ಸಂಬಂಧಕ್ಕಿಂತ ಮಿಗಿಲಾದದ್ದು ಸ್ನೇಹ..ನೂತನ ಕಾಲೇಜು ಹೊಸ ಸ್ನೇಹಿತರೆಂದು ಭಯಪಡದಿರಿ..
ಜೀವನೋತ್ಸಾಹ ಹೆಚ್ಚಿಸುವ ಗೆಳೆತನ ನಿಮ್ಮದಾಗಿರಲಿ.!
ಜಯಶ್ರೀ ಅಬ್ಬಿಗೇರಿ
ನನ್ನ ಅಪ್ಪನದು ಸರಕಾರಿ ನೌಕರಿ ಹೀಗಾಗಿ ಮೂರು ವರ್ಷಗಳಿಗೊಮ್ಮೆ ನಾವು ಗಂಟು ಮೂಟೆ ಕಟ್ಟಲೇಬೇಕಿತ್ತು. ಪ್ರತಿಯೊಬ್ಬ ವಿದ್ಯಾರ್ಥಿ ಜೀವನದಾಗ ಎಸ್ಸೆಸ್ಸೆಲ್ಸಿ ಟರ್ನಿಂಗ್ ಪಾಯಿಂಟ್ ಇದ್ದಂಗ ಅಂತ ಎಲ್ಲ ಗುರುಗಳೂ ಪ್ರತಿ ಪಿರಿಯೆಡ್ನಲ್ಲೂ ನಮ್ಮ ತಲೆಯೊಳಗ ತುಂಬುತ್ತಿದ್ದರು.
ಅಂತಾ ಸಮಯದೊಳಗ ಅದೂ ನನ್ನದು ಅರ್ಧ ಎಸ್ಸೆಸ್ಸೆಲ್ಸಿ ಮುಗಿದು ಅಕ್ಟೋಬರ್ ಸೂಟಿ ಬಿಟ್ಟಾಗ ಅಪ್ಪನಿಗೆ ಸರ್ಕಾರದಿಂದ ವರ್ಗಾವಣೆ ಭಾಗ್ಯ ದೊರೆತಿತ್ತು. ಅವ್ವ ಮನೆಯಲ್ಲಿ ಇದ್ದ ಬಿದ್ದ ಸಾಮಾನುಗಳನ್ನು ಮೂಟೆ ಕಟ್ಟ ತೊಡಗಿದ್ದಳು. ಆ ಕೆಲಸಕ್ಕೆ ನನ್ನನ್ನು ಮತ್ತು ಅಣ್ಣನನ್ನು ನೆರವಿಗೆ ಕರೆದಿದ್ದಳು. ಹೊಸ ವಾತಾವರಣದಲ್ಲಿ ನನ್ನ ಪರಿಸ್ಥಿತಿಯ ಬಗ್ಗೆ ಆತಂಕದಲ್ಲಿದ್ದ ನಾನು ತೋರ್ಪಡಿಸದೆ ಅವ್ವನ ಮಾತಿಗೆ ಹೂಂಗುಟ್ಟಿ ಅವಳ ಕೆಲಸಕ್ಕೆ ಕೈ ಜೋಡಿಸಿದ್ದೆ.
ಗೆಳತಿಯರೆಲ್ಲ ನನ್ನನ್ನು ಅಪ್ಪಿಕೊಂಡು ಕಣ್ಣೀರು ಸುರಿಸಿ ಒಲ್ಲದ ಮನಸ್ಸಿನಿಂದ ಬೀಳ್ಕೊಡುತ್ತ ನನ್ನ ಕಣ್ಣಾಲಿಗಳನ್ನು ತೇವಗೊಳಿಸಿ ಬಿಕ್ಕುವಂತೆ ಮಾಡಿದ್ದರು. ನನಗೆ ಹಳೆ ಗೆಳತಿಯರಿಂದ ಬೀಳ್ಕೊಟ್ಟು ಹೊಸ ಗೆಳತಿಯರನ್ನು ಮಾಡಿಕೊಳ್ಳುವದು ರೂಢಿಯಾಗಿಬಿಟ್ಟಿತ್ತು.
ಆದರೆ ಈ ಸಾರಿ ಕಪ್ಪು ಬಿಳುಪಿನ ಕಣ್ಣುಗಳು ಜಗದ ಏಳು ಬೀಳುಗಳ ಬಗ್ಗೆ ಹೆದರಿದ್ದವು. ಊರು, ಜನ, ಸ್ಕೂಲು ಒಟ್ಟಿನಲ್ಲಿ ಎಲ್ಲವೂ ಹೊಸದು. ಹೊಸತು ಎಂಬ ಚಕ್ರದೊಳಗೆ ನನ್ನ ಮನಸ್ಸು ತಿರುಗುತ್ತಿತ್ತು. ಏನು ಬೇಕು ಬೇಡ ಎನ್ನುವದನ್ನು ಅರಿಯದಷ್ಟು ಬುದ್ಧಿ ಮಂಕಾಗಿತ್ತು. ಹೀಗೇಕೆ ಎದೆ ಭುಗಿಲೆದ್ದಿದೆ ಎಂದು ತಿಳಿಯದಾಗಿತ್ತು.
