ಪ್ರಮುಖ ಸುದ್ದಿ

ಕೃಷಿ ಚಟುವಟಿಕೆಗಳಿಗೆ ಯಾವುದೇ ನಿರ್ಬಂಧ ಇಲ್ಲ- ಬಿ.ಸಿ.ಪಾಟೀಲ್

ಕೃಷಿ ಉತ್ಪನ್ನ ಮಾರಾಟ, ಸಾಗಾಣಿಕೆಗೆ ಸಂಪೂರ್ಣ ಅನುಮತಿ

ಯಾದಗಿರಿಃ ಕೃಷಿ ಚಟುವಟಿಕೆಗಳಿಗೆ ಯಾವುದೇ ರೀತಿಯ ನಿರ್ಬಂಧ ಇರುವುದಿಲ್ಲ. ಕೃಷಿಗೆ ಪೂರಕವಾದ ಯಂತ್ರಗಳು, ಬೀಜ, ಗೊಬ್ಬರ, ಕ್ರಿಮಿನಾಶಕ ಮತ್ತು ಕೃಷಿ ಉತ್ಪನ್ನಗಳ ಮಾರಾಟ ಹಾಗೂ ಸಾಗಾಣಿಕೆಗೆ ಸಂಪೂರ್ಣ ಅನುಮತಿ ನೀಡಲಾಗಿದೆ ಎಂದು ಕೃಷಿ ಸಚಿವರಾದ ಬಿ.ಸಿ.ಪಾಟೀಲ್ ಅವರು ಸ್ಪಷ್ಟಪಡಿಸಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ರಾಜ್ಯದಲ್ಲಿ ಕೋವಿಡ್-19 ಆವರಿಸಿರುವ ಕಾರಣ ಕೃಷಿ ಚಟುವಟಿಕೆ ಸುಗಮವಾಗಿ ನಡೆಯಲು ಯಾದಗಿರಿ ಜಿಲ್ಲೆಯಲ್ಲಿ ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳನ್ನು ಪರಿಶೀಲಿಸಿ, ಅವರು ಮಾತನಾಡಿದರು.

ಜಿಲ್ಲೆಯ ರೈತರು ಪಕ್ಕದ ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಿಂದ ಕಟಾವು ಯಂತ್ರಗಳನ್ನು ತರಿಸಿಕೊಳ್ಳುತ್ತಾರೆ. ಎಂತಹ ಸಂದಿಗ್ಧ ಪರಿಸ್ಥಿತಿಯಿದ್ದರೂ ರೈತ ಸಮುದಾಯಕ್ಕೆ ತೊಂದರೆಯಾದಲ್ಲಿ ಇಡೀ ದೇಶ ಸಂಕಷ್ಟಕ್ಕೆ ಸಿಲುಕಿದಂತೆ. ಈ ಹಿನ್ನೆಲೆಯಲ್ಲಿ ಕೃಷಿ ಪರಿಕರಗಳನ್ನು ರಾಜ್ಯದ ಎಲ್ಲಾ ಚೆಕ್‍ಪೋಸ್ಟ್‍ಗಳಲ್ಲಿ ಮುಕ್ತವಾಗಿ ಸಾಗಾಣಿಕೆ ಮಾಡಲು ಅನುಮತಿ ನೀಡುವಂತೆ ಪೊಲೀಸ್ ಇಲಾಖೆಗೆ ಸ್ಪಷ್ಟ ನಿರ್ದೇಶನ ಕೊಡಲಾಗಿದೆ.

