ಬಾಲಂಗಳ, ಚಂದಮಾಮನ ಜಗತ್ತಿನಲ್ಲಿ…! ಯಶಸ್ವಿ ದೇವಾಡಿಗ ಬರಹ
ಬಾಲಂಗಳ, ಚಂದಮಾಮನ ಜಗತ್ತಿನಲ್ಲಿ…!
ಮನೆಯಲ್ಲಿ ಹೇಗೆ ಅಂದ್ರೆ ,ಪುಸ್ತಕವನ್ನು ಅತ್ಯಂತ ಅಚ್ಚುಕಟ್ಟಾಗಿ ಅದಕ್ಕೆ ಪ್ರತ್ಯೇಕವಾದ ಕೋಣೆಯಲ್ಲಿ ಗ್ರಂಥಾಲಯ ರೂಪದಲ್ಲಿ ನನ್ನ ತಂದೆ ಪುಸ್ತಕಗಳನ್ನು ಇಟ್ಟಿದ್ದಾರೆ. ನಾವು ಓದೋದೇ ಅಪರೂಪ. ಹೀಗೆ ಆ ಕೋಣೆಗೆ ಪ್ರವೇಶಿಸುವುದು ಇನ್ನೂ ಅಪರೂಪ. ಇಂತಹ ಸಮಯದಲ್ಲಿ ಹೋಗಬೇಕೆಂದು ಅನಿಸಿ ಒಂದೊ0ದೇ ಪುಸ್ತಕವನ್ನ ಮುಟ್ಟಿ ಮುಟ್ಟಿ ನೋಡುವಾಗ ‘ಧಪ್’ ಎಂದು ಒಂದು ಚಿಕ್ಕ ಪುಸ್ತಕ ಕೆಳಗೆ ಬಿತ್ತು.
ನೋಡಿ ಖುಷಿ ಆಯಿತು. ಅದರ ಮೇಲೆ ನನ್ನ ಹೆಸರು ಬರೆದಿದೆ. ಸುಮಾರು 2001 ನೇ ಇಸಿವಿಯ ಪುಸ್ತಕ. ಬೆಲೆ ಕೇವಲ 6 ರೂಪಾಯಿ. ಹೆಸರು ತುಂತುರು. ಮತ್ತೆ ಇದೇ ಪುಸ್ತಕ ಸಿಗಬಹುದೆಂದು ಹುಡುಕಿದೆ ಮತ್ತೆ ಇನ್ನೊಂದು ಸಿಕ್ಕಿತು .ಬೆಲೆ ಕೇವಲ 10 ರೂಪಾಯಿ, 15 ರೂಪಾಯಿ ಹೀಗೆ ಬರೆದಿತ್ತು.
‘ಏನಪ್ಪಾ ಈಕೆ ಪುಸ್ತಕದ ಬೆಲೆ ನೋಡುತ್ತಾ ನಿಂತಿದ್ದಾಳೆ ಅದರಲ್ಲಿ ಏನಿದೆ ಹೊಸ ವಿಷಯ ಏನಿಸಿದ್ರೂ , ಈ ಚಿಕ್ಕ ಬೆಲೆ ಈಗ ತಾತ್ಸಾರ ಅನಿಸಿದರೂ 20 ವರ್ಷ ಗಳ ಹಿಂದೆ ಈ ಆರು, ಎಂಟು, ಹದಿನೈದು ರೂಪಾಯಿಗಳು ಆಗಿನ ಕಾಲದ ಅತ್ಯಂತ ದೊಡ್ಡ ಮಟ್ಟದ ಬೆಲೆ.
ಬಾಲ್ಯದಲ್ಲಿ ಇರುವಾಗ ಬಸ್ ತಂಗುದಾಣದಲ್ಲಿ ಹಳ್ಳಿಯಿಂದ ಹಳ್ಳಿಗೆ, ಹೀಗೆ ತಿಂಗಳಿಗೊಮ್ಮೆ ಹೊರಡಲು ನಿಂತಾಗ ಅಕ್ಕ ಪಕ್ಕದ ಅಂಗಡಿಗಳಲ್ಲಿ ಆ ಪುಸ್ತಕಗಳು ಉದ್ದದ ಹಗ್ಗದಲ್ಲಿ ಜೋತಾಡಿ ಇರುತ್ತಿದ್ದವು.
