ಬಸವ ಜನ್ಮಭೂಮಿಯಿಂದ ಸ್ಪರ್ಧಿಸ್ತಾರಾ ಬಿ.ಎಸ್.ಯಡಿಯೂರಪ್ಪ!
ಬಿ ಎಸ್ ವೈ ಕಲಬುರ್ಗಿಯಲ್ಲಿ ಹೇಳಿದ್ದೇನು?
ಸಿಎಂ ಸಿದ್ಧರಾಮಯ್ಯ ಬಿಟ್ಟ ಬಾಣಕ್ಕೆ ಬೆಚ್ಚಿಬಿದ್ದಿತಾ ಬಿಜೆಪಿ ಎಂಬ ತಲೆಬರಹದಡಿ ‘ವಿನಯವಾಣಿ’ ಸಂಪಾದಕೀಯ ಬರೆದದ್ದು ನಿಮಗೆ ನೆನಪಿರಬಹುದು. ಅದೇ ಲೇಖನದಲ್ಲಿ ಬಿಜೆಪಿ ಯಾವ ಪ್ರತಿತಂತ್ರ ಹೂಡಲಿದೆ ಎಂಬುದನ್ನು ಸಹ ಸೂಕ್ಷ್ಮವಾಗಿ ಹೇಳಲಾಗಿತ್ತು.
ಅದಿರಲಿ, ಬಿಜೆಪಿ ಮತಬ್ಯಾಂಕ್ ಎಂದೇ ಭಾವಿಸಲಾಗಿರುವ ಲಿಂಗಾಯತ ಮತಬ್ಯಾಂಕ್ ಗೆ ‘ಕೈ’ ಹಾಕುವ ದೃಷ್ಟಿಯಿಂದ ಸಿಎಂ ಸಿದ್ಧರಾಮಯ್ಯ ಲಿಂಗಾಯತ ಸ್ವತಂತ್ರ ಧರ್ಮ ವಿಚಾರದ ಬಗ್ಗೆ ಮಾತನಾಡಿದ್ದಾರೆ. ವೀರಶೈವ, ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆ ನೀಡುವಂತೆ ಕೇಂದ್ರಕ್ಕೆ ಶಿಫಾರಸ್ಸು ಮಾಡುತ್ತೇನೆಂದಿದ್ದಾರೆ ಎಂದೇ ರಾಜಕೀಯ ಪಂಡಿತರು ವ್ಯಾಖ್ಯಾನಿಸಿದ್ದರು. ಅಂತೆಯೇ ವೀರಶೈವ, ಲಿಂಗಾಯತ ಧರ್ಮದ ಬಗ್ಗೆ ಚರ್ಚೆ ನಡೆದಿದ್ದು, ವಾದ- ವಿವಾದ ಸೃಷ್ಟಿಯಾಗಿತ್ತು.
ಪರಿಣಾಮ ಬಿಜೆಪಿ ಮತ್ತು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಇಕ್ಕಟ್ಟಿಗೆ ಸಿಲುಕಿದ್ದರು.
ಇದೀಗ ಬಿಜೆಪಿ ಹೈಕಮಾಂಡ್ ಹೊಸ ತಂತ್ರವೊಂದನ್ನು ಹೂಡಿದೆ. ಮಾಜಿ ಸಿಎಂ , ಬಿಜೆಪಿ ರಾಜ್ಯದ್ಯಕ್ಷರಾದ ಬಿ.ಎಸ್.ಯಡಿಯೂರಪ್ಪ ಅವರಿಗೆ ಉತ್ತರ ಕರ್ನಾಟಕದ ವಿಧಾನಸಭೆ ಕ್ಷೇತ್ರ ಒಂದರಿಂದ ಸ್ಪರ್ದಿಸುವಂತೆ ಸೂಚಿಸಿದೆ. ಆ ಮೂಲಕ ಉತ್ತರ ಕರ್ನಾಟಕದಲ್ಲಿ ಹೆಚ್ಚಾಗಿರುವ ಪ್ರಭಲ ಲಿಂಗಾಯತ ಸಮುದಾಯದ ಮತಬೇಟೆಗೆ ಬಿಜೆಪಿ ಗಾಳ ಹಾಕಲು ಮುಂದಾಗಿದೆ.
ಮೊದಲಿಗೆ ಬಿಎಸ್ ವೈ ಬಾಗಲಕೋಟೆ ಜಿಲ್ಲೆಯಿಂದ ಸ್ಪರ್ಧಿಸುತ್ತಾರೆಂಬ ಸುದ್ದಿ ಹಬ್ಬಿತ್ತು. ಮಾಜಿ ಸಚಿವ ಮುರುಗೇಶ ನಿರಾಣಿ ಸೇರಿದಂತೆ ಇತರೆ ನಾಯಕರು ಬಿಎಸ್ ವೈಗೆ ಆಹ್ವಾನ ನೀಡಿದ್ದರು. ಆದರೆ, ಇಂದು ಕಲಬುರ್ಗಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಬಿಎಸ್ ವೈ ಉತ್ತರ ಕರ್ನಾಟಕದಿಂದ ಸ್ಪರ್ದಿಸುವಂತೆ ಹೈಕಮಾಂಡ್ ಸೂಚಿಸಿದೆ. ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಯಿಂದ ಸ್ಪರ್ಧಿಸುವಂತೆ ಆಹ್ವಾನ ಬಂದಿದೆ ಎಂದಿದ್ದಾರೆ.
ಯಡಿಯೂರಪ್ಪ ಅವರ ಇಂದಿನ ಹೇಳಿಕೆ ಗಮನಿಸಿದರೆ ವಿಜಯಪುರದಿಂದಲೇ ಸ್ಪರ್ಧಿಸುವುದು ಗ್ಯಾರಂಟಿ ಅನ್ನಿಸುತ್ತದೆ. ಅದರಲ್ಲೂ ವಿಶ್ವಗುರು ಬಸವಣ್ಣನವರ ಜನ್ಮ ಭೂಮಿ ಬಸವನ ಬಾಗೇವಾಡಿ ಕ್ಷೇತ್ರದಿಂದಲೇ ಬಿಎಸ್ ವೈ ಸ್ಪರ್ಧೆಗಿಳಿಯಬಹುದು. ಆ ಮೂಲಕ ಲಿಂಗಾಯತ ಸಮುದಾಯದ ಮತಗಳನ್ನು ಭಾವನಾತ್ಮಕವಾಗಿ ಬಾಚುವ ಪ್ರಯತ್ನ ಬಿಜೆಪಿ ಮಾಡಲಿದೆ ಎಂಬ ಸುಳಿವು ಸಿಕ್ಕಿದೆ.
-ಮಲ್ಲಿಕಾರ್ಜುನ ಮುದನೂರ್
Good story
Appa ji yava kshetra dinda nitharu gelluthare jai bsy ……