ಇದು ನಾನು ಅಲ್ಲವೇ ಅಲ್ಲ ಅನ್ನುವಷ್ಟರ ಮಟ್ಟಿಗೆ ನನ್ನ ಹೆಜ್ಜೆಗಳು ಸೋತು ಹೋಗಿದ್ದವು. ಅಲ್ಲ ಬದುಕಿನ ಹಾದಿಗೆ ಮಗ್ಗಲುಗಳು ಇರದೆ ಹೋದರೆ ಹೇಗೆ.? ಎಂದು ಅಂತರಂಗದ ದನಿಯೊಂದು ನನ್ನ ತೊಳಲಾಟಕ್ಕೆ ಮೇಲಿಂದ ಮೇಲೆ ಪ್ರಶ್ನಿಸುತ್ತಿತ್ತು.
ಹೊಸತನದ ಜಂಜಾಟದಲ್ಲಿ ಬಿದ್ದು ತಲೆ ಬಿಸಿ ಮಾಡಿಕೊಳ್ಳುತ್ತಲೇ ಇತ್ತು. ಹೊಸ ಶಾಲೆ ಗೆಳತಿಯರ ಬಗ್ಗೆ ಚಿಂತಿಸದೆ ಹಾಯಾಗಿರಬೇಕೆಂದರೂ ಒಂದು ನಿಮಿಷವೂ ತೆಪ್ಪಗಿರದೆ, ಸುಮ್ಮನೆ ಏನಾದರೂ ವಟಗುಡತ್ತಲೇ ಇರುತ್ತಿತ್ತು. ಹಿಂದಿನ ಶಾಲೆಯ ಗೆಳತಿಯರನ್ನು ಅರೆಗಳಿಗೆ ನೆನೆದರೆ ಆಹಾ.! ಎಷ್ಟು ಖುಷಿಯಾಗುತ್ತಿತ್ತು ಏನೋ ರೋಮಾಂಚನ, ತಲೆ ಹಗುರವಾಗಿ ಗಾಳಿಯಲ್ಲಿ ತೇಲಾಡಿದಂತಹ ಅನುಭವವಾಗುತ್ತಿತ್ತು. ಬದಲಾವಣೆಯನ್ನು ಎದುರಿಸುವ ಛಾತಿ ಬೆಳಸಿಕೊಳ್ಳದಿದ್ದರೆ ಸಾವು ನಿಶ್ಚಿತ ಎಂಬ ಸಂಗತಿ ಅರೆ ಪ್ರಜ್ಞಾವಸ್ಥೆಯಲ್ಲಿದ್ದ ನನ್ನನ್ನು ಬಡೆದಿಬ್ಬಿಸಿತ್ತು.
ಅಂತೂ ಇಂತೂ ಅಕ್ಟೋಬರ್ ಸೂಟಿ ಕಳೆದು ಹೊಸ ಶಾಲೆಗೆ ಹೋಗುವ ದಿನ ಬಂದೇ ಬಿಟ್ಟಿತು. ಅಂದೆಕೋ ಬೆಳಕು ಸೂಸುವ ಕಂಗಳು ಮಂಜಾದವು. ಮನದ ಕಣ ಕಣದಲ್ಲೂ ನೀರವ ಮೌನ. ಪ್ರಜ್ಞಾವಸ್ಥೆಯಲ್ಲಿದ್ದ ಬುದ್ಧಿ ನಿನ್ನ ನೀರವ ಮೌನ ಮಡಚಿ ಎತ್ತಿಟ್ಟು ಬಾ. ನಿನಗಲ್ಲಿ ಸಿಹಿ ಮಾತುಗಳ ಸವಿ ಹಂಚುವ ಗೆಳೆತನ ಸಿಕ್ಕೀತು. ನಿನ್ನ ಭಯಕ್ಕೆ ಮುಕ್ತಿ ದೊರಕೀತು ಎಂದು ಹೇಳಿತ್ತು.
