ಜನ ಕೆಚ್ಚೆದೆಯವರನ್ನು ಮೆಚ್ಚುತ್ತಾರೆ..ಹೇಡಿಯನ್ನು ಚಚ್ಚುತ್ತಾರೆ..!
ಬುದ್ಧಿ ಮಾತ..ಕೇಳಿ ಮುದ್ದು ಮನಗಳೇ..
ಜಯಶ್ರೀ. ಜೆ. ಅಬ್ಬಿಗೇರಿ ಬೆಳಗಾವಿ.
9449234142.
ಯಾರೋ ಯಾವುದೋ ಗಳಿಗೆಯಲ್ಲಿ ನಮ್ಮ ಮನಸ್ಸಿನ ವಿರುದ್ಧ ಆಡಿದ ಮಾತು ತಣ್ಣಗೆ ಕೊರೆಯುವ ಚಳಿಯಂತೆ ಎದೆಯಲ್ಲಿ ಸಣ್ಣಗೆ ಕೊರೆಯುತ್ತಿರುತ್ತದೆ. ತಲೆಯ ಬಿಸಿಯನ್ನು ಏರಿಸುತ್ತಿರುತ್ತದೆ. ನಿಜ ಹೇಳಬೇಕೆಂದರೆ ಅದಕ್ಕೆ ಅಷ್ಟೆಲ್ಲ ತಲೆ ಕೆಡಿಸಿಕೊಳ್ಳುವ ಅಗತ್ಯವೇ ಇರುವುದಿಲ್ಲ.
ಆದರೂ ಮನವೆಂಬ ಮಂಗ ಕೇಳುವುದೇ ಇಲ್ಲ. ಪದೇ ಪದೇ ಅದನ್ನೇ ಹೆಕ್ಕಿ ಹೆಕ್ಕಿ ತಂದು ನಮ್ಮ ಮುಂದೆ ನಿಲ್ಲಿಸಿ ಒಳಗೊಳಗೇ ನೆರಳುವಂತೆ ಮಾಡುತ್ತದೆ. ಇನ್ನಿಲ್ಲದಂತೆ ಕುಗ್ಗಿಸಿ ಬಿಡುತ್ತದೆ. ಅಲ್ಲ, ಅಷ್ಟಕ್ಕೂ ಎಲ್ಲರೂ ನಮಗೆ ಹಿಡಿಸುವಂತೆಯೇ ಮಾತನಾಡಬೇಕೆಂದು ಬಯಸುವುದು ಎಷ್ಟು ಸರಿ? ಆ ಗಳಿಗೆಯಲ್ಲಿ ಅವರಿಗೆ ತಲೆಗೆ ಹೊಳೆದಿದ್ದನ್ನು ಮನಸ್ಸಿಗೆ ಅನಿಸಿದ್ದನ್ನು ಹೇಳಿರುತ್ತಾರೆ ಅಷ್ಟೇ. ಅದೇನು ನಮಗೆ ಅಧಿಕೃತವಾಗಿ ಪ್ರಮಾಣೀಕರಿಸಿ ಕೊಟ್ಟ ಪ್ರಮಾಣ ಪತ್ರವೇ? ಯಾರೋ ಕೊಡುವ ಹೊಗಳಿಕೆಯ ಪ್ರಮಾಣಪತ್ರದಿಂದ ನಮ್ಮ ಬದುಕು ಕ್ಷಣಾರ್ಧದಲ್ಲಿ ಬದಲಾಗಿ ಬಿಡುತ್ತದೇನು?
ನಾವು ಮಾಡುವ ಕೆಲಸ ಕಾರ್ಯಗಳು ನಮ್ಮ ಮನಸ್ಸಿಗೆ ಸಮಾಧಾನದ ತಂಗಾಳಿ ಸೂಸುತ್ತವೆ. ಎಂಬುದನ್ನು ಮರೆಯುತ್ತೇವೆ. ಕೆಲಸದ ಬದಲು ಇಲ್ಲ ಸಲ್ಲದ ಯೋಚನೆಗಳನ್ನು ಕಸದ ತರ ತಲೆಯಲ್ಲಿ ತುಂಬಿಕೊಂಡು ತಿರುಗುತ್ತೇವೆ. ಬೇರೆ ಯಾರಾದರೂ ನಮ್ಮ ಕೆಲಸ ಕಾರ್ಯದ ಕುರಿತು ವಿಚಾರಿಸಿದರೆ ಅವರು ತಮಗೆ ಸಂಬಂಧವಿಲ್ಲದ ಪ್ರಶ್ನೆಯನ್ನು ಕೇಳಿ ಮರ್ಯಾದೆ ತೆಗೆಯುತ್ತಿದ್ದಾರೆ ಎಂದೆನಿಸಿಬಿಡುತ್ತದೆ. ಅವರಿಗೆಲ್ಲ ಯಾಕೆ ಬೇಕು ಊರ ಉಸಾಬರಿ? ಎಂದು ಗೊಣುಗುತ್ತೇವೆ.
