ಮಾಗಿದ್ದ ‘ಮನಗೂಳಿ ಮುತ್ತ್ಯಾ’ ಇನ್ನೊಂದಿಷ್ಟು ವರ್ಷ ಇರಬೇಕಿತ್ತು..
ಮಾಗಿದ್ದ ‘ಮನಗೂಳಿ ಮುತ್ತ್ಯಾ’ ಇನ್ನೊಂದಿಷ್ಟು ವರ್ಷ ಇರಬೇಕಿತ್ತು..
ಮಲ್ಲಪ್ಪ ಚನ್ನಪ್ಪ ಮನಗೂಳಿ. ಸಿಂದಗಿಯ ಜನರ ಪಾಲಿಗೆ ಮಾಮಾ, ಮುತ್ತ್ಯಾ, ಕಾಕಾ ಆಗಿದ್ದ ಜೀವ ಇನ್ನಿಲ್ಲ. ಹೀಗೆ ಕಾಕಾ, ಮಾಮಾ ಅಂತ ರಾಜ್ಯದ ಬೇರೆ ಕ್ಷೇತ್ರಗಳಲ್ಲಿ ಕರೆಸಿಕೊಂಡಿದ್ದು ಕಡಿಮೆ. ಬಹಳೆಂದರೆ ದಕ್ಷಿಣ ಕರ್ನಾಟಕದಲ್ಲಿ ಅಣ್ಣಾ ಅನ್ನಿಸಿಕೊಂಡ ಶಾಸಕರಿದ್ದಾರೆ. ಆದರೆ, ಮನಗೂಳಿಯವರು ವಯಸ್ಸಿದ್ದಾಗ ಮಾಮಾ ಅನ್ನಿಸಿಕೊಂಡರು, ಈಗೀಗ ಮುತ್ತ್ಯಾ ಆಗಿದ್ದರು. ಅವರು ಈ ಸಲ ತುಂಬ ಮಾಗಿದ್ದರು. ಇತ್ತೀಚಿನ ದಿನಗಳಲ್ಲಂತೂ ‘ಏನಾದರೂ ಮಾಡಿ ಹೋಗಬೇಕು, ಜನ ನೆನಪಿಡಬೇಕು, ಜೀವನದಲ್ಲಿ ಏನದ..’ ಅನ್ನುವ ಮಾತಾಡುತ್ತಿದ್ದರು.
ಎಲ್ಲರೊಂದಿಗೂ ಹಚ್ಚಿಕೊಂಡು ಇರಲು ಶುರು ಮಾಡಿದ್ದರು. ಪಕ್ಷ ರಾಜಕೀಯ ಪಕ್ಕಕ್ಕಿಟ್ಟು ಕೆಲಸ ಮಾಡುತ್ತಿದ್ದರು. ಆಲಮೇಲ ತಾಲೂಕು ಮಾಡಿ ಆ ಭಾಗದ ಜನರ ಮನಸ್ಸಲ್ಲಿ ಉಳಿದರು.
೨೦೧೮ರಲ್ಲಿ ಚುನಾವಣೆಗೆ ನಿಂತ ಮನಗೂಳಿಯವರು, ‘ಇದು ನಂದು ಕೊನೀದದ ಏನ ಮಾಡ್ತೀರಿ ನೋಡ್ರಿ.. ಗೆದ್ರ ನನಗ ತಂದು ಹಾರ ಹಾಕ್ರಿ, ಸೋತರ ಸ್ವಲ್ಪ ದಿಂದಾಗ ಸಾಯ್ತೀನಿ ನನ್ನ ಹೆಣಕ್ಕ ಹಾರ ಹಾಕ್ರಿ.. ಅವಕಾಶ ಕೊಟ್ಟು ನೋಡ್ರಿ ನಿಮ್ಮ ಋಣ ತೀರಿಸ್ತೀನಿ’ ಅಂತ ತುಂಬ ಭಾವುಕರಾಗಿ ಮಾತಾಡುತ್ತಿದ್ದರು.
ಇವರ ಎದುರಿಗಿದ್ದ ಸ್ಪರ್ಧಿ ಮತದಾರರ ವಿಶ್ವಾಸ ಕಳೆದುಕೊಂಡಿದ್ದರಿಂದ ಮನಗೂಳಿಯವರು ಅನಿವಾರ್ಯವಾದರು ಮತ್ತು ವಯಸ್ಸಾಗಿದೆ, ಇದ್ದುದರಲ್ಲಿ ಇವರೇ ಛೊಲೊ ಎನ್ನುವ ಅನುಕಂಪ ಅಲೆಯಾಗಿ ಅಪ್ಪಳಿಸಿತು.
ಮನಗೂಳಿಯವರು ಎಲ್ಲ ವರ್ಗದವರ ಬಹುಮತದಿಂದ ಆರಿಸಿ ಬಂದರು. ಮಾತು ಕೊಟ್ಟಂತೆಯೇ ಈ ವರೆಗೂ ಜನಕ್ಕೆ ಬದ್ಧರಾಗೇ ಇದ್ದರು. ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾಗ ತೋಟಗಾರಿಕೆ ಮಂತ್ರಿಯಾಗಿ ಸಿಂದಗಿ ನಗರ ಅಭಿವೃದ್ಧಿ ಸೇರಿ ಹಲವು ಕೆಲಸ ಮಾಡಿದರು.