ಜೀವನದಲ್ಲಿ ಬೇರೆ ಊರು ಬೇರೆ ಬೇರೆ ಜನ, ಜನರ ಸ್ನೇಹ ಅನ್ನೋದು ಸಾಮಾನ್ಯ. ಅದರಿಂದ ಹೊರಗುಳಿಯಲು ಪ್ರಯತ್ನಿಸುವದು ಮೂರ್ಖತನ. ಹೊಸ ವಾತಾವರಣದಲ್ಲಿ ನನ್ನ ಮೇಲೆ ಯಾರಾದರೂ ಎಗರಿದರೆ, ಹಳೆಯ ಆಪ್ತ ವಲಯದಿಂದ ಹೊರ ಬರದೆ ನಾನೇ ಎಡವಿ ಬಿದ್ದರೆ? ಎನ್ನುವ ಭಯದಲ್ಲಿ ಬೇಯದೇ ಸ್ನೇಹದ ಕಡಲಲ್ಲಿ ಎದೆಗಾರಿಕೆಯಿಂದ ಈಜಬೇಕು.
ಗೆಳೆತನದ ಮಾತಿನಲ್ಲಿ ಎಲ್ಲವನ್ನೂ ಹೂಂ ಎಂದು ಒಪ್ಪಿ ನಗಬೇಕು. ಹುಡುಗಾಟದಲ್ಲಿ ತುಂಟತನ ತೋರಬೇಕು. ಎಂದು ಒಳಮನಸ್ಸು ನನಗೆ ಬುದ್ಧಿ ಹೇಳುತ್ತಲೇ ಇತ್ತು. ಈ ದೋಸ್ತಿ ಅನ್ನೋದು ಭಿನ್ನ ಭಿನ್ನ ರೀತಿಯಲ್ಲಿ ಸಿಕ್ಕುತ್ತೆ. ಕೆಲವರಿಗೆ ಈ ಗೆಳೆತನದಲ್ಲಿ ಬೇರಿಗಿಳಿಯುವಾಸೆ. ಇನ್ನೂ ಹಲವರಿಗೆ ಬೆವರಿಳಿಸುವಾಸೆ. ಬೇರಿಗಳಿದು ಹೃದಯದಲ್ಲಿ ಭಾವಾನುರಾಗದ ಹೂವುಗಳ ಪಲ್ಲವಿಸುವಂತೆ ಮಾಡುವಂಥ ಗೆಳೆಯರ ಜೊತೆ ಮನ ತೆರೆದು ನಡೆಯುವಾಸೆ.
ಗೆಳೆತನದ ಹೆಸರಿನಲ್ಲಿ ತಮ್ಮ ಉಪಯೋಗಕ್ಕೆ ಉಪಯೋಗಿಸಿಕೊಂಡು ಅಯ್ಯೋ! ಇನ್ನು ಉಪಯೋಗಕ್ಕೆ ಬರಲ್ಲ ಎಂದು ಬಳಸಿ ಬೀಸಾಕುವಂಥ ಗೆಳೆಯರ ಕಾಟಕ್ಕೆ ನೋವಾದರೂ ಒಳಗೊಳಗೆ ಬಿಕ್ಕಿ ಎಲ್ಲವ ನುಂಗಿ ಕೂಡದಿರು. ಬದುಕು ಕಲಿಸಿದ ಬರಹವನ್ನು ಅವರಿಗೂ ಒಂದಿಷ್ಟು ಕಲಿಸು.
ಓಲಂಪಿಕ್ಸ್ನ ಓಟದಲ್ಲಿ ಚಿನ್ನ ಗೆದ್ದ ಹಾಗೆ ಸಂಭ್ರಮಿಸುವುದೇ ನಿಜವಾದ ಗೆಳೆತನ. ಸ್ನೇಹವೇ ಉಸಿರು. ಗೆಳೆತನವೇ ಜೀವನ. ಗೆಳೆತನಕ್ಕೆ ಯಾವುದೇ ಸಂಬಂಧ ಬೇಕಿಲ್ಲ. ಅದಕ್ಕೆ ವಯಸ್ಸಿನ ಗಡಿಯಿಲ್ಲ. ಅದು ಜಾತಿ, ಲಿಂಗಭೇದ ನೋಡಲ್ಲ. ಅದು ಎಲ್ಲ ಎಲ್ಲೆಯನ್ನು ಮೀರಿದ್ದು. ಒಂದೇ ಒಂದು ಕಣ್ಣ ಹನಿ ಬಿದ್ದರೂ ಅದು ಸಹಿಸದು. ಸೊತರೂ, ಸೋತು ಗೆದ್ದರೂ ಜೀವನ ಪರ್ಯಂತ ಆಸರೆಯಾಗಿರುವದು ಸ್ನೇಹ ಮಾತ್ರ.
