ಹತ್ತಿರವಿದ್ದೂ ದೂರ ನಿಲ್ಲುವ ಸಂಬಂಧಗಳು
ಜಯಶ್ರಿ.ಜೆ.ಅಬ್ಬಿಗೇರಿ ಬೆಳಗಾವಿ 9449234142
ನೋಡು ನೋಡುತ್ತಿದ್ದಂತೆಯೇ ಕಾಲ ಅದೆಷ್ಟು ಬದಲಾಗಿದೆ.ಬಂಧು ಮಿತ್ರರ ಯೋಗ ಕ್ಷೇಮ ತಿಳಿಯಲು 25 ಪೈಸೆಯ ಕಾರ್ಡಿನ ಪತ್ರಕ್ಕೆ ವಾರಗಟ್ಟಲೇ ಕಾಯುತ್ತಿದ್ದವರು ನಾವೇನಾ ಎಂದು ಸಂದೇಹ ಪಡುವಷ್ಟು ಬದಲಾಗಿದೆ. ಈಗ ಡಿಜಿಟಲ್ ದುನಿಯಾ ಹೀಗಾಗಿ ಎಲ್ಲವೂ ನಮ್ಮ ಬೆರಳ ತುದಿಯಲ್ಲಿಯೇ ನಡೆಯುತ್ತಿದೆ. ದುನಿಯಾ ಮೇರಿ ಮುಟ್ಟಿಮೇ ಹೈ ಎನ್ನುವ ಮಾತು ನಿಜವಾಗಿದೆ. ಅಂತರ್ಜಾಲದ ನೆರವಿನಿಂದ ಪ್ರಪಂಚದ ಯಾವುದೇ ಮೂಲೆಯಲ್ಲಿರುವುದನ್ನು ನಮ್ಮ ಮನೆಯ ಮೂಲೆಯಲ್ಲಿ ಕುಳಿತು ವೀಕ್ಷಿಸಬಹುದು.
ಹಣವಿದ್ದರೆ ಬೇಕೆಂದಾಗ ಬೇಕಾಗಿದ್ದನ್ನು ಪಡೆಯಬಹುದು. ಮಂಗಳನ ಅಂಗಳದಲ್ಲೂ ಕಾಲಿಟ್ಟು. ಬರಬಹುದು. ಅಷ್ಟೊಂದು ಬೆಳೆದಿದೆ ವೈಜ್ಞಾನಿಕ ಜಗತ್ತು. ನಮ್ಮ ಅನುಕೂಲಕ್ಕೆಂದು ಕಂಡು ಹಿಡಿದ ಎಲ್ಲ ವಸ್ತುಗಳಲ್ಲೂ ಒಳ್ಳೆಯದು ಕೆಟ್ಟದ್ದು ಇದ್ದೇ ಇದೆ. ಒಳ್ಳೆಯದನ್ನು ಮಾತ್ರ ಸ್ವೀಕರಿಸುವುದನ್ನು ಕಲಿಯಬೇಕಿದೆ.
ಮೊದಲೆಲ್ಲ ಅಂಗಳ, ಮಕ್ಕಳ ಕೇಕೇ ಸದ್ದಿನಿಂದ ತುಂಬಿರುತ್ತಿತ್ತು. ಹೆಂಗಳೆಯರ ನಗುವ ಸದ್ದಿನಿಂದ ಕೂಡಿರುತ್ತಿತ್ತು.ಈಗ ಅಂಥ ಅಂಗಳ ಸಿಗುವುದೇ ದುರ್ಲಭವಾಗಿದೆ. ಅತಿಯಾದದ್ದು ಅಮೃತವಾದರೂ ವಿಷ ಎಂಬಂತೆ ಸ್ಮಾರ್ಟ್ ಫೋನ್‍ಗಳ ಬಳಕೆ ಅತಿಯಾಗಿ ಮನುಷ್ಯ ಮನುಷ್ಯರ ನಡುವಣ ನೈಜ ಮಾತುಕತೆಗಳೇ ಕಡಿಮೆ ಆಗುತ್ತಿವೆ.