ಕೆಲಸ ಕೇಳಿ ಬಂದವರಿಗೆ ಇಲ್ಲ ಎನ್ನಲಿಲ್ಲ. ಕುಮಾರಸ್ವಾಮಿಗೆ ಗಂಟು ಬಿದ್ದು ಆಲಮೇಲ ತಾಲ್ಲೂಕು ಮಾಡಿದರು. ಇದು ದಶಕಗಳಿಂದ ಇಲ್ಲಿನ ಜನಪ್ರತಿನಿಧಿಗಳಿಂದಲೇ ಅಡ್ಡಗಾಲಾಗಿ ಆಗದೇ ಉಳಿದ ಕೆಲಸವಾಗಿತ್ತು. ಅದನ್ನು ಮಾಡಿ ಆಲಮೇಲ ಭಾಗದ ಜನರ ಮನ ಗೆದ್ದರು. ಇವರು ಆರಿಸಿ ಬರಲು ಆ ಭಾಗದ ಕೊಡುಗೆಯೂ ಹೆಚ್ಚಿತ್ತು. ಕೊಟ್ಟ ಮಾತು ಉಳಿಸಿಕೊಡರು.
..
ದೇವೇಗೌಡರ ಆಪ್ತರಾಗಿದ್ದ ಮನಗೂಳಿಯವರು ಜನತಾ ಪರಿವಾರ ಬಿಟ್ಟು ಬೇರೆಡೆ ಕದಲಿದವರಲ್ಲ. ಕೊನೆಯವರೆಗೂ ಜೆಡಿ ಎಸ್ ಗೆ ನಿಷ್ಠರಾಗೇ ಇದ್ದರು. ದೇವೇಗೌಡರು ಸಿಎಂ ಆಗಿದ್ದಾಗ ಸಣ್ಣ ನೀರಾವರಿ ಸಚಿವರಾಗಿ ಈ ಭಾಗದ ಕಾಲುವೆಗೆ ನೀರು ಹರಿಸುವ ಭಾಗ್ಯ ಒದಗಿಸಿದರು. ಕೃಷ್ಣಾ ಮೇಲ್ದಂಡೆ, ಗುತ್ತಿ ಬಸವಣ್ಣ ಏತ ನೀರಾವರಿಗೆ ಗೌಡರಿಂದ ಹೆಚ್ವಿನ ಹಣ ಬಿಡುಗಡೆಗೊಳಿಸಲು ಕಾರಣರಾದರು.
ಹೀಗಾಗಿ ಗೋಲಗೇರಿಯ ರೈತರು ಇವರು ಮತ್ತು ದೇವೇಗೌಡರು ಮಾತನಾಡುತ್ತ ನಿಂತ ಭಂಗಿಯ ಪ್ರತಿಮೆಯನ್ನೇ ಸ್ಥಾಪಿಸಿ ಗೌರವ ಮೆರೆದಿದ್ದಾರೆ! ಗೌಡರು ಮನಗೂಳಿಯವರ ಹೆಗಲ ಮೇಲೆ ಕೈಇಟ್ಟು ಮಾತಾಡುತ್ತಿರುವ ಮೂರ್ತಿ ಇದಾಗಿದೆ.
ಇಂತಹ ಇಬ್ಬರ ಪ್ರತಿಮೆ ಇರೋದು ಅಪರೂಪವೇ. ಹೀಗಿದ್ದ ಮನಗೂಳಿಯವರು ತಮ್ಮ ಎಂಬತ್ತೈದರ ತುಂಬು ಜೀವನ ಮುಗಿಸಿದ್ದಾರೆ. ಇದೊಂದು ಶಾಸಕತ್ವದ ಅವಧಿ ತನಕವಾದರೂ ಅವರಿರಬೇಕಿತ್ತೇನೊ.. ಅದೇ ಅವರ ಅನುಯಾಯಿಗಳಿಗೆ ಕ್ಷೇತ್ರದ ಬಹು ಜನರಿಗೆ ಬೇಸರ, ನೋವು ತಂದಿದೆ.