ಹೀಗೆ ಏನೇನೋ ವಿಚಾರಗಳು ತಲೆಯಲ್ಲಿ ಗಿರಗಿಟ್ಲೆ ಆಡುತ್ತಿರುವಾಗ ಅಕ್ಟೋಬರ್ ಸೂಟಿ ಕಳೆಯಲೆಂದು ಅಜ್ಜಿ ಮನೆ ಸೇರಿದ್ದ ಪಕ್ಕದ ಮನೆ ಹುಡುಗಿ ಸೂರ್ಯ ಬರೋ ಮುನ್ನವೇ ಊರಿಗೆ ಬಂದು ಶಾಲೆಗೆ ಬರೋ ತಯಾರಿ ಮಾಡಿಕೊಂಡು ಹೆಗಲಿಗೆ ಶಾಲೆಯ ಚೀಲ ಹಾಕಿ ನಮ್ಮ ಮನೆಗೆ ಬಂದು ತಾನೇ ತನ್ನ ಪರಿಚಯ ಮಾಡಿಕೊಂಡಳು. “ಭಗವಾನ್ ದೇತಾ ಹೈ ತೊ ಚಪ್ಪರ ಪಾಡ್ ಕೆ ದೇತಾ ಹೈ ಅನ್ನೋ ಹಾಗೆ ಅವಳು ಎಸ್ಸೆಸ್ಸೆಲ್ಸಿ ಯಲ್ಲಿಯೇ ಓದುತ್ತಿದ್ದಳು. ಸ್ನೇಹದ ಹಸ್ತವ ಚಾಚಿ ನನ್ನ ಮನೆವರೆಗೂ ಬಂದಿದ್ದಳು.
ಇದುವರೆಗೂ ಹೊಸ ಗೆಳೆತನದ ನಟ್ಟಿರುಳಿನ ಭಯದಲ್ಲಿದ್ದ ನನ್ನನ್ನು ಆಚೆ ತಂದಿದ್ದಳು. ಅವಳ ಸ್ನೇಹಕೆ ನನ್ನ ಮೌನದ ಆಣೆಕಟ್ಟು ಒಡೆಯಿತು. ಸ್ನೇಹದ ಸವಿ ಸುಧೆಯ ಹರಿಸಿತು. ಕಾಲೇಜಿನ ದಿನಗಳಲ್ಲಿ ಮತ್ತೆ ಈಗ ವೃತ್ತಿ ಜೀವನದಲ್ಲಿ ಅನೇಕ ಗೆಳತಿಯರ ಮತ್ತು ಜನರ ಸ್ನೇಹದಲ್ಲಿ ಮಿಂದಿದ್ದೇನೆ. ಆ ಶುದ್ಧ ಗೆಳೆತನದಲ್ಲಿ ಚಂದಿರನ ಮೆಟ್ಟಿ, ಮಂಗಳನ ಮುಟ್ಟಿ, ಅವರ ಭಾವದೆದಯ ತಟ್ಟಿ ಅವರೊಳಗೊಂದಾಗಿದ್ದೇನೆ ಎಂಬ ಹೆಮ್ಮೆಯು ನನ್ನದಾಗಿದೆ.
ಮಾನವ ಸ್ವಭಾವತಃ ಸ್ನೇಹ ಜೀವಿ. ಸ್ನೇಹವಿಲ್ಲದ ಬದುಕು ದುಸ್ತರವೆನ್ನುವದು ನಮಗೆಲ್ಲರಿಗೂ ಗೊತ್ತು. ಆದರೆ ಇತ್ತೀಚಿಗೆ ಗೆಳೆತನವೆಂಬುದು ಬರೀ ಸಂಭ್ರಮದ ವಿಷಯವಾಗಿದೆ. ಮನರಂಜನೆಗೆ, ಸಿನಿಮಾ ಟಿವಿ, ವಾಟ್ಸಪ್ ಫೇಸ್ ಬುಕ್ಗಳಲ್ಲಿ ವಿಜೃಂಭಿಸುತ್ತಿದೆ.
ಈ ನಟನೆಯ ಗೆಳೆತನಕ್ಕೆ ಮನಸ್ಸು ಬೇಸತ್ತು ವಿಲ ವಿಲ ಒದ್ದಾಡುತ್ತಿದೆ. ಈ ಢಾಂಬಿಕ ಗೆಳೆತನ ತೊರೆದು ನಿಜವಾಗಲೂ ಮನರಂಜಿಸುವ, ಹೃದಯಕೆ ಪುಳಕ ಹುಟ್ಟಿಸುವ ನಮ್ಮ ಏಳ್ಗೆಗೆ ಕಾರಣವಾಗುವ, ಜೀವನೋತ್ಸಾಹ ಹೆಚ್ಚಿಸುವ ಸ್ನೇಹ ಬೆಳಸಿಕೊಂಡರೆ ಈ ಸ್ನೇಹವು ಮಜಾ ನೀಡುತ್ತೆ ಮತ್ತು ಗೆಳತನಕ್ಕೂ ಬೆಲೆ ಜಾಸ್ತಿ ಆಗುತ್ತೆ. ಏನಂತಿರಿ ಸ್ನೇಹಿತರೆ ———–?