ಕನಿಷ್ಠ ಕಾನೂನು ಜ್ಞಾನ ಮಹಿಳೆಯರಿಗಿರಲಿ-ನ್ಯಾ.ಕುಲಕರ್ಣಿ
ವಿಶ್ವ ಮಹಿಳಾ ದಿನಾಚರಣೆ
ಯಾದಗಿರಿ, ಶಹಾಪುರ: ಮಹಿಳೆಯರ ಸಂರಕ್ಷಣೆಗೆ ಸಾಕಷ್ಟು ಪ್ರಬಲ ಕಾನೂನು ಜಾರಿಗೆ ಬಂದಿವೆ. ಮಹಿಳೆಯರು ಕನಿಷ್ಠ ಕಾನೂನು ಜ್ಞಾನವನ್ನು ಸಂಪಾದಿಸಿಕೊಳ್ಳುವುದರ ಮೂಲಕ ಶೋಷನೆಯಿಂದ ಮುಕ್ತಿ ಹೊಂದಲು ಸಾಧ್ಯ ಎಂದು ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶ ಎಚ್.ಆರ್.ಕುಲಕರ್ಣಿ ತಿಳಿಸಿದರು.
ಇಲ್ಲಿನ ಹಳಿಸಗರದ ಅಂಗನವಾಡಿ ಕೇಂದ್ರದಲ್ಲಿ ಶುಕ್ರವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಸಂಯುಕ್ತ ಆಶ್ರಯದಲ್ಲಿ ನಡೆದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮಹಿಳೆಯರು ಪ್ರಶ್ನಿಸುವ ಎದೆಗಾರಿಕೆಯನ್ನು ಬೆಳೆಸಿಕೊಂಡಾಗ ಉನ್ನತಿಯನ್ನು ಸಾಧಿಸಲು ಸಾಧ್ಯವಿದೆ. ಕಾನೂನಿನಲ್ಲಿ ಯಾವುದೇ ಲಿಂಗ ತಾರತಮ್ಯವಿಲ್ಲ. ಪುರುಷನಿಗೆ ಸಿಗವುಷ್ಟು ಹಕ್ಕುಗಳು ಮಹಿಳೆಯರಿಗೆ ಸಂವಿಧಾನದಲ್ಲಿ ಲಭಿಸಿವೆ.
ಮಹಿಳಾ ಮೀಸಲಾತಿ ಸಂವಿಧಾನ ಬದ್ದವಾಗಿ ನೀಡಿದ ಹಕ್ಕು ಆಗಿದೆ ವಿನಃ ಅದು ಭಿಕ್ಷೆಯಲ್ಲ. ಗ್ರಾಮ ಪಂಚಾಯತಿಯಿಂದ ಹಿಡಿದು ಜಿಲ್ಲಾ ಪಂಚಾಯತಿವರೆಗೆ ಮಹಿಳೆಯರಿಗೆ ಹೆಚ್ಚಿನ ಮೀಸಲಾತಿ ನೀಡಿರುವಾಗ ಮಹಿಳೆಯರು ಸಿಕ್ಕ ಅಧಿಕಾರವನ್ನು ಸಮರ್ಥವಾಗಿ ಬಳಸಿಕೊಂಡು ಮುನ್ನಡೆ ಸಾಧಿಸಬೇಕು ಎಂದು ಸಲಹೆ ನೀಡಿದರು.
ವಕೀಲೆ ಬಸಮ್ಮ ರಾಂಪುರೆ ಮಹಿಳೆಯರ ಹಕ್ಕು ಮತ್ತು ಕರ್ತವ್ಯ ಹಾಗೂ ವಿಶ್ವ ಮಹಿಳಾ ದಿನಾಚರಣೆ ಉದ್ದೇಶದ ಬಗ್ಗೆ ಮಾಹಿತಿ ನೀಡಿದರು.
ಕಾನೂನು ಸೇವಾ ಪ್ರಾಧಿಕಾರವು ಪ್ರತಿ ತಾಲ್ಲೂಕು ಕೇಂದ್ರದಲ್ಲಿ ಕಾನೂನು ಸಲಹಾ ಕೇಂದ್ರವನ್ನು ಸ್ಥಾಪಿಸಿದೆ. ಮಹಿಳೆಯರಿಗೆ ತನ್ನ ಹಕ್ಕುಗಳಿಗೆ ಚ್ಯುತಿ ಉಂಟಾದರೆ ನೇರವಾಗಿ ಸಲಹಾ ಕೇಂದ್ರಕ್ಕೆ ಬಂದು ಸಲಹೆ ಪಡೆಯಬಹುದಾಗಿದೆ.
ಕಾನೂನಿನಲ್ಲಿ ಎಲ್ಲರಿಗೂ ರಕ್ಷಣೆ ಇರುವಾಗ ಪ್ರತಿಯೊಬ್ಬರು ಕಾನೂನು ಪಾಲನೆ ಮಾಡಿದರೆ ಅದು ನಿಮ್ಮನ್ನು ರಕ್ಷಿಸುತ್ತದೆ ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿ ಟಿ.ಪಿ.ದೊಡ್ಮನಿ, ವಕೀಲರ ಸಂಘದ ಅಧ್ಯಕ್ಷ ಸಾಲೋಮನ್ ಆಲ್ಫ್ರೇಡ್, ಕಾರ್ಯದರ್ಶಿ ಸಂತೋಷ ಸತ್ಯಂಪೇಟೆ ಇದ್ದರು.