ಸೂಕ್ಷ್ಮ ಸ್ವಭಾವ ಅಂಜಿಕೆಯೇ ಅಳುಮುಂಜಿ.!
ಸ್ವಲ್ಪ ಗದರಿಸಿದರೂ ಅಳುತ್ತಾರೆ..ಯಾಕೆ..?
ಜಯಶ್ರೀ.ಜೆ. ಅಬ್ಬಿಗೇರಿ ಬೆಳಗಾವಿ.
ನಗು ಅಳು ಮಾನವನ ಸಹಜ ಪ್ರವೃತ್ತಿಗಳು. ಜೀವನದಲ್ಲಿ ಅವುಗಳ ಪ್ರಾಮುಖ್ಯತೆಯನ್ನು ಅಲ್ಲಗಳೆಯುವಂತಿಲ್ಲ. ನಗು ಅಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಸಣ್ಣ ಪುಟ್ಟದ್ದಕ್ಕೆ ಹರ್ಷವನ್ನು ವ್ಯಕ್ತಪಡಿಸುತ್ತ ನಗೆ ಚಿಮ್ಮಿಸುವವರು ಎಲ್ಲರಿಗೂ ಇಷ್ಟವಾಗುತ್ತಾರೆ. ಚಿಕ್ಕ ಪುಟ್ಟ ವಿಷಯಕ್ಕೂ ಅತ್ತು ಕರೆಯುವ ರೂಢಿಯವರನ್ನು ಕಂಡರೆ ಅಳು ಮುಂಜಿ ಎಂದು ಬಯ್ಯುವವರೇ ಜಾಸ್ತಿ. ಯಾರಾದರೂ ಸರಿದು ನಿಲ್ಲು ಎಂದರೂ ಸಾಕು ಕಣ್ಣಲ್ಲಿ ನೀರು ಬುಳು ಬುಳು ಸುರಿಯಲಾರಂಭಿಸುತ್ತದೆ.
ಇನ್ನು ಎದುರಿನವರು ಸ್ವಲ್ಪ ಗಟ್ಟಿಯಾಗಿ ಮಾತನಾಡಿದರೆ ಗಂಗಾ ಯಮುನೆಯರ ಪ್ರವಾಹ ಹರಿಯುತ್ತದೆ. ಅವಳಿರುವುದೇ ಹಾಗೆ. ತುಂಬಾ ಸೂಕ್ಷ್ಮ ಮನಸ್ಸಿನವಳು ಯಾವುದನ್ನು ತಡೆದುಕೊಳ್ಳಲು ಆಗುವುದಿಲ್ಲ. ಸಣ್ಣ ಸಮಸ್ಯೆಗೆ ಹೆದರುತ್ತಾಳೆ ಕಡ್ಡಿಯನ್ನು ಗುಡ್ಡ ಮಾಡಿಕೊಳ್ಳುತ್ತಾರೆ. ಮನದಲ್ಲಿ ಮನೆ ಮಾಡಿದ ಅಂಜಿಕೆ ಅಳುಕುಗಳೇ ಈ ಅಳು ಬುರುಕತನದ ಸ್ವಭಾವಕ್ಕೆ ಮೂಲ ಕಾರಣ. ಪುರುಷರಿಗೆ ಹೋಲಿಸಿದರೆ ಮಹಿಳೆಯರು ಹೆಚ್ಚಾಗಿ ಅಳುತ್ತಾರೆ.
ಅಳುವುದರಿಂದ ಯಾವುದೇ ಪ್ರಯೋಜನವಿಲ್ಲ. ಮನಸ್ಸು ಬಲಹೀನಗೊಳ್ಳುತ್ತದೆ ಹೊರತು ಸಮಸ್ಯೆಗಳಿಗೆ ಪರಿಹಾರವಂತೂ ಸಿಗುವುದಿಲ್ಲ. ಪ್ರತಿಯೊಂದು ವಿಚಾರವನ್ನು ಭಾವನೆಗಳಿಗೆ ತಳಕು ಹಾಕುತ್ತಾ ಸಾಗಿದರೆ ಅಳುವಿನ ಮೇರು ಪರ್ವತ ತಲುಪಬೇಕಾಗುತ್ತದಷ್ಟೆ.
ಅಳಬಾರದೆಂದುಕೊಂಡರೂ ಮನಸ್ಸು ಮಾತು ಕೇಳುವುದೇ ಇಲ್ಲ ಎನ್ನುವುದು ಕೆಲವರ ನೋವಿನ ಅಳಲು. ಅಂಥವರು ಬುದ್ಧಿ ಹೇಳಿದಂತೆ ನಡೆಯಬೇಕು. ಅಳುವುದು ನಿಮ್ಮ ವ್ಯಕ್ತಿತ್ವವನ್ನು ಸಂಪೂರ್ಣವಾಗಿ ಗೌಣವಾಗಿಸುತ್ತದೆ ಎಂದು ಬುದ್ಧಿ ತಿಳಿಸಿ ಹೇಳುತ್ತದೆ. ಮನಸ್ಸಿನ ಭಾವಗಳ ಬಲೆಯಲ್ಲಿ ಸಿಲುಕಿದವರೇ ಅಳುಮುಂಜಿಯಾರಾಗುತ್ತಾರೆ. ಅಳು ಬಂದ ನಿಮಿಷದಲ್ಲಿ ಮನಸ್ಸು ಗಟ್ಟಿ ಮಾಡಿಕೊಂಡರೆ ಗೆದ್ದಂತೆಯೇ ಸರಿ.
