ಜಂತು ಹುಳು ನಿವಾರಣೆಗೆ ಮಾತ್ರೆ ಸೇವನೆ ಅಗತ್ಯ-ಫಿರಂಗಿ
ರಾಷ್ಟ್ರೀಯ ಜಂತು ಹುಳು ನಿವಾರಣಾ ದಿನ
ಯಾದಗಿರಿ, ಶಹಾಪುರಃ ಬಯಲು ಶೌಚದಿಂದಾಗಿ ವಾತಾವರಣ ಕಲುಷಿತಗೊಂಡು ಮಕ್ಕಳ ಆಟದ ಸಮಯದಲ್ಲಿ ಕೈಗಳಿಗೆ ಅಂಟಿಕೊಂಡ ರೋಗಾಣುಗಳು ಆಹಾರ ಸೇವನೆ ಮಾಡುವಾಗ ದೇಹದೊಳಗೆ ಪ್ರವೇಶ ಪಡೆದು ಜಂತು ಹುಳುಗಳಾಗುವ ಸಾಧ್ಯತೆ ಇದೆ. ಕಾರಣ ಮಕ್ಕಳು ಆಹಾರ ಸೇವನೆ ಮೊದಲು ಕೈಗಳನ್ನು ಸ್ವಚ್ಛವಾಗಿ ತೊಳೆದುಕೊಂಡು ಊಟ ಮಾಡಬೇಕು ಎಂದು ಮುಖ್ಯಗುರು ಪ್ರವೀಣ ಫಿರಂಗಿ ಮಕ್ಕಳಿಗೆ ಸಲಹೆ ನೀಡಿದರು.
ನಗರದ ಜೀವೇಶ್ವರ ಪ್ರೌಢ ಶಾಲೆಯಲ್ಲಿ ರಾಷ್ಟ್ರೀಯ ಜಂತು ಹುಳು ನಿವಾರಣಾ ದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಜಂತು ಹುಳು ನಿವಾರಣೆಗಾಗಿ ಮುಂಜಾಗೃತವಾಗಿ ಸರ್ಕಾರಿ ಆರೋಗ್ಯ ಇಲಾಖೆ ನೀಡಿದ ಮಾತ್ರೆಯನ್ನು ಮಕ್ಕಳಿಗೆ ನುಂಗಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಜಂತುಹುಳುಗಳು ಮಕ್ಕಳ ಕರುಳಿನಲ್ಲಿ ವಾಸಿಸುವ ಪರಾವಲಂಬಿ ಜೀವಿಯಾಗಿದೆ. ಈ ಹುಳುಗಳು ಮಕ್ಕಳಲ್ಲಿನ ಪೌಷ್ಟಿಕಾಂಶ ಹೀರುತ್ತವೆ. ಇದರಿಂದ ರಕ್ತಹೀನತೆ ಉಂಟಾಗಲಿದೆ. ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ.
ಆದ್ದರಿಂದ ಜಂತುಹುಳುಗಳು ದೇಹವನ್ನು ಪ್ರವೇಶಿಸದಂತೆ ಮುನ್ನೆಚ್ಚರಿಕೆ ವಹಿಸಬೇಕು. ಜಂತುಹುಳುಗಳ ನಿವಾರಣೆಗೆ ಈ ಮಾತ್ರೆಗಳನ್ನು ಎಲ್ಲರೂ ಕಡ್ಡಾಯವಾಗಿ ಸೇವಿಸಬೇಕು ಎಂದರು. ಈ ಸಂದರ್ಭದಲ್ಲಿ ಶಿಕ್ಷಕ ಪಂಚಾಕ್ಷರಿ ಹಿರೇಮಠ, ಸಹ ಶಿಕ್ಷಕರಾದ ಸುರೇಖಾ ಏಕಬೋಟೆ, ಮೌನೇಶ ಹಯ್ಯಾಳಕರ್, ವಿಜಯಲಕ್ಷ್ಮೀ ಹುಗ್ಗೆಳ್ಳಿಮಠ, ಲಕ್ಷ್ಮೀ ಫಿರಂಗಿ, ಪ್ರತಿಭಾ ರುಮಾಲ ಸೇರಿದಂತೆ ಇತರರು ಉಪಸ್ಥಿತರಿದ್ದರು.