ಇದು ನಿಜಕ್ಕೂ ಅಪಾಯಕಾರಿ ಬೆಳವಣಿಗೆ. ಮೊದಲೇ ವಿಭಕ್ತ ಕುಟುಂಬಗಳು ನಮ್ಮವು. ಇರುವ ಮೂರು ನಾಲ್ಕು ಜನ ಕೋಣೆಯ ಮೂಲೆಗಳಲ್ಲಿ ಒಂದೊಂದು ಸೆಲ್ ಫೋನ್ ಹಿಡಿದು ಕುಳಿತರೆ ಮುಗಿದು ಹೋಯಿತು. ಒಬ್ಬರಿಗೊಬ್ಬರು ಮಾತನಾಡುವುದೇ ಕಡಿಮೆಯಾಗಿದೆ. ದೂರದಲ್ಲಿರುವ ಸ್ನೇಹಿತರ ಜೊತೆ ಚಾಟಿಂಗ್ ಜೋರಾಗಿರುತ್ತದೆ. ಹತ್ತಿರದಲ್ಲಿರುವುದನ್ನು ಕಳೆದುಕೊಂಡು ದೂರದಲ್ಲಿರುವುದನ್ನು ಪಡೆದುಕೊಳ್ಳಲು ಹಂಬಲಿಸುವ ಮನಸ್ಸು ಬರಬರುತ್ತ ಏಕಾಂಗಿತನ ಅನುಭವಿಸುತ್ತಿದೆ.
ಬದುಕಿನ ಮಹತ್ವದ ಭಾಗವಾದ ಪ್ರೀತಿಯ ಸಂಬಂಧ ಮುರಿದು ಬೀಳುತ್ತಿದೆ. ಇಷ್ಟು ದಿನ ಯಾರೊಂದಿಗೆ ನಮ್ಮ ಬದುಕಿನ ಸುಖದ ಕ್ಷಣಗಳನ್ನು ಹಂಚಿಕೊಂಡಿದ್ದೆವೋ ದುಃಖದ ಕ್ಷಣಗಳನ್ನು ಮರೆತಿದ್ದೆವೋ ಯಾರ ಮುಗಳ್ನಗೆಗೆ ಸೋತು ಅವರೊಂದಿಗೆ ಜೀವನ ಕಟ್ಟಿಕೊಳ್ಳಬೇಕೆಂದು ಹಂಬಲಿಸಿದ್ದೆವೋ ಅವೆಲ್ಲವೂ ಈಗ ಕಿರಿ ಕಿರಿ ಎನಿಸುತ್ತಿವೆ. ಈಗ ಕಣ್ಣೀರಿಗೆ ಕಾರಣವಾದದ್ದೇ ಹಿಂದೆ ನಗೆಯಾಗಿತ್ತು. ಬದುಕಿನ ಖುಷಿಗಾಗಿ ಕಟ್ಟಿಕೊಂಡ ಸಂಬಂಧಗಳು ನ್ಯಾಯಾಲಯಗಳ ಕಟ್ಟೆ ಏರಿನಿಂತಿವೆ. ಬಿಡುಗಡೆಗೆ ಹಾತೊರೆಯುತ್ತಿವೆ. ಭಿನ್ನಾಭಿಪ್ರಾಯಗಳು ಹೆಚ್ಚಾಗಿ ಮನೆಯೊಳಗಿನ ಸಂಬಂಧಗಳು ಹಾನಿಗೊಳಗಾಗುತ್ತಿವೆ ಎನ್ನುವುದು ಮಾನಸಿಕ ತಜ್ಞರ ಅಭಿಪ್ರಾಯ.
ಅಂಗೈಯಲ್ಲಿ ಕುಳಿತಿರುವ ಸ್ಮಾರ್ಟ್ ಫೋನಿನಿಂದ ಕುಳಿತಲ್ಲಿಂದಲೇ ರೇಲ್ಚೇ, ಬಸ್, ವಿಮಾನ ಟಿಕೆಟ್ ಬುಕ್ ಮಾಡಬಹುದು. ನೋಡಬೇಕೆನ್ನುವ ಊರು ನಾವಿರುವ ಊರಿಂದ ಎಷ್ಟು ದೂರ ಇದೆ? ಎಷ್ಟು ಸಮಯದಲ್ಲಿ ಅಲ್ಲಿಗೆ ತಲುಪಬಹುದು? ಎಂಬ ಅನೇಕ ಪ್ರಶ್ನೆಗಳಿಗೆ ಕ್ಷಣಾರ್ಧದಲ್ಲಿ ಉತ್ತರ ಸಿಗುತ್ತಿದೆ. ವಿಳಾಸವನ್ನು ಕೇಳುವ ಸಂದರ್ಭದಲ್ಲಿ ಅನೇಕ ಅಪರಿಚಿತರ ಪರಿಚಯ ಈಗ ಇತಿಹಾಸ ಮಾತ್ರ. ಮಾನವೀಯ ಸಂಬಂಧದಿಂದ ದೂರ ಉಳಿಯುವ ದುಸ್ಸಾಹಸದಿಂದ ಮನುಷ್ಯ ಎಲ್ಲರೂ ಇದ್ದೂ ಯಾರೂ ಇಲ್ಲದವನಂತೆ ಏಕಾಂಗಿತನ ಅನುಭವಿಸಿ ಖಿನ್ನತೆಯೊಳಗಾಗುತ್ತಿದ್ದಾನೆ. ತಜ್ಞ ವೈದ್ಯರ ಪ್ರಕಾರ ತೀವ್ರವಾದ ಖಿನ್ನತೆ ಮಾನಸಿಕ ಅನಾರೋಗ್ಯಕ್ಕೆ ದಾರಿ ಮಾಡುತ್ತಿದೆ.
