‘ಮಾಂತ್ರಿಕ’ ರಾಜಕಾರಣಿ ಹೆಚ್.ಡಿ.ದೇವೇಗೌಡರಿಂದ ಮತ್ತೆ ಮಹಾಯಾಗ!
-ಮಲ್ಲಿಕಾರ್ಜುನ ಮುದನೂರ್
ಮಾಜಿ ಪ್ರಧಾನಿ, ಜೆ.ಡಿ.ಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ನಿಜಕ್ಕೂ ಮಾಂತ್ರಿಕ ರಾಜಕಾರಣಿ. ಅವರಿಗಿರುವ ರಾಜಕೀಯ ನಿಪುಣತೆ ಎಂಥವರನ್ನೂ ಬೆರಗುಗೊಳಿಸುತ್ತದೆ. ಅದು ಅವರ ಸುದೀರ್ಘ ರಾಜಕೀಯ ಅನುಭವದಿಂದ ಸಿದ್ಧಿಸಿದ ತಪೋಶಕ್ತಿ ಎಂದರೆ ಅತಿಶಯೋಕ್ತಿ ಅನ್ನಿಸದು. ಇದೆಲ್ಲಾ ದೇವೇಗೌಡರ ಕುರಿತು ದೇಶಕ್ಕೆ ಗೊತ್ತಿರೋ ವಿಷಯ ಬಿಡಿ. ಈಗ ಹೊಸ ವಿಷಯವೇನೆಂದರೆ ಕಾಂಗ್ರೆಸ್ ಅಂತ ಕಾಂಗ್ರೆಸ್ ಪಕ್ಷ ಕೂಡ ಮೃದು ಹಿಂದುತ್ವ ಧೋರಣೆ ತಳೆದಿದೆ. ಎಐಸಿಸಿ ಅದ್ಯಕ್ಷ ರಾಹುಲ್ ಗಾಂಧಿ ಟೆಂಪಲ್ ರನ್ ಆರಂಭಿಸಿದ್ದಾರೆ. ಇದೇ ಸಂದರ್ಭದಲ್ಲಿ ದೇವೇಗೌಡರು ಶೃಂಗೇರಿ ಮಠದಲ್ಲಿ ಮಹಾಯಾಗಕ್ಕೆ ಅಣಿಯಾಗಿದ್ದಾರೆ.
ಹೌದು, ಇಂದು ಸಂಜೆಯೇ ಬೆಂಗಳೂರಿನಿಂದ ಹೊರಟ ದೊಡ್ಡಗೌಡರು ಪತ್ನಿ ಚನ್ನಮ್ಮ, ಪುತ್ರ ರೇವಣ್ಣ ಅವರ ಜೊತೆಯಲ್ಲಿ ಹೆಲಿಕಾಪ್ಟರ್ ಮೂಲಕ ಶೃಂಗೇರಿ ಮಠಕ್ಕೆ ತೆರಳಿದ್ದಾರೆ. ಶೃಂಗೇರಿ ಶಾರದಾಂಬೆ ದೇವಿಯ ದರ್ಶನ ಪಡೆದಿರುವ ಗೌಡರ ಕುಟುಂಬ ಇಂದು ವಿಶ್ರಾಂತಿ ಪಡೆಯಲಿದೆ. ನಾಳೆಯಿಂದ ಮಠದಲ್ಲಿ ಅತಿರುದ್ರ ಮಹಾಯಾಗ ನಡೆಯಲಿದೆ. 150ಜನ ಪುರೋಹಿತರಿಂದ 12ದಿನಗಳ ಕಾಲ ನಡೆಯಲಿರುವ ಮಹಾಯಾಗ ಜನೇವರಿ 14ರಂದು ಪೂರ್ಣಾಹುತಿ ಆಗಲಿದೆ. ಕೊನೆಯ ದಿನ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯದ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಅವರೂ ಶೃಂಗೇರಿಗೆ ಭೇಟಿ ನೀಡಲಿದ್ದಾರೆ.
ಶೃಂಗೇರಿಯ ಯಾಗ ಮಂಟಪದಲ್ಲಿ ನಡೆಯಲಿರುವ ಅತಿರುದ್ರ ಮಹಾಯಾಗ ಗೌಡರ ಕುಟುಂಬದ ಶ್ರೇಯಸ್ಸಿಗಾಗಿ ಆಯೋಜಿಸಲಾಗಿದೆ. ಅಲ್ಲದೆ ಈ ಯಾಗದಿಂದ ದೇವಿ ಸಂತುಷ್ಠಳಾಗಿ ಬೇಡಿದ ವರ ಕರುಣಿಸುತ್ತಾಳೆ. ಬಾಹುಬಲ ನೀಡುತ್ತಾಳೆ ಆ ಮೂಲಕ ಗೌಡರ ಕುಟುಂಬ ಅಧಿಕಾರದ ಗದ್ದುಗೆ ಹಿಡಿಯುವ ಶಕ್ತಿ ಪಡೆಯಲಿದೆ ಎಂಬುದು ಗೌಡರ ಕುಟುಂಬದ ಅಭಿಮಾನಿಗಳ ಅಭಿಪ್ರಾಯವಾಗಿದೆ. ಎನಿವೇ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು ಚುನಾವಣೆ ಸಂದರ್ಭದಲ್ಲಿ ಮಠ, ಮಂದಿರಗಳ ಭೇಟಿ ಆರಂಭಿಸುವ ಮುನ್ನವೇ ದೇವೇಗೌಡರು ಮಹಾಯಾಗ ನಡೆಸುವ ಮೂಲಕ ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಶಾಕ್ ನೀಡಿದ್ದಂತೂ ಸುಳ್ಳಲ್ಲ.