ಯಾರ ಕೈಗೆ ಸಿಗಲಿದೆ ಯಾದಗಿರಿ ಮತಕ್ಷೇತ್ರದ ಕಾಂಗ್ರೆಸ್ ಟಿಕೆಟ್!
ಚುನಾವಣ ರಾಜಕೀಯಕ್ಕೆ ಮಾಲಕರೆಡ್ಡಿ ವಿದಾಯ : ಯಾದಗಿರಿಯಲ್ಲಿ ಗರಿಗೆದರಿದ ರಾಜಕೀಯ
-ಮಲ್ಲಿಕಾರ್ಜುನ ಮುದನೂರ್
ಯಾದಗಿರಿಃ ಕಾಂಗ್ರೆಸ್ಸಿನ ಹಿರಿಯ ಶಾಸಕ ಡಾ.ಎ.ಬಿ.ಮಾಲಕರಡ್ಡಿ ಈ ಬಾರಿ ವಿಧಾನಸಭೆ ಚುನಾವಣೆ ಸ್ಪರ್ಧೆಗಿಳಿಯುವುದಿಲ್ಲ ಎಂಬುದಾಗಿ ಇಂದು ಘೋಷಿಸಿದ್ದಾರೆ. ಮಾಲಕರಡ್ಡಿ ಚುನಾವಣ ರಾಜಕೀಯಕ್ಕೆ ಗುಡ್ ಬೈ ಹೇಳಿದ ಕ್ಷಣದಿಂದ ಯಾದಗಿರಿ ಮತಕ್ಷೇತ್ರದಲ್ಲಿ ರಾಜಕೀಯ ಗರಿಗೆದರಿದೆ. ಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಅಬ್ಯರ್ಥಿ ಯಾರೆಂಬ ಲೆಕ್ಕಾಚಾರ ಶುರುವಾಗಿದೆ.
ಮಾಜಿ ಸಚಿವ, ಯಾದಗಿರಿ ಕ್ಷೇತ್ರದ ಹಾಲಿ ಶಾಸಕರಾಗಿರುವ ಡಾ.ಎ.ಬಿ. ಮಾಲಕರಡ್ಡಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾಗಿದ್ದು, ಒಂದು ಸಂದರ್ಭದಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ರೇಸ್ ನಲ್ಲೂ ಹೆಸರು ಕೇಳಿಬಂದಿತ್ತು. ಆದರೆ, ಸಿದ್ಧರಾಮಯ್ಯ ಸರ್ಕಾರ ಡಾ.ಎ.ಬಿ.ಮಾಲಕರಡ್ಡಿಯವರನ್ನು ಗೌರವಯುತವಾಗಿ ನಡೆಸಿಕೊಂಡಿಲ್ಲ ಎಂಬುದು. ಈ ಬಗ್ಗೆ ಮಾಲಕರಡ್ಡಿಯವರೇ ಅನೇಕ ಸಲ ಮನದಾಳದ ನೋವನ್ನು ಹೊರ ಹಾಕಿದ್ದು ಓಪನ್ ಸೀಕ್ರೆಟ್.
ಮಾಲಕರಡ್ಡಿ ಅವರು ಬಿಜೆಪಿ ಸೇರುತ್ತಾರೆ ಎಂಬ ಸುದ್ದಿ ಹಬ್ಬಿದ್ದ ಸಂದರ್ಭದಲ್ಲಿ ಕಳೆದ ಬೆಳಗಾವಿ ಅಧಿವೇಶನದ ವೇಳೆ ಖುದ್ದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರೇ ಮಾಲಕರಡ್ಡಿ ಅವರನ್ನು ಸಮಾಧಾನ ಪಡಿಸಲು ಯತ್ನಿಸಿದ್ದರು. ಆದರೆ, ನೇರ ನಿಷ್ಠುರವಾಗಿ ಮಾತನಾಡುವ ಮಾಲಕರಡ್ಡಿ ಅವರು ಮಾತ್ರ ಸಿಎಂ ಮಾತಿಗೆ ಸೊಪ್ಪು ಹಾಕಿರಲಿಲ್ಲ. ಬದಲಾಗಿ ಪಕ್ಷದಲ್ಲಿನ ಆಂತರಿಕ ರಾಜಕೀಯದ ಬಗ್ಗೆ ಕಡ್ಡಿಮುರಿದಂತೆ ಹೇಳಿ ಬಂದಿದ್ದರಂತೆ.
ಇಂದು ವಯಸ್ಸಿನ ಕಾರಣ ಹೇಳಿ ಚುನಾವಣ ರಾಜಕೀಯದಿಂದ ನಿವೃತ್ತಿ ಹೊಂದುವುದಾಗಿ ಡಾ.ಮಾಲಕರಡ್ಡಿ ಘೋಷಿಸಿದ್ದಾರೆ. ಪರಿಣಾಮ ಯಾದಗಿರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಬ್ಯರ್ಥಿ ಆಕಾಂಕ್ಷಿಗಳೀಗ ಅಖಾಡಕ್ಕೆ ಧುಮುಕಿದ್ದಾರೆ. ಮಾಲಕರಡ್ಡಿ ತರುವಾಯ ಕಲಬುರ್ಗಿಯ ಕಾಡಾ ಮಾಜಿ ಅಧ್ಯಕ್ಷ ಶ್ರೀನಿವಾಸರಡ್ಡಿ ಕಂದಕೂರ ಅವರ ಹೆಸರು ಪ್ರಬಲವಾಗಿ ಕೇಳಿ ಬರುತ್ತಿದೆ.
