ಈಗಲೇ ಮಾಡಿ.. ಒಳ್ಳೆಯ ಸಮಯಕ್ಕಾಗಿ ಕಾಯಬೇಡಿ
ಈ ದಿನ ಸುದಿನ
ಎಂದೋ ಮಾಡಿದ ತಪ್ಪಿನ ಅರಿವಾಗಿ ಈಗ ಕ್ಷಮೆ ಯಾಚಿಸಬೇಕೆನಿಸಿದರೆ ತಡ ಮಾಡದೇ ಕ್ಷಮೆ ಯಾಚಿಸಿಬಿಡಿ. . ಇಲ್ಲವಾದರೆ ತಪ್ಪಿತಸ್ಥ ಭಾವ ಹಗಲಿರಳು ಕಾಡುತ್ತಲೇ ಇರುತ್ತದೆ. ಯಾರಿಗೆ ಗೊತ್ತು ಕಾಲ ನಿಮಗೆ ಕ್ಷಮೆ ಯಾಚಿಸಲು ಅವಕಾಶ ಕೊಡದೇ ಇರಬಹುದು. ಅತ್ಯದ್ಭುತ ವಿಚಾರಗಳು ಹೊಳೆದಾಗ ತಕ್ಷಣವೇ ಅವುಗಳನ್ನು ಕಾರ್ಯ ರೂಪಕ್ಕೆ ತನ್ನಿ. ಇಲ್ಲವಾದರೆ ಬೇರೊಬ್ಬರ ವಿಚಾರಗಳನ್ನು ಅನುಸರಿಸುತ್ತ ನೊಂದುಕೊಳ್ಳುವ ಸರದಿ ನಿಮ್ಮದಾಗುತ್ತದೆ.
ಸಾಮಾನ್ಯರಿಗೂ ಸಾಧಕರಿಗೂ ಇರುವ ಒಂದೇ ಅಂತರವೆಂದರೆ ಸಾಧಕರು ಸದ್ವಿಚಾರಗಳನ್ನು ಬಹುಬೇಗನೆ ಕಾರ್ಯಾನುಷ್ಠಾನಕ್ಕೆ ತರಲು ಮುಂದಾಗುತ್ತರೆ. ಸಾಮಾನ್ಯರು ಎಲ್ಲವನ್ನೂ ನಂತರದಲ್ಲಿ ಮಾಡಿದರಾಯಿತು. ಎಂಬ ಉದಾಸೀನತೆಯನ್ನು ತೋರುತ್ತಾರೆ. ಈ ಉದಾಸೀನತೆಯ ಗುಣವೇ ಬದುಕಿನ ಎಲ್ಲ ಮಾನಸಿಕ ಉದ್ವೇಗಗಳಿಗೆ ಮತ್ತು ಒತ್ತಡಗಳಿಗೆ ಕಾರಣವಾಗುತ್ತವೆ. ಈ ಮುಂದೂಡುವ ರೋಗ ಎಂಥ ಪ್ರತಿಭಾವಂತರನ್ನು ಕಳಪೆ ಮಟ್ಟದಲ್ಲಿ ಜೀವಿಸುವಂತೆ ಮಾಡಿಬಿಡುತ್ತದೆ.
ಪ್ರತಿ ದಿನವೂ ಶುಭ ದಿನವೇ ಶುಭ ಕಾರ್ಯಗಳಿಗೆ ಇಂಥದೇ ಸಮಯ ಸೂಕ್ತ ಎಂದು ಕಾಯುತ್ತ ಕುಳಿತುಕೊಳ್ಳುವದು ಸೂಕ್ತವಲ್ಲ. ವಾಸ್ತವದಲ್ಲಿ ಒಳ್ಳೆಯ ದಿನ ಕೆಟ್ಟ ದಿನ ಎನ್ನುವದು ಇಲ್ಲವೇ ಇಲ್ಲ. ಯಾವುದೇ ದಿನವನ್ನು ಉತ್ತಮವಾಗಿಸದಿಕೊಳ್ಳುವದು ನಮ್ಮ ಕೈಯಲ್ಲಿಯೇ ಇದೆ. ಇಂದಿನ ದಿನವೇ ಸುದಿನ. ಈ ದಿನವೇ ಶುಭ ದಿನ. ಈ ವೇಳೆಯೇ ಶುಭವೇಳೆ ಎಂದು ಅರಿತು ಮುನ್ನಡೆಯುವದು ಉತ್ತಮ. ಬೇರೆಯವರು ಒಳ್ಳೆಯ ಕಾರ್ಯಗಳನ್ನು ಮಾಡಿದಾಗ ಕರಬುವದಕ್ಕಿಂತ ನೀವೂ ಸತ್ಕಾರ್ಯದಲ್ಲಿ ತೊಡಗಿ ಅದರ ಫಲವನ್ನು ಅನುಭವಿಸುವದಕ್ಕೆ ಮುನ್ನುಗ್ಗಿ.