ಅಲ್ಲದೇ, ಕೃಷಿ ಉತ್ಪನ್ನಗಳ ಸುಗಮ ಮಾರಾಟ ಮತ್ತು ಸಾಗಾಣಿಕೆಗೆ ಅಂತರರಾಜ್ಯ ನಿರ್ಬಂಧಗಳನ್ನು ಕೂಡ ತೆಗೆದು ಹಾಕಲಾಗಿದೆ. ಆದಾಗ್ಯೂ ಕೆಲವು ಕಡೆಗಳಿಂದ ದೂರುಗಳು ಬರುತ್ತಿವೆ. ಆದ್ದರಿಂದ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕು. ತೊಂದರೆ ನೀಡುವಂತಹವರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಅವರು ಸೂಚಿಸಿದರು.
ಸಾಮಾಜಿಕ ಅಂತರ, ಮುಂಜಾಗ್ರತೆ ಅನಿವಾರ್ಯಃ ರಾಜ್ಯದ ರೈತರ ಹಿತ ಕಾಪಾಡುವುದು ಹಾಗೂ ಬೆಳೆಗಳಿಗೆ ಮುಕ್ತ ಮಾರುಕಟ್ಟೆ ಸೌಲಭ್ಯ ಒದಗಿಸುವುದು ಸರ್ಕಾರದ ಪ್ರಥಮ ಆದ್ಯತೆಯಾಗಿದೆ. ಸದ್ಯಕ್ಕೆ ಕೊರೊನಾ ನಿಯಂತ್ರಣ ಮತ್ತು ನಿವಾರಣೆಗೆ ಹೆಚ್ಚಿನ ಗಮನ ನೀಡುತ್ತಿದ್ದು, ಹಠಾತ್ತಾಗಿ ಬಂದಿರುವಂತಹ ಈ ಪರಿಸ್ಥಿತಿ ಇಡೀ ವಿಶ್ವವನ್ನು ತಲ್ಲಣಗೊಳಿಸಿದೆ.

ಕಾರಣ ಪ್ರತಿಯೊಬ್ಬರೂ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವುದು ಅನಿವಾರ್ಯವಾಗಿದೆ. ರೈತರು ಕೂಡ ಕೃಷಿ ಚಟುವಟಿಕೆ ಕೈಗೊಳ್ಳುವಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಅಲ್ಲದೇ, ಸರ್ಕಾರ ಸೂಚಿಸಿರುವ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು ಎಂದು ಅವರು ಈ ಸಂದರ್ಭದಲ್ಲಿ ಮನವಿ ಮಾಡಿದರು.

ವದಂತಿಗಳಿಗೆ ಕಿವಿಗೊಡಬೇಡಿಃ: ಕಲ್ಲಂಗಡಿ ಹಣ್ಣಿನ ಕುರಿತು ಮತ್ತು ಹಕ್ಕಿ ಜ್ವರದ ಅಪಪ್ರಚಾರದಿಂದಾಗಿ ಕಲ್ಲಂಗಡಿ ಹಣ್ಣು ಮತ್ತು ಕೋಳಿ ಸಾಕಾಣಿಕೆ ಮತ್ತು ಮಾರಾಟಕ್ಕೆ ಅಡ್ಡಿಯಾಗಿದೆ. ಜನರು ಇಂತಹ ವದಂತಿಗಳಿಗೆ ಕಿವಿಗೊಡದಂತೆ ಮನವಿ ಮಾಡಿದ ಸಚಿವರು, ಕಲ್ಲಂಗಡಿ ಸೇವನೆ ಆರೋಗ್ಯಕ್ಕೆ ಒಳ್ಳೆಯದು. ಅದರಂತೆ ಕೋಳಿ ಮಾಂಸ, ಮೀನು ಸೇವನೆಯಿಂದಲೂ ಯಾವುದೇ ಸಮಸ್ಯೆ ಇರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಮುಂಗಾರು ಬಿತ್ತನೆಗಾಗಿ ಬೀಜ ಮತ್ತು ರಸಗೊಬ್ಬರ ಪೂರೈಕೆಗೆ ಸರ್ಕಾರ ಸನ್ನದ್ಧವಾಗಿದೆ. ಜಿಲ್ಲೆಯ ರೈತರು ಆತಂಕ ಪಡುವ ಅಗತ್ಯವಿಲ್ಲ ಎಂದು ಭರವಸೆ ನೀಡಿದ ಸಚಿವರು, ಎಪಿಎಂಸಿ ಎಂದಿನಂತೆ ಕಾರ್ಯನಿರ್ವಹಿಸಬೇಕು. ಹಮಾಲರಿಗೆ ಪಾಸ್ ವಿತರಿಸಬೇಕು. ಇನ್ನು ತರಕಾರಿ, ಹಣ್ಣು- ಹಂಪಲುಗಳಿಗೆ ಮಾರುಕಟ್ಟೆ ಒದಗಿಸಲು ತೋಟಗಾರಿಕೆ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು. ರೈತರಿಂದ ದೂರುಗಳು ಬರುವ ಮುನ್ನವೇ ಅವರ ಸಮಸ್ಯೆಗಳನ್ನು ಅರಿತು ಅಧಿಕಾರಿಗಳು ಕೆಲಸ ಮಾಡಬೇಕು. ನಿರ್ಲಕ್ಷ್ಯ ವಹಿಸುವವರಿಗೆ ಶಿಕ್ಷೆ ತಪ್ಪಿದ್ದಲ್ಲ ಎಂದು ಅವರು ಎಚ್ಚರಿಕೆ ನೀಡಿದರು.