ವಾಸ್ತವದಲ್ಲಿ ಅವರು ನಮ್ಮನ್ನು ಕಾಳಜಿಪೂರ್ವಕವಾಗಿ ಮಾತನಾಡಿಸಿದ ರೀತಿ ನಮಗೆ ಅರ್ಥವಾಗಿರುವುದಿಲ್ಲ. ಅವರು ಬೇಕೆಂತಲೇ ನಮ್ಮನ್ನು ಅವಮಾನಿಸುತ್ತಿದ್ದಾರೆ ಎಂಬ ಅನುಮಾನದಿಂದ ತಡಬಡಾಯಿಸುತ್ತ ಏನು ಹೇಳಬೇಕೆಂದು ಗೊತ್ತಾಗದೇ ತಲೆ ತಗ್ಗಿಸಿ ಅಲ್ಲಿಂದ ಜಾಗ ಖಾಲಿ ಮಾಡುತ್ತೇವೆ. ಅವರು ನಡೆದುಕೊಂಡ ರೀತಿಯಲ್ಲಿ ತಪ್ಪೇನಿಲ್ಲ ಎಂದು ಬುದ್ಧಿ ಹೇಳಿದರೂ ಮನಸ್ಸು ಒಪ್ಪುವುದೇ ಇಲ್ಲ!
ಬೇರೆಯವರು ತಾವೇನೋ ಸಾಧಿಸಿದ್ದನ್ನು ಹೆಮ್ಮೆಯಿಂದ ಹೇಳಿಕೊಂಡರೆ ನಾವೇನೂ ಸಾಧಿಸಿಲ್ಲ ಅಂತ ನಮ್ಮನ್ನು ಚುಚ್ಚಲು ಈ ತರ ಹೇಳಿಕೊಳ್ಳುತ್ತಿದ್ದಾರೆ ಅಂದುಕೊಳ್ಳುವುದು ಎಷ್ಟು ಸರಿ? ಅಷ್ಟಕ್ಕೂ ಅವರು ನಮಗೆ ನೇರವಾಗಿ ಮನಸ್ಸು ನೋಯಿಸಲೇಬೇಕೆಂದು ಬಿಟ್ಟ ಬಾಣವಾಗಿದ್ದರೆ ಕೊಂಚ ಆಲೋಚಿಸಬಹುದು.ಅವರು ಹೇಳಿದ್ದರಲ್ಲಿ ಕೊಂಕನ್ನು ಹುಡುಕಿ ನಾನು ಇಡುತ್ತಿರುವ ಹೆಜ್ಜೆಗಳು ತಪ್ಪೇನೋ ಎಂದು ಕೊರಗಲು ಶುರು ಹಚ್ಚಿಕೊಳ್ಳುತ್ತೇವೆ.
ಇರಿಸಿಕೊಂಡ ಗುರಿ ಸ್ಪಷ್ಟವಾಗಿದ್ದರೆ ಒಂದಿಷ್ಟು ತಡವಾಗಿಯಾದರೂ ಸರಿ ತಲುಪುವ ಆತ್ಮ ವಿಶ್ವಾಸ ಹೆಚ್ಚಿಸಿಕೊಳ್ಳುವುದು ಒಳಿತು. ಅದು ಬಿಟ್ಟು ನಮ್ಮ ತಲೆಯಲ್ಲಿ ಓಡುತ್ತಿರುವ ಸಂಗತಿಯನ್ನೇ, ನಮಗೆ ತುಂಬಾ ಇಷ್ಟವೆನಿಸುವ ವಿಷಯವನ್ನೇ ಬೇರೆಯವರು ತಿಳಿದುಕೊಂಡು ಮಾತನಾಡಲಿ ಅದನ್ನು ಕೇಳುವ ಕಿವಿಗಳು ನಮ್ಮದಾಗಲಿ ಎಂದು ಹಾತೊರೆಯುವುದು ಎಷ್ಟು ಸಮಂಜಸ? ಅಷ್ಟಕ್ಕೂ ನಾವು ಇತರರ ಮನಸ್ಸು ಅರ್ಥೈಸಿಕೊಂಡು ಕಷ್ಟಕ್ಕೆ ಹೆಗಲಾಗಿದ್ದು, ಏನನ್ನೂ ನಿರೀಕ್ಷಿಸಿದೇ ಪ್ರೀತಿಸಿದ್ದು ಎಷ್ಟು ಸಲ ಎನ್ನುವುದೂ ಮುಖ್ಯವಾಗುತ್ತದೆ.ಎಂದು ಮನಸ್ಸಿಗೆ ಬುದ್ಧಿ ತಿಳಿಸಿ ಹೇಳಿದರೂ ಒಪ್ಪುವುದೇ ಇಲ್ಲ.
