ಪ್ರಮುಖ ಸುದ್ದಿ

ಅಪ್ಪ-ಅಮ್ಮನ ಸಮಾಧಿ ಪಕ್ಕದಲ್ಲೇ ನನ್ನ ಸಮಾಧಿ ಆಗ್ಬೇಕು ಅಂದಿದ್ದರಂತೆ ಖಮರುಲ್ ಇಸ್ಲಾಂ

ಕಲಬುರಗಿ: ಮಾಜಿ ಸಚಿವ , ಕಲಬುರಗಿ ಉತ್ತರ ಮತಕ್ಷೇತ್ರದ ಶಾಸಕ ಖಮರುಲ್ ಇಸ್ಲಾಂ ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಅವರು ಇಂದು ಕೊನೆಯುಸಿರೆಳೆದಿದ್ದಾರೆ.

1948, ಜನೇವರಿ 27 ರಂದು ಜನಿಸಿದ್ದ ಖಮರುಲ್ ಇಸ್ಲಾಂ 1978 ರಲ್ಲಿ ಮುಸ್ಲಿಂ ಲೀಗ್ ಪಕ್ಷದಿಂದ ರಾಜಕೀಯ ಕ್ಷೇತ್ರ ಪ್ರವೇಶಿಸಿದ್ದರು. ಮುಸ್ಲಿಂ ಲೀಗ್ ಪಕ್ಷದಿಂದ ಮೊದಲ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಬಳಿಕ ಜನತಾದಳದಿಂದ ಗೆದ್ದು ವಸತಿ ಸಚಿವರಾಗಿದ್ದರು. ತದನಂತರ ಕಾಂಗ್ರೆಸ್ ಸೇರಿದ್ದ ಖಮರುಲ್ ಇಸ್ಲಾಂ ವಸತಿ, ಕಾರ್ಮಿಕ, ವಕ್ಫ್ ಮತ್ತು ಪೌರಾಡಳಿತ ಖಾತೆಗಳ ಸಚಿವರಾಗಿದ್ದರು.

ಕಲಬುರಗಿ ಮತಕ್ಷೇತ್ರದಿಂದ 6 ಬಾರಿ ಶಾಸಕರಾಗಿದ್ದ ಅವರು, 1996-98 ರವರೆಗೆ ಸಂಸದರೂ ಆಗಿದ್ದರು.
ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿಯಾಗಿ, ಕೇರಳ ರಾಜ್ಯದ ಉಸ್ತುವಾರಿಯಾಗಿ ಸೇವೆ ಸಲ್ಲಿಸಿದ್ದರು. ಸಿದ್ಧರಾಮಯ್ಯ ಸಂಪುಟದಲ್ಲಿ ಸಚಿವರಾಗಿದ್ದ ಖಮರುಲ್ ಇಸ್ಲಾಂ ಕಳೆದ ವರ್ಷವಷ್ಟೇ ಸಚಿವ ಸ್ಥಾನ ಕಳೆದುಕೊಂಡಿದ್ದರು.

ಕಳೆದ ಸುಮಾರು ದಿನಗಳಿಂದ ಅನಾರೋಗ್ಯದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಅವರು ಇಂದು ಚಿಕಿತ್ಸೆ ಫಲನೀಡದೆ ಕೊನೆಯುಸಿರೆಳೆದಿದ್ದಾರೆ. ಸಚಿವರಾದ ಶರಣ ಪ್ರಕಾಶ ಪಾಟೀಲ್, ಪ್ರಿಯಾಂಕ ಖರ್ಗೆ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.

ಕಲಬುರಗಿ ನಗರದ ಜೆಸಿಟಿ ಕಾಲೇಜು ಆವರಣದಲ್ಲಿ ನಾಳೆ ಬೆಳಗ್ಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಕಲಬುರಗಿ ನಗರದ ಕೋರ್ಟ್ ಹಿಂಭಾಗದಲ್ಲಿರುವ ಕಲಂದರಖಾನ್ ಖಬರಸ್ತಾನದಲ್ಲಿ ದಫನ್ ಮಾಡಲಾಗುವುದು ಎಂದು ಖಮರುಲ್ ಇಸ್ಲಾಂ ಅವರ ಕುಟುಂಬದ ಮೂಲಗಳಿಂದ ತಿಳಿದು ಬಂದಿದೆ.

ಒಂದು ವರ್ಷದ ಹಿಂದೆಯೇ ತಮ್ಮ ತಂದೆ-ತಾಯಿಯ ಸಮಾಧಿ ಬಳಿಯೇ ನನ್ನ ಸಮಾಧಿ ಮಾಡಬೇಕು ಎಂದು ಖಮರುಲ್ ಇಸ್ಲಾಂ ಸಂಬಂಧಿಕರಿಗೆ ಹೇಳಿದ್ದರಂತೆ. ಹೀಗಾಗಿ, ಖಮರುಲ್ ಇಸ್ಲಾಂ ಅವರ ಆಶಯದಂತೆ ಖಬರಸ್ತಾನದಲ್ಲಿ ಅವರ ಸಮಾಧಿ ಮಾಡಲಾಗುವುದು ಎಂದು ಖಮರುಲ್ ಇಸ್ಲಾಂ ಅವರ ಕುಟುಂಬದ ಮೂಲಗಳಿಂದ ತಿಳಿದುಬಂದಿದೆ.

Related Articles

Leave a Reply

Your email address will not be published. Required fields are marked *

Back to top button