ನಾವು ಕೆಲಸವನ್ನು ಮುಂದಕ್ಕೆ ಹಾಕಿದಂತೆ ಸಮಯ ನಮ್ಮ ಸಾವನ್ನು ಮುಂದಕ್ಕೆ ಹಾಕುವದಿಲ್ಲ. ಎನ್ನುವದು ಸದಾ ನೆನಪಿನಲ್ಲಿರಲಿ. ಇಂದಿನ ದಿನವೇ ಬದುಕಿನ ಕೊನೆಯ ದಿನವೆಂಬಂತೆ ಕಾರ್ಯಗತ್ಪರರಾಗಬೇಕು. ಕೆಟ್ಟದ್ದನ್ನು ಬಿಡಲು ನಾಳೆಗಾಗಿ,ಹೊಸ ವರ್ಷಕ್ಕಾಗಿ ಯಾಕೆ ಕಾಯಬೇಕು?
ಹ್ಯಾರಿ ಓವರಸ್ಟ್ರೀಟ್ ಹೇಳಿದಂತೆ ನಾವು ಮೂಲಭೂತವಾಗಿ ಏನನ್ನು ಅಪೇಕ್ಷೆ ಪಡುತ್ತೇವೆಯೋ ಅದರಿಂದಲೇ ನಮ್ಮ ಕಾರ್ಯ ಚಟುವಟಿಕೆಗಳು ಹುಟ್ಟಿಕೊಳ್ಳುತ್ತವೆ. ಅರ್ಥಾತ್ ನಮ್ಮ ಪ್ರತಿಯೊಂದು ಕಾರ್ಯಕ್ಕೂ ನಮ್ಮ ಆಕಾಂಕ್ಷೆ ಪ್ರೇರಣೆ ನೀಡುತ್ತದೆ. ಕೆಲಸ ಮುಂದೂಡುವ ರೋಗಕ್ಕೆ ತಿಲಾಂಜಲಿ ಅರ್ಪಿಸಿ ಮುಂದುವರೆಯಬೇಕೆಂದಿದ್ದರೆ ಮುನ್ನಡೆಯಿರಿ. ನೀವು ಜೀವನದಲ್ಲಿ ಬಹು ಕ್ಷೇಮಕರ ಆಟವಾಡಲು ನಿರ್ಧರಿಸಿದ್ದರೆ ನೀವು ಇನ್ನು ಹೆಚ್ಚು ಬೆಳೆಯುವದು ಬೇಡವೆಂದು ನಿರ್ಧರಿಸಿದ್ದೀರಿ ಎಂದರ್ಥ. ಒಂದು ಉತ್ತಮ ಕೆಲಸ ನಿಮ್ಮಿಂದಾಗಬೇಕೆಂಬ ಮಹದಾಸೆ ನಿಮಗಿದ್ದರೆ ಅದನ್ನು ನೀವೇ ಮಾಡಿ ಮತ್ತು ಈಗಲೇ ಮಾಡಿ. ಒಳ್ಳೆಯ ಸಮಯಕ್ಕಾಗಿ ಕಾಯಬೇಡಿ ಅದೆಂದೂ ಬರುವದೇ ಇಲ್ಲ.
-ಜಯಶ್ರೀ ಜೆ ಅಬ್ಬಿಗೇರಿ ಬೆಳಗಾವಿ
ಆಂಗ್ಲ ಭಾಷಾ ಉಪನ್ಯಾಸಕರು
ಸ ಪ ಪೂ ಕಾಲೇಜು ಹಿರೇಬಾಗೇವಾಡಿ
ತಾ: ಜಿ: ಬೆಳಗಾವಿ
591109