ಅಂಕಣ

ಭಾವನೆಗೆ ನೋವುಂಟು ಮಾಡಬೇಡಿ..! ಅವಳ ಸಾಧನೆಗೆ ಪ್ರೋತ್ಸಾಹವಿರಲಿ

ಪ್ರೋತ್ಸಾಹವೋ..! ಆಯ್ಕೆಯೋ…!

ಇವಳು ನಿಮ್ಮ ಮಗಳಾ..? ಯಾಕೆ ಇಷ್ಟು ದಪ್ಪಗಿದ್ದಾಳೆ..? ಏನಮ್ಮಾ ನಿನ್ನ ವಯಸ್ಸಿನಲ್ಲಿ ನಿನ್ನ ಅಮ್ಮ ಹೇಗೆ ಇದ್ದರು ಗೊತ್ತಾ..? ಸಾಮಾನ್ಯವಾಗಿ ಸಂಜೆ ವಾಕಿಂಗ್ ಸಮಯದಲ್ಲಿ ಕೇಳೋ ಸುಪ್ರಭಾತ ಮಾತುಗಳು.

ನನ್ನ ಗೆಳತಿ ಅತ್ಯಂತ ಪ್ರತಿಭಾವಂತೆ. ಕಣ್ಣಿಲ್ಲ ಆದರೆ ಚೆಂದವಾಗಿ ಹಾಡ್ತಾಳೆ. ಬಡತನ ಒಂದು ಕಡೆ. ಮನೆಯಲ್ಲಿ ಒಂದೊತ್ತು ಊಟಕ್ಕೂ ಕಷ್ಟ, ಪುಟ್ಟ ಮನೆಯಲ್ಲಿ ವಸ್ತುಗಳನ್ನ ಇಡದೇ ಇರುವಷ್ಟು ಇವಳ ಪ್ರಶಸ್ತಿಗಳು ತುಂಬಿ ಹೋಗಿವೆ. ವರ್ಷ ಕಳೆದಂತೆ ಒಂದು ಪೋನ್ ಕಾಲ್ ಬಂತು ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಳು ಎಂದು. ಕಾರಣ ಇಷ್ಟೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದಳು. ದಪ್ಪಗಿರುವ ಒಂದೇ ಕಾರಣಕ್ಕೆ ಜನರ ತುಚ್ಚ ಮಾತುಗಳು ಅವಳನ್ನೇ ಬಲಿ ತೆಗೆದುಕೊಂಡಿತು.

ನಮ್ಮ ಸಮಾಜದಲ್ಲಿ ಸಾಧನೆಯನ್ನ ಪ್ರಶಂಶಿಸುವ ಮನೋಭಾವ ಇಲ್ಲದಿದ್ದರೂ, ಅವರ ಅವನತಿಗೆ ಕಾಯುವ ಎಷ್ಟೋ ವಿಕೃತ ಮನಸ್ಸುಗಳು ನಮ್ಮ ಮುಂದೆ ಇದೆ. ಆಕೆ ಆರೋಗ್ಯ ದೃಷ್ಟಿಯಿಂದ ಸಣ್ಣ ಆಗುಲು ಪ್ರಯತ್ನಿಸಿದ್ದು ನಿಜ, ಆರೋಗ್ಯದ ಒಂದು ಸಮಸ್ಯೆಯಿಂದ ಆಕೆ ದಪ್ಪವಾಗುತ್ತ ಹೋದಳು.

ಇಲ್ಲಿ ಒಂದು ಸತ್ಯಾಂಶ ಏನು ಅಂದರೆ, ಆಕೆಗೆ ದೃಷ್ಟಿ ಹೋಗಿದೆ ನಿಜ. ತನಗೆ ದೃಷ್ಟಿ ಇಲ್ಲವೆಂಬ ನೋವಿಗಿಂತ ತಾನು ನೋಡಲು ದಪ್ಪಗಿದ್ದೇನೆ, ಸಣ್ಣಗಿಲ್ಲ ಎಂಬ ಕೀಳರಿಮೆಯನ್ನು ಅವಳಲ್ಲಿ ಹುಟ್ಟಿಸಿದ, ಅತ್ಯಂತ ಬುದ್ಧೀಜೀವಿಗಳಾದ ನಮಗೆ ಪ್ರಶಂಸೆ ಸಿಗಲೇ ಬೇಕು ಅಲ್ವಾ?

ಇರಲಿ, ಸಾಮಾನ್ಯವಾಗಿ ಇಂದು ಬೊಜ್ಜು, ಎಲ್ಲರಲ್ಲಿಯೂ ಸರ್ವೇ ಸಾಮಾನ್ಯ. ಕೆಲವೊಬ್ಬರು ವಂಶದಿಂದಲೇ ಪಾರಂಪರಿಕವಾಗಿ ಬಂದರೆ , ಇನ್ನೂ ಕೆಲವೊಬ್ಬರಿಗೆ ಆಹಾರ ಅತಿಯಾಗಿ ತಿಂದು, ಅಥವಾ ಸಂತಸಕ್ಕೋ, ನೋವಿಗೋ , ಒತ್ತಡಕ್ಕೋ ಬರುವುದು ಇದೆ. ಆದರೆ ಇಂದು ನಾವು ಗಮನಿಸಿದಾಗ ಹೆಣ್ಣು ಮಕ್ಕಳು ಈ ವಿಚಾರಕ್ಕೆ ಅತ್ಯಂತ ಮಾನಸಿಕವಾಗಿ ಖಿನ್ನತೆಗೆ ಬಳಲುತ್ತಿದ್ದಾರೆ.