ಈ ಸ್ಮಾರ್ಟ್ ಫೋನಿನ ಅತಿಯಾದ ಗೀಳಿನಿಂದ ಮನುಷ್ಯ ಮನುಷ್ಯನಿಗೆ ಬೇಡವಾಗುತ್ತಿದಾನೆಯೇ? ನೈಜ ಸಂಬಂಧಗಳೇ ಬೇಡವೆನಿಸುತ್ತಿವೆಯೇ? ಉಸಿರು ಕೊಟ್ಟ ತಾಯಿಯನ್ನು ಬದುಕು ಕೊಟ್ಟ ತಂದೆಯನ್ನು ವೃದ್ಧಾಶ್ರಮಕ್ಕೆ ಸೇರಿಸುವುದು ಮಕ್ಕಳನ್ನು ಹಾಸ್ಟೆಲ್ ಸೇರಿಸುವುದು ಸಾಮಾನ್ಯವಾಗಿದೆ.ಇಷ್ಟು ದಿನ ಜೊತೆಯಾಗಿ ಖುಷಿಯಾಗಿದ್ದ ನಾವೆಲ್ಲ, ಇಷ್ಟೆಲ್ಲ ವೈಜ್ಞಾನಿಕ ಆವಿಷ್ಕಾರಗಳ ಉಪಯೋಗದಿಂದ ಹೃದಯವಂತಿಕೆಯನ್ನು ಕಳೆದುಕೊಂಡು ಕೇವಲ ಭೌತಿಕ ಪ್ರಪಂಚದ ಸುಖಕ್ಕೆ ಹಾತೊರೆದು ಹಾಳಾಗುತ್ತಿದ್ದೇವೆ.
ನಮ್ಮ ಅತಿಯಾದ ಬುದ್ಧಿವಂತಿಕೆಯೇ ನಮಗೆ ಮುಳುವಾಗುತ್ತಿದೆಯೇ? ನಮ್ಮ ನಮ್ಮ ನಡುವೆ ಸತ್ಸಂಬಂಧಗಳು ಇಲ್ಲವೆಂದ ಮೇಲೆ ಬೇರೆಲ್ಲ ಏಕೆ ಬೇಕು? ಹತ್ತಿರವಿದ್ದು ದೂರ ನಿಲ್ಲುವೆವು ನಮ್ಮ ಅಹಮ್ಮಿನ ಕೋಟೆಯಲಿ ಎನ್ನುತ್ತಾರೆ ಕವಿ ಜಿ.ಎಸ್.ಶಿವರುದ್ರಪ್ಪನವರು. ನಾವೇ ಆವಿಷ್ಕರಿಸಿದ ವಸ್ತುಗಳು ನಮ್ಮನ್ನು ಸಂಪೂರ್ಣವಾಗಿ ನುಂಗಿ ಹಾಕುವ ಮುನ್ನವೇ ಎಚ್ಚೆತ್ತುಕೊಳ್ಳಬೇಕಿದೆ.
ಐಹಿಕ ಬೇಕುಗಳಿಗೆ ಕಣ್ಮುಚ್ಚಿದರೆ ಸಂಬಂಧದ ಬೆಳಕು ಕಣ್ಣು ತೆರೆಯುತ್ತದೆ. ಆವಿಷ್ಕಾರಗಳನ್ನು ಇತಿಮಿತಿಯಲ್ಲಿ ಬಳಸಿಕೊಂಡು, ಯಂತ್ರಗಳ ಬಳಕೆಯನ್ನು ಸಾಧ್ಯವಾದಷ್ಟು ಮೊಟಕುಗೊಳಿಸಲು ಪ್ರಯತ್ನಿಸೋಣ.ಹತ್ತಿರವಿದ್ದೂ ದೂರ ನಿಲ್ಲುತ್ತಿರುವ ಸಂಬಂಧಗಳನ್ನು ಹತ್ತಿರವಾಗಿಸಿಕೊಳ್ಳೋಣ. ನಿಜ ಸುಖದತ್ತ ಹೆಜ್ಜೆ ಹಾಕೋಣ.
ಒಳ್ಳೆಯ ಬರಹ