ಪ್ರಧಾನಮಂತ್ರಿಗಳು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ ನಿಧಿ ಯೋಜನೆಯಡಿ ರಾಜ್ಯಕ್ಕೆ 957 ಕೋಟಿ ರೂ. ಬಿಡುಗಡೆ ಮಾಡಿದ್ದಾರೆ. ಇದರಿಂದ 49 ಲಕ್ಷಕ್ಕೂ ಹೆಚ್ಚು ರೈತರಿಗೆ ಅನುಕೂಲವಾಗಿದೆ. ಅದರಂತೆ ಮುಖ್ಯಮಂತ್ರಿ ಕಿಸಾನ್ ಸಮ್ಮಾನ ನಿಧಿ ಯೋಜನೆಯಡಿ ರಾಜ್ಯ ಸರ್ಕಾರದಿಂದ 600 ಕೋಟಿ ರೂ. ಬಿಡುಗಡೆಯಾಗಿದ್ದು, ರೈತರ ಖಾತೆಗೆ 2000 ರೂ.ನಂತೆ ಜಮಾ ಆಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.

ರೈತ ಮುಖಂಡರಿಂದ ಜಿಲ್ಲೆಯ ರೈತರು ಎದುರಿಸುತ್ತಿರುವ ಸಮಸ್ಯೆಗಳನ್ನು ಆಲಿಸಿದ ಸಚಿವರು, ರೈತರು ಬೆಳೆದ ಪಪ್ಪಾಯ, ಕಲ್ಲಂಗಡಿ, ತರಕಾರಿಗಳು ಹಾಗೂ ಕೊಳೆತು ಹೋಗುವ ಪದಾರ್ಥಗಳು, ಕೃಷಿಗೆ ಪೂರಕವಾಗಿರುವ ಮತ್ತು ರೈತರು ಹಾಗೂ ಸಾರ್ವಜನಿಕರಿಗೆ ಬೇಕಿರುವ ಅತೀ ಅವಶ್ಯಕ ವಸ್ತುಗಳ ವಹಿವಾಟು ಮೇಲಿನ ಎಲ್ಲಾ ನಿರ್ಬಂಧಗಳನ್ನು ತೆಗೆದುಹಾಕಿ ಮುಕ್ತವಾಗಿ ಸಾಗಣೆ ಮತ್ತು ಮಾರಾಟ ಮಾಡಲು ಅನುಮತಿ ನೀಡಲಾಗಿದೆ.

ಇದರ ಸದುಪಯೋಗಪಡೆದು ತಮ್ಮ ಬೆಳೆಗಳನ್ನು ಮಾರಾಟ ಮತ್ತು ಸಾಗಣೆ ಮಾಡಬೇಕು. ತೊಂದರೆಗಳುಂಟಾದಲ್ಲಿ ಕೃಷಿ ಅಧಿಕಾರಿಗಳು ಅಥವಾ ಸಹಾಯವಾಣಿಗಳನ್ನು ಸಂಪರ್ಕ ಮಾಡಬಹುದು ಎಂದು ಸಲಹೆ ನೀಡಿದರು.

ನಕಲಿ ಬೀಜ ಮಾರಿದರೆ ಕಠಿಣ ಕ್ರಮಃ ಶಾಸಕರಾದ ನರಸಿಂಹನಾಯಕ (ರಾಜೂಗೌಡ) ಅವರು ಮಾತನಾಡಿ, ಸುರಪುರ ತಾಲ್ಲೂಕಿನಲ್ಲಿ ಮಂಗಳವಾರ ಸುರಿದ ಆಲಿಕಲ್ಲು ಮಳೆಯಿಂದಾಗಿ ಕಟಾವಿಗೆ ಬಂದ ಬೆಳೆಗಳು ಹಾಳಾಗಿವೆ.