ಕನ್ನಡ ಶಾಲೆಯಲ್ಲಿ ಓದುತ್ತಿದ್ದ ನಮಗೆ ಹಳ್ಳಿಯಲ್ಲಿ ಮನೆ. ಪುಸ್ತಕ ಬೇಕು ಎಂದರೆ ಪಟ್ಟಣಕ್ಕೆ ಬರಲೇ ಬೇಕು ಆ ಅವಶ್ಯಕತೆ ನಮಗಿತ್ತೂ ಕೂಡ. ಹೀಗಿರುವಾಗ ಆ ಸಮಯದಲ್ಲಿ ಬಸ್ ಗಳ ಕೊರತೆ , ಇದೆಲ್ಲದರ ಮಧ್ಯೆ , ಮೊಬೈಲ್ ಇಲ್ಲದ ಕಾರಣ ಬಹುಶಃ ಬಸ್‌ನಲ್ಲಿ ಪ್ರಯಾಣ ಮಾಡುವಾಗ ಕಾಲ ಕಳೆಯಬೇಕಲ್ಲ. ಆಗ ನಮ್ಮೊಂದಿಗೆ ಇದ್ದ ಪುಟ್ಟ ವಸ್ತು ಎಂದರೆ ಸ್ಮಾರ್ಟ್ ಫೋನ್ ಅಲ್ಲ , ಬದಲಾಗಿ ಅದೇ ತುಂತುರು, ಚಂದಮಾಮಮ, ಚಂಪಕ, ಬಾಲಮಂಗಳ. ಇದು ಬಹುಶಃ ಎಲ್ಲರೂ ಈ ಪುಸ್ತಕದ ಬಗ್ಗೆ ಕೇಳಿದ್ದೀರಿ. ಓದಿದ್ದೀರಿ. ಈಗಿನ ಮಕ್ಕಳನ್ನು ಹೊರತು ಪಡಿಸಿ. ಇಂದಿಗೂ ನಾವು ಈ ಎಲ್ಲಾ ಪುಸ್ತಕಗಳನ್ನು ನೋಡುತ್ತೇವೆ. ಅದು ಕೇವಲ ಗ್ರಂಥಾಲಯದಲ್ಲೋ, ಅಥವಾ ಪುಸ್ತಕ ಮಳಿಗೆಯಲ್ಲೋ ಮೂಲೆಯಲ್ಲಿ ಧೂಳು ಹಿಡಿಸಿಕೊಂಡು ಬಿದ್ದಿರುತ್ತದೆ.
ನೆನಪುಗಳು ಹಾಗೆ ಅದಕ್ಕೆ ಇಂತಹದೇ ವಾಸ್ತವ ಬೇಕಂತಿಲ್ಲ. ಈ ಮಕ್ಕಳ ಪುಸ್ತಕಗಳನ್ನು ನಾವು ಚಿಕ್ಕವರಿದ್ದಾಗ ಅದರಲ್ಲಿ ಬಂದಂತಹ ವ್ಯಂಗ್ಯ ಚಿತ್ರದ ಕಥೆಗಳು, ಪುಟಾಣಿ, ಕಥೆಗಳು, ಚಿಕ್ಕ ಪುಟ್ಟ ಅಂಕಿ ಆಟಗಳು, ಕವಿತೆಗಳು, ಒಂದೇ ಎರಡೇ 6 ರೂಪಾಯಿಯಲ್ಲಿ ನಮಗೆ 6 ಸಾವಿರ ಬೆಲೆಯ ಸ್ಮಾರ್ಟ್ ಪೋನ್ ಗಳಿಂತ ಅತ್ಯಂತ ಮಜವಾಗಿ ಮನೋರಂಜನೆ ಕೊಡುವಲ್ಲಿ ಈ ಎಲ್ಲಾ ಪುಸ್ತಕಗಳು ಪಾತ್ರವಹಿಸಿದೆ.
ಈಗೆಲ್ಲ ಆನ್ ಲೈನ್ ಮೂಲಕ ಅತ್ಯಂತ ವೇಗದಲ್ಲಿ ತರಿಸಿಕೊಳ್ಳುವ ಸಮಯ ಇದ್ದರೂ ಆಗೆಲ್ಲ ನಾವು ಬರುವ ಸ್ವಲ್ಪ ಪುಸ್ತಕಗಳಿಗೆ ಕಾಯ್ದುಕೊಂಡು ಯಾರಾದರೂ ನಮಗಿಂತ ಮುಂಚೆ ತರಿಸಿದರೆ ಅದನ್ನು ಮುಂಚಿತವಾಗಿ ರೆಜಿಸ್ಟರ್ ಮಾಡಿ ಓದುತ್ತಿದ್ದೆವು. ಎಲ್ಲಾ ಭಾಷೆಗಳಲ್ಲಿ ಲಭ್ಯವಿರುವಂತಹ ಈ ಮಕ್ಕಳ ಪುಸ್ತಕ ಭಾಷೆಯ ಜೊತೆ, ಅತ್ಯಂತ ಕ್ರೀಯಾಶೀಲವಾದ ಜ್ಞಾನ ಕೊಡುತ್ತಿತ್ತು.
