World Environment Day: ವಿಶ್ವ ಪರಿಸರ ದಿನ ಆಚರಿಸುವುದೇಕೆ?; ಇಲ್ಲಿದೆ ಮಾಹಿತಿ
ಸಕಲ ಜೀವಜಂತುಗಳಿಗೆ ಇರುವುದೊಂದೇ ಮನೆ. ಆದರೆ ಮನುಷ್ಯರ ಹೊರತಾಗಿ ಇನ್ನಾವ ಜೀವಿಗಳೂ ತಮ್ಮ ಮನೆಯನ್ನು ಕೊಳೆ ಮಾಡಿದವರಲ್ಲ. ಇದನ್ನು ಮನವರಿಕೆ ಮಾಡುವ ಉದ್ದೇಶದಿಂದ ಪ್ರತಿವರ್ಷ ಜೂನ್ 5ರಂದು ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತದೆ. ಜೂನ್ 5ರಂದೇ ಪರಿಸರ ದಿನವನ್ನು ಏಕೆ ಆಚರಿಸಬೇಕೆಂಬುವುದಕ್ಕೆ ಇಲ್ಲಿದೆ ಉತ್ತರ- ಸ್ವೀಡನ್‌ನ ಸ್ಟಾಕ್‌ಹೋಂನಲ್ಲಿ 1972ರ ಜೂನ್ 5ರಂದು ನಡೆಸಲಾದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಸಮ್ಮೇಳನದಲ್ಲಿ, ಪರಿಸರದ ಕುರಿತಾಗಿ ವಿಶ್ವದೆಲ್ಲೆಡೆ ಜಾಗೃತಿಯನ್ನು ಹೆಚ್ಚಿಸಬೇಕೆಂಬ ನಿರ್ಣಯವನ್ನು ಅಂಗೀಕರಿಸಲಾಯಿತು.
ಆ ದಿನದ ನೆನಪಿನಲ್ಲಿ, ಅದೇ ದಿನಾಂಕವನ್ನು ವಿಶ್ವ ಪರಿಸರ ದಿನ ಎಂದು ಗುರುತಿಸಲಾಗಿದೆ. ವಿಶ್ವ ಪರಿಸರ ದಿನ 2024ರ ಥೀಮ್ ಪ್ರತಿ ವರ್ಷ ಹವಾಮಾನ ಬದಲಾವಣೆಯಿಂದ, ಜಾಗತಿಕ ತಾಪಮಾನ ಏರಿಕೆಯಿಂದ ಅರಣ್ಯನಾಶದವರೆಗೆ ತಕ್ಷಣದ ಸಮಸ್ಯೆಗಳನ್ನು ಗುರಿಯಾಗಿಟ್ಟುಕೊಂಡು ನಿರ್ದಿಷ್ಟ ಥೀಮ್‌ನೊಂದಿಗೆ ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತದೆ. ಈ ವರ್ಷ, ವಿಶ್ವ ಪರಿಸರ ದಿನದ ಥೀಮ್ – ಭೂಮಿ ಪುನಃಸ್ಥಾಪನೆ, ಮರುಭೂಮೀಕರಣ ಮತ್ತು ಬರ ಸ್ಥಿತಿಸ್ಥಾಪಕತ್ವ. ಯುಎನ್ ಕನ್ವೆಷನ್ ಪ್ರಕಾರ ಭೂಮಿಯು ಈಗಾಗಲೇ ಶೇ 40 ರಷ್ಟು ಕ್ಷೀಣಿಸಿದೆ. ಇದು ಪ್ರಪಂಚದ ಅರ್ಧದಷ್ಟು ಜನಸಂಖ್ಯೆಯ ಮೇಲೆ ನೇರ ಪರಿಣಾಮ ಬೀರುತ್ತದೆ. ಬರಗಾಲದ ಅವಧಿಯು 2000ನೇ ಇಸವಿಯಿಂದ ಶೇ 29 ರಷ್ಟು ಹೆಚ್ಚಾಗಿದೆ.
ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳದೇ ಹೋದಲ್ಲಿ 2050ರ ವೇಳೆಗೆ ವಿಶ್ವದ ಜನಸಂಖ್ಯೆಯ ಮಕ್ಕಾಲು ಭಾಗದಷ್ಟು ಜನರ ಮೇಲೆ ಪರಿಣಾಮ ಬೀರಬಹುದು ಎಂದು ವಿಶ್ವ ಸಂಸ್ಥೆ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಬರೆದುಕೊಂಡಿದೆ. ವಿಶ್ವ ಪರಿಸರ ದಿನದ ಮಹತ್ವ ಹಾಗೂ ಆಚರಣೆ ಹೇಗೆ? ವಿಶ್ವ ಪರಿಸರ ದಿನವನ್ನು ಪರಿಸರವನ್ನು ಉಳಿಸುವ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಆಚರಿಸಲಾಗುತ್ತದೆ. ಪರಿಸರ ಉಳಿಸಲು ಎಲ್ಲರೂ ಒಗ್ಗೂಡುವುದು. ಗಿಡ, ಮರಗಳನ್ನು ಬೆಳೆಸುವಂತೆ ಜನರನ್ನು ಪ್ರೇರೆಪಿಸುವ ಗುರಿಯನ್ನು ಹೊಂದಿದೆ. ಹೀಗಾಗಿ ಈ ದಿನದಂದು ಪರಿಸರ ಉಳಿಸುವ ಜಾಗೃತಿ ಕಾರ್ಯಕ್ರಮಗಳು ಹಾಗೂ ಮರ ಗಿಡಗಳನ್ನು ನೆಡುವ ಮೂಲಕ ಪರಿಸರ ಸಂರಕ್ಷಣೆಗೆ ಪಣತೊಡುತ್ತಾರೆ. ಈ ದಿನದಂದು ಗಿಡವೊಂದನ್ನು ನೆಟ್ಟು ವಿಶ್ವದ ಜೈವಿಕ ವೈಧ್ಯತೆಯನ್ನು ಉಳಿಸಬೇಕೆನ್ನುವ, ಕಾಡು ಕಡಿಮೆಯಾಗುತ್ತಿರುವ ಮತ್ತು ಉಳಿದಿರುವ ಕಾಡಿನಲ್ಲೂ ಮಾನವನ ಹಸ್ತಕ್ಷೇಪ ಹೆಚ್ಚುತ್ತಿರುವ ಬಗ್ಗೆ ತಿಳುವಳಿಕೆ ಮೂಡಿಸುವುದು ಇಂದಿನ ತುರ್ತು. ಜೊತೆಗೆ, ಭೂಮಿ ಬಿಸಿಯಾಗುತ್ತಿರುವುದರಿಂದ ಹವಾಮಾನದಲ್ಲಿ ಆಗುವ ಘೋರ ವೈಪರಿತ್ಯಗಳನ್ನು ಅರ್ಥ ಮಾಡಿಕೊಂಡು, ಜಾಗತಿಕ ತಾಪಮಾನ ಏರದಂತೆ ತಡೆಯುವ ಕ್ರಮಗಳನ್ನು ಮನಸ್ಪೂರ್ತಿಯಾಗಿ ಅಳವಡಿಸಿಕೊಳ್ಳುವುದು ಇಂದಿನ ಅಗತ್ಯ.