ಮನುಷ್ಯ ತಾನು ಹೆಚ್ಚು ದಿನ ಇರಲ್ಲ ಅಂತ ಗೊತ್ತಾಗುವ ಸಮಯಕ್ಕೆ ಮಾನವಂತನಾಗುತ್ತ ಹೋಗುತ್ತಾನೆ ಏನೊ. ಮನಗೂಳಿ ಮುತ್ತ್ಯಾ ಅವರು ಕೂಡ ಮತ್ತೊಮ್ಮೆ ಅದಕ್ಕೆ ಸಾಕ್ಷ್ಯ ಒದಗಿಸಿದರು. ನನ್ನನ್ನು ಕಂಡಾಗೆಲ್ಲ ನನ್ನ ಹೆಗಲ ಮೇಲೆ ಕೈಹಾಕಿ ಮಾತಾಡೋರು. ಬೇರೆ ಬಿರುಸು ಸ್ವಭಾವದ ರಾಜಕಾರಣಿಗಳಿಗಿಂತ ಇವರು ಎಷ್ಟೋ ಪಾಡು. ಜನ ಜೋರು ಮಾಡಿದರೂ ಸುಮ್ಮನಿರೋರು. ‘ಆಯ್ತು ತಗೋರಪಾ ಮಾಡಮು..’ ಅಂತ ಸಮಾಧಾನ ಮಾಡೋರು. ಇಂತಹವರು ಹಲವು ದಶಕಗಳ ಕಾಲ ರಾಜಕಾರಣದಲ್ಲಿದ್ದು ವಿಜಯಪುರ ಮತ್ತು ರಾಜ್ಯದ ಇತಿಹಾಸದಲ್ಲಿ ದಾಖಲಾಗಿ ಹೋದರು. ಈ ಹಿರಿಯರಿಗೆ ಶರಣಾಂಜಲಿ..
..
ಸಾದಾ ಗ್ರಾಮ ಸೇವಕನಾಗಿದ್ದ ವ್ಯಕ್ತಿಯೊಬ್ಬ ತನ್ನ ಇಚ್ಛಾಶಕ್ತಿ ಹಾಗೂ ನಿರಂತರ ಶ್ರಮದಿಂದ ಇಷ್ಟು ಸಾಧನೆ ಮಾಡಿದ್ದು ಮಾದರಿಯೇ. ಪುರಸಭೆ ಸದಸ್ಯನಾಗಿ ರಾಜಕೀಯ ಪ್ರವೇಶಿಸಿ, ಆಗಿನ ಕಾಲಕ್ಕೇ ದೊಡ್ಡ ಟಾಕೀಸು, ಶಿಕ್ಷಣ ಸಂಸ್ಥೆಗೆ ಕೈ ಹಾಕಿದರು. ಪಕ್ಷೇತರ ಅಭ್ಯರ್ಥಿಯಾಗಿ ಶಾಸನ ಸಭೆಗೆ ಸ್ಪರ್ಧಿಸಿ ಸೋತರು. ನಂತರ ಜನತಾ ದಳದಿಂದ ತೊಂಬತ್ತರ ದಶಕದಲ್ಲಿ ಮೊದಲ ಬಾರಿ ಶಾಸಕನಾಗಿ, ಮಂತ್ರಿಯಾಗಿದ್ದರು. ಈ ಭಾಗದ ದೇವೇಗೌಡರಂತೆ ಸದಾ ರಾಜಕೀಯವೇ ಉಸಿರಾಡಿ, ಅಧಿಕಾರದಲ್ಲಿದ್ದೇ ಉಸಿರು ಚೆಲ್ಲಿ ಹೋದರು.
..
ಪುತ್ರ ಅಶೋಕ ಮನಗೂಳಿ ಅವರ ಜವಾಬ್ದಾರಿ ಈಗ ಹೆಚ್ಚಿದೆ. ಇಷ್ಟು ದಿನ ತಂದೆಯ ನೆರಳಲ್ಲಿದ್ದ ಇವರೀಗ ನೇರ ಬಿಸಿಲಿಗೆ ಬೀಳುವ ಸಮಯ ಬಂತು. ಇವರೂ ಸೇರಿ, ಇವರ ಕುಟುಂಬವೀಗ ನೋವಲ್ಲಿದೆ.
ಇಂತಹ ಸಂದರ್ಭ ಕೆಲ ತಿಂಗಳಲ್ಲಿ ಸಿಂದಗಿ ಕ್ಷೇತ್ರ ಉಪ ಚುನಾವಣೆ ಎದುರಿಸಬೇಕಾಗುತ್ತದೆ. ರಾಜಕೀಯ ಮೇಲಾಟ ಶುರುವಾಗಲಿದೆ.
ಕಾಂಗ್ರೆಸ್ ಟಿಕೆಟ್ ಗಾಗಿ ಬಡಿದಾಟ ಹೆಚ್ಚಲಿದೆ. ಸತತ ಏಳು ಸಲ ಸ್ಪರ್ಧಿಸುತ್ತಲೇ ಬಂದಿದ್ದ ಮನಗೂಳಿ ಮುತ್ತ್ಯಾ ಇಲ್ಲದ ಮೂರು ದಶಕಗಳ ನಂತರದ ಮೊದಲ ಚುನಾವಣೆ ಇದಾಗಲಿದೆ. ಎಲ್ಲರಿಗೂ ಇವರ ಇಲ್ಲದಿರುವಿಕೆ ಕಾಡುವುದಂತೂ ಸಹಜ.
–ಶಿವಕುಮಾರ್ ಉಪ್ಪಿನ, ಪತ್ರಕರ್ತ