ಇತರರ ಕಷ್ಟದ ಪರಿಸ್ಥಿತಿಗಳಲ್ಲಿ ನಾವಾಗುವುದಿಲ್ಲ. ನಮಗೆ ಕಷ್ಟ ಬಂದಾಗ ಮಾತ್ರ ಎಲ್ಲರೂ ನೆರವಿನ ಹಸ್ತ ಚಾಚಬೇಕೆಂದು ಬಯಸುತ್ತೇವೆ. ಬೇರೆಯವರು ನಮ್ಮ ಹತ್ತಿರ ನೆರವು ಯಾಚಿಸಿ ಬಂದರೆ ಒಂಥರಾ ಕಿರಿ ಕಿರಿ. ಏನಪ್ಪ ಯಾವಾಗಲೂ ಇವರದು ರಗಳೆ ಇದ್ದದ್ದೆ ಎಂದು ಕುಳಿತ ಜಾಗದಲ್ಲಿಂದ ಎದ್ದು ಹೋಗುವ ಜಾಯಮಾನವಿಟ್ಟುಕೊಂಡು ಬೇರೆಯವರಿಂದ ಸಹಾಯ ನಿರೀಕ್ಷಿಸುವುದು ಎಂಥ ಅಸಂಬದ್ಧವಲ್ಲವೇ? ಹೌದು, ಇದು ಅಸಂಬದ್ಧ ಎಂದು ಬುದ್ಧಿ ತಿಳಿಸಿ ಹೇಳಿದರೂ ಮನಸ್ಸು ಒಪ್ಪುವುದೇ ಇಲ್ಲ.
ಗೆಳೆಯನೊಬ್ಬ ಇಂದು ಈ ಎತ್ತರದಲ್ಲಿ ನಿಲ್ಲಲು ನನ್ನ ಬೆಂಬಲವೇ ಕಾರಣ. ನಾನು ಪ್ರೋತ್ಸಾಹಿಸದೇ ಇದ್ದಿದ್ದರೆ ಅವನಿಗೇನೂ ಸಾಧಿಸಲು ಸಾಧ್ಯವಾಗುತ್ತಿರಲಿಲ್ಲ. ಇಂದಿಗೂ ಅಪ್ಪ ಅಮ್ಮ ದುಡಿದ ಹಣದಲ್ಲೇ ಬದುಕಿರುತ್ತಿದ್ದ ಎಂದು ಕೊಚ್ಚಿ ಕೊಳ್ಳುತ್ತೇವೆ. ಜೀವನವೆನ್ನುವುದು ತಿರುಗುವ ಚಕ್ರ ಇಂದು ಅವನಿರುವ ಭಾಗದ ಚಕ್ರ ನಾಳೆ ಕೆಳಗೆ ಬಂದೇ ಬರುತ್ತದೆ. ನಾನು ಮೇಲೇರುತ್ತೇನೆ ಎಂದು ಮನದಲ್ಲಿ ಲೆಕ್ಕ ಹಾಕುತ್ತಲೇ ಇದ್ದರೆ ಪ್ರಯೋಜನವಿಲ್ಲ.