ನಮಗೆ ಇಂದು ನೆನಪಿದೆ. ನಾವೆಲ್ಲ ಚಿಕ್ಕವರಿದ್ದಾಗ ಪೇಟೆಗೆ ಹೋಗಬೇಕು ಎಂದರೆ ಅಮ್ಮ ಅಪ್ಪ ಕೈ ಹಿಡಿದು ,ಬಾಲಮಂಗಳ ಬೇಕಾ?,, ತುಂತುರು ಬೇಕಾ.. ? ಚಂದಮಾಮ ಬೇಕಾ..ಎಂದು ಕೇಳೋರು . ನಾವು ಎಲ್ಲವೂ ಬೇಕು ಎಂದು ಅಷ್ಟು ಪುಸ್ತಕಗಳನ್ನ ತಂದು ಒಂದೇ ಸಮನೆ ಓದುತ್ತಿದ್ದ ನೆನಪು ಇಂದು ಕಾಡುತ್ತದೆ.
ಎಲ್ಲಾದರೂ ಕಥೆ, ಓದುವಾಗ ಸಶೇಷ ಅಂದರೆ, ಮುಂದೆ ಕಾಯ್ದಿರಿಸಿ ಎಂದು ಬರೆದಾಗ ನಮಗೆ ಒಂದು ತರಹದ ದುಃಖ. ಯಾಕೆ ಹೇಳಿ,!! ಅಂದು ಆನ್ ಲೈನ್ ವ್ಯವಸ್ಥೆ ಇಲ್ಲದ ಕಾರಣ ಕೇವಲ ಹತ್ತೋ ಹದನೈದು ಅಷ್ಟೇ ಪುಸ್ತಕಗಳ ಕಾಪಿ ಮಾರುಕಟ್ಟೆಗೆ ಬರುವ ಕಾರಣಾಂತರದಿಂದ ಮತ್ತೇ ನಾವು ಮುಂದಿನ ತಿಂಗಳಿನ ಅಥವಾ ವಾರದ ಪುಸ್ತಕ ಬೇಕು ಎಂತಾದರೆ ಅದು ಸಿಗುತ್ತದೆಯೋ ಇಲ್ಲವೋ ಎಂಬ ನಿರೀಕ್ಷೆಯೇ ಕೂಡ ಇರುತ್ತಿರಲ್ಲ.
ಆದರೂ ಕೆಲವೊಂದು ಪುಸ್ತಕಗಳು ನಮ್ಮ ಪ್ರಾಥಮಿಕ ಶಾಲೆಯಲ್ಲಿ ಗ್ರಂಥಾಲಯದಲ್ಲಿ ತರಿಸುವಾಗ ಇದ್ದ ಪುಸ್ತಕಗಳನ್ನೇ ಓದಿ ಖುಷಿ ಪಟ್ಟ ಸಂದರ್ಭಗಳು ಹೆಚ್ಚು. ಇಂದು ದಿನಪತ್ರಿಕೆಯಲ್ಲಿ ಇವತ್ತಿಗೂ ಮಕ್ಕಳ ಪುಟ ಬರುತ್ತಿದೆ. ಮಕ್ಕಳಂತೆ ಆಗಲು ವಯಸ್ಸಿಗೆ ಹಂಗಿಲ್ಲಾ. ಆ ದಿನಗಳ ಆ ಎಲ್ಲಾ ಪುಸ್ತಕದ ಪ್ರಭಾವದಿಂದ ಇವತ್ತಿಗೂ ಮಕ್ಕಳ ಪುಟವನ್ನು ಓದುತ್ತೇವೆ, ಚುಕ್ಕಿ ಆಟ, ಪ್ರಾಣಿಗಳ ಆಟ, ಕಂಡು ಹಿಡಿಯಿರಿ ಈ ತರಹದ ಎಲ್ಲಾ ಮನೋರಂಜನೆಗಳನ್ನು ಪೆನ್ಸಿಲ್ ಹಿಡಿದು ಪ್ರತೀ ಭಾನುವಾರ ಕಾಯತ್ತಾ ಇರುತ್ತೇವೆ.
ಇಂದಿಗೂ ಪತ್ರಿಕೆ ,ಪುಸ್ತಕಗಳು ನೆನಪುಗಳನ್ನು ಮರೆ ಮಾಚದಂತೆ ಮಾಡುತ್ತಿದೆ. ಒಟ್ಟಾರೆ ಈಗಿನ ಕಾಲಮಾನದ ಮಕ್ಕಳು ಸ್ಮಾರ್ಟ್ ಪೋನ್ ಜೊತೆಗೆ ಪುಸ್ತಕವನ್ನ ಪ್ರೀತಿಸುವ ಮನೋಭಾವ ಬೆಳಸಿಕೊಂಡರೆ ಸ್ಮಾರ್ಟ್ ಆಗಿ ಬೆಳೆಯುತ್ತೀರಿ ಎಂಬುದು ನನ್ನ ಭಾವನೆ.
-ಯಶಸ್ವಿ ದೇವಾಡಿಗ.
*ಪತ್ರಿಕೋದ್ಯಮ ವಿದ್ಯಾರ್ಥಿನಿ*
*ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ ವಿಜಯಪುರ* ..
*