ಹುಟ್ಟಿದ ಮನೆಯಲ್ಲಿಯೇ 20 ದಾಟಿದರೆ ಹೆಣ್ಣುಮಕ್ಕಳನ್ನು ಮದುವೆ ಮಾಡಿ ಕಳಿಸಿದರೆ ಸಾಕು ಎನ್ನುವ ಮನಸ್ಥಿತಿ ಅದೆಷ್ಟೋ ಪಾಲಕರಿಗೆ ಇದೆ. ದಪ್ಪ ಇದ್ದರೆ ಸಾಕು ಅವಳಿಗೆ ಮದುವೆಯೇ ಆಗಲಾರದ ಎಷ್ಟೋ ಉದಾಹರಣೆಗಳು ನಮ್ಮ ಕಣ್ಣ ಮುಂದೆ ಇದೆ.

ಇನ್ನು ಅವಕಾಶಗಳಿಗೂ ನೋಡುವುದಾದರೆ ಅವಳ ಸಾಧನೆಗಿಂತ ಹೊರಗಿನ ಬಾಹ್ಯ ಸೌಂದರ್ಯಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿರುವುದು ಒಂದು ಶೋಚನೀಯ ಸಂಗತಿ ಕೂಡ. ಆರೋಗ್ಯದ ಹಿತದೃಷ್ಟಿಯಿಂದ ಹೆಣ್ಣು ಮಗಳು ತನ್ನ ದೇಹದ ಬೊಜ್ಜು ಕರಗಿಸಿ ಕೊಳ್ಳುವುದು ಸಂತಸದ ಸಂಗತಿಯೇ ಸರಿ ಆದರೆ ಕೆಲವೊಮ್ಮೆ ಅವರ ಹುಟ್ಟು ಸ್ವಾಭಾವಿಕ ದೇಹ ಗುಣಕ್ಕೆ ಅವರ ತಪ್ಪೇ? ಇಲ್ಲಿ ಒಂದು ವಿಚಾರ ಬೇಕಾಗಿದೆ, ಸೌಂದರ್ಯ ಇದ್ದರೆ ಮಾತ್ರ ಅವಳು ಚಂದವೇ ಅಥವಾ ಭಾವನೆಗಳಿಗೆ, ಅವಳ ಮನಸ್ಸುಗಳಿಗೆ ಸ್ಪಂದಿಸುವ ಮನಸ್ಸುಗಳು ಇದೇಯಾ ಅನ್ನುವ ಅನುಮಾನಗಳು ಹೆಚ್ಚುತ್ತಿದೆ ಕೂಡ.

ಇದೆಲ್ಲವನ್ನೂ ಮೀರಿ ಸಾಧನೆ ಮಾಡುತ್ತೇನೆ ಎಂದೂ ಪಣ ತೊಟ್ಟರೂ ಕೂಡ, ಪರೋಕ್ಷವಾಗಿ ಅವಳನ್ನು ದೇಹದ ಸೌಂದರ್ಯದ ಒಂದು ತುಚ್ಚ ವಿಚಾರಕ್ಕೆ ಸಮಾಜ ತುಳಿಯುವ ಕೆಲಸ ಮಾಡುತ್ತಿದೆ ಮತ್ತು ಹೆಣ್ಣು ಹೀಗೆ ಇರಬೇಕು , ಎನ್ನುವ ಪಂಜರದಲ್ಲಿ ಹಾಕಿ ಅವಳಿಗೆ ಮಾನಸಿಕವಾಗಿ ಅವಳನ್ನು ಹಿಂಸಿಸುತ್ತಿವೆ. ಇನ್ನಾದರೂ ಅವಳ ಭಾವನೆಗಳಿಗೆ ನೋವಾಗದಂತೆ ನಡೆದುಕೊಂಡು ಸಾಧನೆಗೆ ಪ್ರೋತ್ಸಾಹಿಸಿ. ಆಯ್ಕೆ ನಿಮಗೆ ಬಿಟ್ಟದ್ದು.

ಯಶಸ್ವಿ ದೇವಾಡಿಗ, ಶಿರಸಿ.
 ಉತ್ತರಕನ್ನಡ.

Related Articles

One Comment

  1. ಸೂಕ್ಷ್ಮ ಸಂವೇದನೆಯ ಲೇಖನ. ಅಭಿನಂದನೆಗಳು

Leave a Reply

Your email address will not be published. Required fields are marked *

Back to top button