ಯಾರು ಏನೇ ಅಂದುಕೊಳ್ಳಲಿ ನಾನು ಆಯ್ಕೆ ಮಾಡಿಕೊಂಡ ದಾರಿ ಸರಿಯಾಗಿದೆ ಎಂಬ ನಂಬಿಕೆಯೊಂದಿಗೆ ಗಟ್ಟಿ ಮನಸ್ಸಿನಿಂದ ಮುನ್ನಡೆದರೆ ಗೆಲುವು ಖಂಡಿತ ಎಂದು ಬುದ್ಧಿ ಹೇಳಿದರೂ ಮನಸ್ಸು ಒಪ್ಪುವುದೇ ಇಲ್ಲ.
ಎಷ್ಟೋ ಬಾರಿ ನಾವು ಅಂದುಕೊಂಡ ಹಾಗೆ ನಮ್ಮ ಆಯ್ಕೆಯಲ್ಲಿ ತಕ್ಷಣ ವಿಜಯ ಲಕ್ಷ್ಮೀ ಒಲಿಯದೇ ಇರಬಹುದು. ಅಂದ ಮಾತ್ರಕ್ಕೆ ಪದೇ ಪದೇ ಗುರಿ ಬದಲಾಯಿಸುವುದು ಮತ್ತೆ ಆರಂಭದಿಂದ ಕೆಲಸ ಆರಂಭಿಸುವುದು ಖಂಡಿತ ಒಳ್ಳೆಯದಲ್ಲ. ಬದಲಿಗೆ ನಾವಿರಿಸಿಕೊಂಡ ಗುರಿಯತ್ತ ಸರಿಯಾದ ಯೋಜನೆಯ ದಾರಿಯಲ್ಲಿ ಹೆಜ್ಜೆ ಹಾಕಿದರೆ ಸದ್ದಿಲ್ಲದೇ ಗೆಲುವು ನಿನ್ನ ಕಾಲಡಿ ಬರುತ್ತದೆ ಎಂದು ಬುದ್ಧಿ ಅದೆಷ್ಟು ತಿಳಿ ಹೇಳಿದರೂ ಮನಸ್ಸು ಸೊಪ್ಪು ಹಾಕುವುದೇ ಇಲ್ಲ ಒಪ್ಪುವುದೇ ಇಲ್ಲ.
ಸುತ್ತ ಮುತ್ತ ಇರುವವರೆಲ್ಲ ನಮ್ಮ ಆಪ್ತರು ಸ್ನೇಹಿತರು,ಹಿತೈಷಿಗಳು ಬಂಧು ಬಾಂಧವರು. ಅವರು ಸದಾ ನಮ್ಮ ಶ್ರೇಯೋಭಿಲಾಷಿಗಳು ಎಂದು ಸಕಾರಾತ್ಮಕವಾಗಿ ಆಲೋಚಿಸಿದರೆ ಕಿವಿಗೆ ಬಿದ್ದ ಮಾತುಗಳೆಲ್ಲ ಮನವೆಂಬ ಕಡಲಲ್ಲಿ ತೆರೆದಿಟ್ಟ ಮುತ್ತು ರತ್ನಗಳಂತೆ ಭಾಸವಾಗುತ್ತವೆ.
ಆಗ ಮನದಲ್ಲಿ ತುಂಬಿದ ಕತ್ತಲು ಮಾಯವಾಗಿ ಹುಣ್ಣಿಮೆಯ ಬೆಳದಿಂಗಳ ದಿನಗಳು ಮನಸ್ಸನ್ನಾವರಿಸಿಕೊಳ್ಳುತ್ತವೆ. ಮೊಂಡ ಮನಸ್ಸು ನೆಟ್ಟಗಾಗುತ್ತದೆ. ಬುದ್ಧಿ ಹೇಳಿಸಿಕೊಳ್ಳದೇ ಮನಸ್ಸು ಜೀವನದ ಸುಂದರ ಕನಸುಗಳ ಬೆನ್ನೇರಿ ಓಡುತ್ತದೆ. ನೆನಪಿರಲಿ ಭಯಗೊಂಡರೆ ಜಯವಿಲ್ಲ. ಕೆಚ್ಚೆದೆಯವರನ್ನು ಮೆಚ್ಚುತ್ತಾರೆ ಹೇಡಿಯನ್ನು ಚಚ್ಚುತ್ತಾರೆ. ಬನ್ನಿ ಬುದ್ಧಿಯ ಮಾತಿಗೆ ಸೊಪ್ಪು ಹಾಕೋಣ ಚೆಂದದ ಬದುಕಿನತ್ತ ಮುಖ ಹಾಕಿ ನೆಮ್ಮದಿ ಜೀವನ ಪಡೆಯೋಣ.