ಸರ್ವೇ ನಡೆಸಬೇಕು. ಅಲ್ಲದೇ, ನಕಲಿ ಬೀಜ ಮಾರಾಟದ ಹಾವಳಿಯಿಂದ ರೈತರು ಕಂಗಾಲಾಗಿದ್ದಾರೆ ಎಂದು ಸಚಿವರ ಗಮನಕ್ಕೆ ತಂದರು.

ಇದಕ್ಕೆ ಪ್ರತಿಕ್ರಿಯಿಸಿದ ಕೃಷಿ ಸಚಿವರು, ನಕಲಿ ಬೀಜ ಮಾರಾಟ ಮಾಡುವುದು ಕೊಲೆ ಮಾಡುವುದಕ್ಕಿಂತಲೂ ದೊಡ್ಡ ಅಪರಾಧ. ಇದರ ತಡೆಗಾಗಿ ವಿಜಿಲೆನ್ಸ್ ಕಮೀಟಿ ಇದ್ದು, ಎಷ್ಟೇ ಪ್ರಭಾವ ವ್ಯಕ್ತಿಗಳಿದ್ದರೂ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಶಾಸಕರಾದ ವೆಂಕಟರೆಡ್ಡಿಗೌಡ ಮುದ್ನಾಳ ಅವರು ಜಿಲ್ಲೆಗೆ ರಸಗೊಬ್ಬರವನ್ನು ರೈಲ್ವೆ ಮೂಲಕ ಸಮರ್ಪಕವಾಗಿ ತರಿಸಿಕೊಳ್ಳಲು ರೈಲ್ವೆ ರೇಕ್ ಪಾಯಿಂಟ್ ಒದಗಿಸುವಂತೆ ಕೋರಿದರೆ, ಶಾಸಕರಾದ ಶರಣಬಸಪ್ಪಗೌಡ ದರ್ಶನಾಪೂರ ಅವರು ಜಿಲ್ಲೆಯ ಎಲ್ಲಾ ತಾಲ್ಲೂಕಿನ ರೈತರಿಗೂ ಸಬ್ಸಿಡಿ ದರದಲ್ಲಿ ಭತ್ತದ ಬೀಜ ವಿತರಿಸಬೇಕು ಎಂದು ಒತ್ತಾಯಿಸಿದರು. ವಿಧಾನ ಪರಿಷತ್ ಸದಸ್ಯರಾದ ಬಿ.ಜಿ.ಪಾಟೀಲ್ ಅವರು ಜಿಲ್ಲೆಗೆ ಹಾಪ್‍ಕಾಮ್ಸ್ ಮಳಿಗೆ ಮಂಜೂರು ಮಾಡಬೇಕು ಎಂದು ಮನವಿ ಮಾಡಿದರು.

ಜಿಲ್ಲಾಧಿಕಾರಿಗಳಾದ ಎಂ.ಕೂರ್ಮಾ ರಾವ್ ಅವರು ಕೋವಿಡ್-19 ತಡೆಗೆ ಜಿಲ್ಲಾಡಳಿತ ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರಿಸಿದರೆ, ಜಂಟಿ ಕೃಷಿ ನಿರ್ದೇಶಕರಾದ ದೇವಿಕಾ ಆರ್. ಅವರು ಕೃಷಿ ಇಲಾಖೆಯ ಸಿದ್ಧತೆಗಳ ಮಾಹಿತಿ ನೀಡಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ರಾಜಶೇಖರಗೌಡ ಪಾಟೀಲ್ ವಜ್ಜಲ್, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷರಾದ ಗಿರಿಜಮ್ಮ ಸದಾಶಿವಪ್ಪಗೌಡ ರೊಟ್ನಡಗಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಭಗವಾನ್ ಸೋನವಣೆ, ಅಪರ ಜಿಲ್ಲಾಧಿಕಾರಿ ಪ್ರಕಾಶ್ ಜಿ.ರಜಪೂತ, ಸಹಾಯಕ ಆಯುಕ್ತರಾದ ಶಂಕರಗೌಡ ಎಸ್.ಸೋಮನಾಳ ಹಾಗೂ ರೈತ ಮುಖಂಡರು ಹಾಜರಿದ್ದರು.

Related Articles

Leave a Reply

Your email address will not be published. Required fields are marked *

Back to top button