ಹತ್ತಿ ಹೊಲದಲ್ಲಿ ಗಾಂಜಾ ಬೆಳೆ ಪೊಲೀಸರ ದಾಳಿ ಓರ್ವ ಆರೋಪಿ ಬಂಧನ
ಪ್ರತ್ಯೇಕ ಎರಡು ಗ್ರಾಮದಲ್ಲಿ 4 ಲಕ್ಷ ಮೌಲ್ಯದ ಗಾಂಜಾ ಬೆಳೆ ವಶ
ಯಾದಗಿರಿ,ಶಹಾಪುರಃ ಪ್ರತ್ಯೇಕ ಎರಡು ಗ್ರಾಮಗಳಲ್ಲಿ ಹತ್ತಿ ಬೆಳೆ ಮಧ್ಯೆ ಅಕ್ರಮವಾಗಿ ಗಾಂಜಾ ಬೆಳೆ ಬೆಳೆಸುತ್ತಿರುವದನ್ನು ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸುವ ಮೂಲಕ ಅಂದಾಜು 4 ಲಕ್ಷ 53 ಸಾವಿರ ರೂ. ಮೌಲ್ಯದ ಗಾಂಜಾ ಬೆಳೆಯನ್ನು ವಶಕ್ಕೆ ಪಡೆದುಕೊಂಡ ಘಟನೆ ತಾಲೂಕಿನ ಬೆನಕನಹಳ್ಳಿ ಮತ್ತು ಬೀರನೂರ ಗ್ರಾಮದಲ್ಲಿ ನಡೆದಿದೆ.
ನಗರ ಸಮೀಪದ ಬೆನಕನಹಳ್ಳಿ ಗ್ರಾಮದ ರೈಲ್ವೆ ಟ್ರ್ಯಾಕ್ ಕಾಮಗಾರಿ ಪಕ್ಕದಲ್ಲಿ ಹರಿದು ಹೋದ ಹಳ್ಳದ ಪಕ್ಕದ ಸರ್ವೇ ನಂಬರ 119 ರ ಹೊಲದಲ್ಲಿ ಅಕ್ರಮವಾಗಿ ಗಾಂಜಾ ಬೆಳೆ ಬೆಳೆದಿರುವ ಖಚಿತ ಮಾಹಿತಿ ಮೇರೆಗೆ ನ.7 ಮದ್ಯಾಹ್ನ ದಾಳಿ ನಡೆಸಿದ ಪೊಲೀಸರು, ಪರಿಶೀಲನೆ ನಡೆಸಿ ಹತ್ತಿ ಹೊಲದ ಮಧ್ಯೆ ಹಾಕಲಾದ ಗಾಂಜಾ ಬೆಳೆಯನ್ನು ವಶಕ್ಕೆ ಪಡೆದುಕೊಂಡಿದ್ದು, ಹಸಿ ಗಾಂಜಾ 2 ಲಕ್ಷ 10 ಸಾವಿರ ಮೌಲ್ಯದ್ದು ಎಂದು ಅಂದಾಜಿಸಲಾಗಿದೆ.
ಜಮೀನಿನ ಮಾಲೀಕ ಆರೋಪಿ ಮಲ್ಲಪ್ಪ ತಂದೆ ಬಸಪ್ಪ ದೊಡ್ಡಮನಿ ಹಾಗೂ ಜಮೀನನ್ನು ಪಾಲಿಗೆ ಮಾಡಿದ್ದ ಎನ್ನಲಾದ ಆರೋಪಿ ಹುಲಗಪ್ಪ ತಂದೆ ಭೀಮರಾಯ ದೊಡ್ಡಮನಿ ಇವರ ಬಂಧನಕ್ಕೆ ಹಡುಕಾಟ ನಡೆಸಿದ್ದು, ಸುಳಿವು ಅರಿತ ಆರೋಪಿಗಳು ಪರಾರಿಯಾಗಿದ್ದಾರೆ ಎನ್ನಲಾಗಿದೆ. ಆರೋಪಿಗಳ ಬಂಧನಕ್ಕೆ ಪೊಲೀಸರು ಜಾಲ ಬೀಸಿದ್ದಾರೆ.
ಅದರಂತೆ ತಾಲೂಕಿನ ಬೀರನೂರ ಸೀಮಾಂತರದ ಹನುಮಯ್ಯ ತಂದೆ ಮಲ್ಲಯ್ಯ ಮರಡಿ ಸಾ.ಪರಸಾಪುರ ಈತನ ಹೊಲದಲ್ಲಿ 2 ಲಕ್ಷ 43 ಸಾವಿರ ರೂ. ಮೌಲ್ಯದ 54 ಗಾಂಜಾ ಗಿಡಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೆ ಆರೋಪಿ ಹನುಮಯ್ಯ ಎಂಬಾತನನ್ನು ಪೊಲೀಸರು ದಸ್ತಗಿರಿ ಮಾಡಿದ್ದು, ತನಿಖೆ ಮುಂದುವರೆಸಿದ್ದಾರೆ. ಅಕ್ರಮ ಗಾಂಜಾ ಬೆಳೆದ ಇನ್ನುಳಿದ ಆರೋಪಿಗಳ ಬಂಧನಕ್ಕೆ ಪೊಲೀಸರು ಜಾಲ ಬೀಸಿದ್ದು, ಈ ಕುರಿತು ನಗರ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿವೆ.
ಹೆಚ್ಚಿನ ಲಾಭಕ್ಕಾಗಿ ತಮ್ಮ ಸ್ವಂತ ಹೊಲಗಳಲ್ಲಿ ಅಕ್ರಮವಾಗಿ ಗಾಂಜಾ ಗಿಡಗಳನ್ನು ಬೆಳೆಸಿದ್ದ ಹೊಲದ ಮಾಲೀಕರು ಮತ್ತು ಜಮೀನು ಪಾಲಿಗೆ ಮಾಡಿದ ಇರ್ವರ ಮೇಲೂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷಿಕೇಶ ಭಾಗವಾನ್ ಮತ್ತು ಡಿವೈಎಸ್‍ಪಿ ಶಿವನಗೌಡ ಮಾರ್ಗದರ್ಶನದಲ್ಲಿ ಸಿಪಿಐ ಹನುಮರಡ್ಡೆಪ್ಪ ನೇತೃತ್ವದಲ್ಲಿ ತಾಲೂಕು ದಂಡಾಧಿಕಾರಿ ಜಗನಾಥರಡ್ಡಿ, ಪಿಎಸ್‍ಐ ಎಂ.ಎ.ಚಂದ್ರಕಾಂತ ಹಾಗೂ ಪರಿಕ್ಷಾರ್ಥದ ಪಿಎಸ್‍ಐಗಳಾದ ಹನುಮಂತಪ್ಪ, ಚಂದ್ರಶೇಖರ ಸೇರಿದಂತೆ ಎಚ್‍ಸಿಗಳಾದ ಮಲ್ಲಣ್ಣ, ಹೊನ್ನಪ್ಪ, ಶರಣಪ್ಪ ಮತ್ತು ಪಿಸಿಗಳಾದ ವೆಂಕಟೇಶ, ಗೋಕುಲ ಹುಸೇನಿ, ಭಾಗಣ್ಣ, ಭೀಮನಗೌಡ, ವೀರೇಶ, ನಾಗರಡ್ಡಿ ಇತರರು ದಾಳಿಯಲ್ಲಿ ಭಾಗವಹಿಸಿದ್ದರು.
–