ಅಳು ಬಂದರೂ ಅಳ ಬಾರದು ಮನಸ್ಸೇ ಇರು ತಡೆದು ಅಳುವುದರಿಂದ ಮನಸ್ಸಿನ ಭಾರ ಕೊಂಚ ಕಡಿಮೆಯೆನಿಸಿದರೂ ದೈಹಿಕ ಮಾನಸಿಕ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ. ಸಮಸ್ಯೆಗೆ ಹೆದರಿ ಹಿಂದೇಟು ಹಾಕುವುದರ ಬದಲು ಪರಿಹಾರಕ್ಕೆ ಹುಡುಕಿದರೆ ಅಳು ಮಂಗಮಾಯವಾಗುವುದು.
ನಾನು ತುಂಬಾ ಭಾವುಕಳು ನನಗೆ ಎದುರಿಗಿದ್ದವರು ಗದರಿಸಿದರೆ ಬೇರೆ ಯಾರೋ ನನ್ನನ್ನು ಟೀಕಿಸಿದರೆ ಅಳು ಬರುತ್ತದೆ ಎನ್ನುವ ಮನೋಸ್ಥಿತಿಯನ್ನು ಬದಲಾಯಿಸಿಕೊಳ್ಳಿ. ವಾಸ್ತವಿಕತೆಯನ್ನು ಅರ್ಥೈಸಿಕೊಂಡು ನಡೆಯಲು ಪ್ರಯತ್ನಿಸಿ. ಕೆಟ್ಟ ವಿಚಾರಗಳನ್ನು ನಕಾರಾತ್ಮಕತೆಯನ್ನು ಸಮೀಪಕ್ಕೂ ಸುಳಿಯಗೊಡಬೇಡಿ.
ಅಳು ಒತ್ತಡವನ್ನು ಕಡಿಮೆ ಮಾಡಿಕೊಳ್ಳುವ ಒಂದು ತಂತ್ರವಾದ ಅಳು ಭಾವನೆಗಳಿಗೆ ಸಂಬಂಧಿಸಿದ್ದು ನಮಗೆಲ್ಲ ಗೊತ್ತು. ಇದು ಬಹಳಷ್ಟು ಸಾರಿ ನಮ್ಮ ಅಸಹಾಯಕತೆಯನ್ನು ತೋರಿಸುತ್ತದೆ.ಅಳುವಿನ ನೋವು ಬಳಲಿಕೆಯನ್ನು ಹೊತ್ತು ತರುತ್ತದೆ. ಪ್ರತಿಕೂಲ ಪರಿಸ್ಥಿತಿಯಿದೆಯೆಂದು ಧೈರ್ಯ ಕಳೆದುಕೊಂಡು ಕಣ್ಣೀರು ಹಾಕುತ್ತ ಕೈಚೆಲ್ಲಿ ಕುಳಿತರೆ ಅಮೂಲ್ಯ ಜೀವನ ಹಾಳಾಗುತ್ತದೆ.
ಜೀವನ ಅಂದ ಮೇಲೆ ಒಂದೊಂದು ಕಷ್ಟ ಇದ್ದೇ ಇರುತ್ತದೆ ಹಾಗಂತ ಆಕಾಶವೇ ಕಳಚಿಕೊಂಡು ಮೈಮೇಲೆ ಬಿದ್ದವರ ತರ ಅಳದೇ ದಿಟ್ಟವಾಗಿ ಎದುರಿಸುವುದನ್ನು ಕಲಿತರೆ ದೃಢತೆ ಮೂಡಿ ತುಟಿಯಂಚಿನಲ್ಲಿ ನಗು ತಾನಾಗೇ ಮಿಂಚುತ್ತದೆ. ತನ್ನನ್ನು ಗೆಲ್ಲುವ ಶಕ್ತಿ ಹೊಂದಿರುವವನನ್ನು ತಡೆಯುವ ಶಕ್ತಿ ಯಾವುದೂ ಇಲ್ಲವೆಂಬುದು ಸದಾ ನೆನಪಿನಲ್ಲಿರಲಿ.
ಲೇಖಕಿ-ಜಯಶ್ರೀ.ಜೆ. ಅಬ್ಬಿಗೇರಿ. ಬೆಳಗಾವಿ.