ನೆರೆ ಪ್ರವಾಹ : ಮನೆ ಕಳೆದುಕೊಂಡವರಿಗೆ 10ಲಕ್ಷ ರೂ. ಪರಿಹಾರ ಕೊಡಿ!
ಬೆಂಗಳೂರು : ನೆರೆ ಪ್ರವಾಹದಲ್ಲಿ ಮನೆ ಕಳೆದುಕೊಂಡವರಿಗೆ ರೂ.10 ಲಕ್ಷ ಪರಿಹಾ ಹಾಗೂ ಒಂದು ಎಕರೆ ಕಬ್ಬು ಬೆಳೆ ನಾಶಕ್ಕೆ ರೂ.50 ಸಾವಿರ ಪರಿಹಾರ ನೀಡಬೇಕು. ಮುಳುಗಡೆಯಾದ ಇಡೀ ಊರನ್ನೆ ಸ್ಥಳಾಂತರಿಸುವ ಕೆಲಸ ತುರ್ತಾಗಿ ಆಗಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ. ಆದರೆ, ಬಿಜೆಪಿ ನಾಯಕರು ಆಪರೇಷನ್ ಕಮಲಕ್ಕೆ ತೋರುತ್ತಿದ್ದ ಉತ್ಸಾಹವನ್ನು ಪ್ರವಾಹ ಪೀಡಿತರ ಕಷ್ಟಕ್ಕೆ ನೆರವಾಗುವುದರಲ್ಲಿ ತೋರುತ್ತಿಲ್ಲ. ಅಧಿಕಾರ ಸಿಗುವವರೆಗೂ ಇದ್ದ ಜನಪರ ಕಾಳಜಿ ಈಗೇಕೆ ಇಲ್ಲ ಎಂದು ಪ್ರಶ್ನಿಸಿದ್ದಾರೆ.
ರಾಜ್ಯದಿಂದ ಬಿಜೆಪಿಯ 25 ಸಂಸದರು ಆಯ್ಕೆಯಾಗಿದ್ದಾರೆ, ರಾಜ್ಯದಲ್ಲಿ ಬಿಜೆಪಿಯವರದೇ ಸರ್ಕಾರವಿದೆ, ಪ್ರವಾಹ ಬಂದು ತಿಂಗಳಾಗುತ್ತಾ ಬಂತಾದರೂ ಕೇಂದ್ರ ಸರ್ಕಾರ ನಯಾಪೈಸೆ ಹಣವನ್ನು ಬಿಡುಗಡೆ ಮಾಡಿಲ್ಲ. ಯಡಿಯೂರಪ್ಪನವರು ಪದೇ ಪದೇ ದೆಹಲಿಗೆ ಹೋಗಿ ಬಂದರೂ ಒಂದು ಪೈಸೆ ಅನುದಾನ ತರಲು ಅವರಿಂದ ಆಗಲಿಲ್ಲ ಎಂದಿದ್ದಾರೆ.
ಪ್ರವಾಹ ಪರಿಹಾರ ಕಾರ್ಯಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಸಂಪೂರ್ಣ ಸಹಕಾರ ನೀಡುತ್ತೇವೆ. ಕೂಡಲೇ ವಿಶೇಷ ಅಧಿವೇಶನ ಕರೆದು, ಕೇಂದ್ರಕ್ಕೆ ಸರ್ವಪಕ್ಷ ನಿಯೋಗ ಕೊಂಡೊಯ್ಯಲಿ. ಪ್ರವಾಹ ಪರಿಸ್ಥಿತಿಯನ್ನು ಕೇಂದ್ರಕ್ಕೆ ನಾವು ಮನವರಿಕೆ ಮಾಡಿಕೊಟ್ಟು, ಪರಿಹಾರದ ಹಣ ಕೇಳುತ್ತೇವೆ. ಆಗಲೂ ಕೇಂದ್ರ ಸರ್ಕಾರ ಅನುದಾನ ಕೊಡದಿದ್ದರೆ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ಮಾಡುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಟ್ವೀಟ್ ಮಾಡಿದ್ದಾರೆ.