿ ಪ್ರಧಾನಿಗೆ ಅಗೌರವ ತೋರಿದ ಇಲ್ಲಿನ ತಹಸೀಲ್ದಾರ ವಿರುದ್ಧ ಜಿಲ್ಲಾಧಿಕಾರಿಗಳು ಶಿಸ್ತು ಕ್ರಮಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.