ಅಂತೆಯೇ ಮಾಜಿ ವಿಧಾನ ಪರಿಷತ್ ಸದಸ್ಯ ಚನ್ನಾರಡ್ಡಿ ತುನ್ನೂರ, ಮಹಿಳಾ ಕೋಟಾದಡಿ ಮಂಜುಳಾ ಗೋಳಿ ಮತ್ತು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮರಿಗೌಡ ಹುಲಕಲ್ ಅವರೂ ಯಾದಗಿರಿ ಮತಕ್ಷೇತ್ರದ ಕಾಂಗ್ರೆಸ್ ಟಿಕೇಟ್ ಆಕಾಂಕ್ಷಿಯಾಗಿದ್ದಾರೆ ಎನ್ನಲಾಗಿದೆ. ಆದರೆ, ಕೊನೆ ಕ್ಷಣದಲ್ಲಿ ಕಾಂಗ್ರೆಸ್ ಹೈಕಮಾಂಡ್ ಯಾರ ಪರ ಒಲವು ತೋರಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಖರ್ಗೆ ಕೈಯಲ್ಲಿದೆಯಾ ಯಾದಗಿರಿ ಟಿಕೇಟ್..?
ಯಾದಗಿರಿ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಟಿಕೇಟ್ ಹಿರಿಯ ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರು ಸೂಚಿಸಿದವರಿಗೆ ನೀಡಲಾಗುತ್ತದೆ. ಖರ್ಗೆ ಅವರು ಈ ಭಾಗದಲ್ಲಿ ಭಾರೀ ಹಿಡಿತವನ್ನು ಹೊಂದಿದವರಾಗಿದ್ದಾರೆ. ಹೈಕಮಾಂಡ ಮಟ್ಟದಲ್ಲಿ ತಮ್ಮದೇ ಆದ ವರ್ಚಸ್ಸನ್ನು ಹೊಂದಿದ್ದಾರೆ. ಹೀಗಾಗಿ, ಸ್ವಂತ ಜಿಲ್ಲೆಯ ಜಿಲ್ಲಾ ಕೇಂದ್ರದ ಶಾಸಕರು ತಮ್ಮ ಬೆಂಬಲಿಗರೇ ಆಗಿರಬೇಕೆಂದು ಬಯಸುವುದು ಸಹಜ. ಹೀಗಾಗಿ, ತಮ್ಮ ನಿಷ್ಠರಿಗೆ ಟಿಕೆಟ್ ಕೊಡಿಸಲಿದ್ದಾರೆ ಎಂಬುದು ಕಾಂಗ್ರೆಸ್ ಕಾರ್ಯಕರ್ತರ ವಾದವಾಗಿದೆ.
ಸದ್ಯ ನಾಲ್ವರು ಆಕಾಂಕ್ಷಿಗಳ ಪೈಕಿ ಶ್ರೀನಿವಾಸರಡ್ಡಿ ಕಂದಕೂರ ಹೆಸರು ಹೆಚ್ಚು ಕೇಳಿ ಬರುತ್ತಿದೆ. ಅಲ್ಲದೆ ಕಂದಕೂರ್ ಅವರೂ ಸಹ ರಡ್ಡಿ ಸಮುದಾಯದವರಾಗಿದ್ದಾರೆ. ಹೀಗಾಗಿ, ಮಾಲಕರೆಡ್ಡಿ ಅವರಿಂದ ತೆರವಾಗುವ ಸ್ಥಾನಕ್ಕೆ ಅದೇ ಸಮುದಾಯದವರಿಗೆ ಟಿಕೆಟ್ ನೀಡಿದರೆ ರಡ್ಡಿ ಸಮುದಾಯ ಪಕ್ಷದ ಪರವಾಗಿರುತ್ತದೆ ಎಂಬುದರ ಬಗ್ಗೆಯೂ ಪಕ್ಷ ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ.
ಕಾಂಗ್ರೆಸ್ ಪಕ್ಷದ ಜಿಲ್ಲಾ ಅದ್ಯಕ್ಷರಾಗಿರುವ ಮರಿಗೌಡ ಹುಲಕಲ್ ಅವರೂ ಸಹ ಮುಖ್ಯಮಂತ್ರಿಗಳಿಗೆ ಆಪ್ತರಾಗಿದ್ದಾರೆ. ಹೀಗಾಗಿ, ಯಾದಗಿರಿ ಮತಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಪಡೆಯುವಲ್ಲಿ ಮರಿಗೌಡ ಅವರೂ ಸಹ ತಮ್ಮದೇ ಆದ ದಾಳ ಉರುಳಿಸಲಿದ್ದಾರೆ ಎನ್ನಲಾಗಿದೆ. ಪರಿಣಾಮ ಕೊನೆ ಗಳಿಗೆಯಲ್ಲಿ ಸದ್ಯದ ನಾಲ್ವರು ಆಕಾಂಕ್ಷಿಗಳ ಹೆಸರುಗಳ ನಡುವೆ ಮತ್ತೋರ್ವ ಅಬ್ಯರ್ಥಿ ದಿಡೀರನೆ ಪ್ರತ್ಯಕ್ಷಗೊಂಡು ಕಾಂಗ್ರೆಸ್ ಟಿಕೆಟ್ ಪಡೆದರೂ ಅಚ್ಚರಿ ಪಡುವಂತಿಲ್ಲ ಎಂಬ ಸುದ್ದಿ ಕಾಂಗ್ರೆಸ್ ಕಾರ್ಯಕರ್ತರಲ್ಲೇ ಕೇಳಿ ಬರುತ್ತಿದೆ.