ಬಂದ ಪುಟ್ಟ ಹೋದ ಪುಟ್ಟ ಎಂಬಂತಾಗಿದೆ ಸಿಎಂ ಸಂಚಾರ
ಯಕ್ಷಿಂತಿ ಗ್ರಾಮಕ್ಕೆ ಸಿಎಂ ಭೇಟಿ ನಾಮ್ಕೆವಾಸ್ತೆ ರೈತರ ಆರೋಪ
ಯಾದಗಿರಿ,ಶಹಾಪುರಃ ಸಿಎಂ ಯಡಿಯೂರಪ್ಪನವರು ನೆರೆ ಹಾವಳಿಯಲ್ಲಿ ನೊಂದ ಸಂತ್ರಸ್ತರ ಅಳಲು ಆಲಿಸಿ ಸೂಕ್ತ ಸ್ಪಂಧನೆ ನೀಡಲು ಬಂದಿದ್ದಾರೆಯೋ ಅಥವಾ ಕಾಟಚಾರಕ್ಕೆ ಹೋಗಿ ಬಂದರಾಯ್ತು ಎಂಬ ಉದ್ದೇಶಕ್ಕೆ ಬಂದಿದ್ದಾರೋ.! ಹೀಗೆ ಬಂದ ಪುಟ್ಟ ಹೋದ ಪುಟ್ಟ ಎನ್ನುವಂತೆ ಸಿಎಂ ಯಡಿಯೂರಪ್ಪ ಬಂದ್ರೂ ಹೋದ್ರೂ ಎಂದು ಇಲ್ಲಿನ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶಗೌಡ ಸುಬೇದಾರ ಟೀಕಿಸಿದ್ದಾರೆ.
ತಾಲೂಕಿನ ಕೊಳ್ಳೂರ(ಎಂ) ಮತ್ತು ಯಕ್ಷಿಂತಿ ಗ್ರಾಮ ಸೇರಿದಂತೆ ಕೃಷ್ಣಾ ತೀರದ ಹತ್ತಾರು ಗ್ರಾಮಗಳು ನೆರೆ ಹಾವಳಿಯಿಂದ ತತ್ತರಿಸಿ ಹೋಗಿದ್ದಾರೆ. ಆದರೆ ಕೊಳ್ಳೂರ ಗ್ರಾಮದ ಕೃಷ್ಣಾ ತೀರದ ಹತ್ತಿರ ಒಂದು ನಿಮಿಷ ನಿಂತು ರೈತರ ಜಮೀನು ವೀಕ್ಷಿಸಿದ ಸಿಎಂ ಅಲ್ಲಿಂದ ಸೀದಾ ಯಕ್ಷಿಂತಿ ಗ್ರಾಮಕ್ಕೆ ಆಗಮಿಸಿದ್ದಾರೆ.
ಇಲ್ಲೂ ಸಿಎಂ ಯಡಿಯೂರಪ್ಪ ನೆರೆ ಸಂತ್ರಸ್ತರ ಸಮಸ್ಯೆಗಳನ್ನು ಆಲಿಸದೆ, ಕೇವಲ ಮನವಿ ಪತ್ರ ಸ್ವೀಕರಿಸಿ ಒಂದೂ ಮಾತನಾಡದೆ ತೆರಳಿರುವದು ನೋಡಿದರೆ ಇವರೇನು ಸಮಸ್ಯೆಗಳಿಗೆ ಸ್ಪಂಧಿಸಿ ಪರಿಹಾರ ಕಲ್ಪಿಸಲು ಬಂದಿಲ್ಲ ಕಾಟಚಾರಕ್ಕೆ ಸಂಚಾರ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಳೆದ 60 ದಿನದಿಂದ ಈ ಭಾಗದಲ್ಲಿ ನೆರೆ ಹಾವಳಿಗೆ ರೈತಾಪಿ ಜನ ಪರಿತಪಿಸುವಂತಾಗಿದೆ. ಮನೆ ಮಠ ಕಳೆದುಕೊಂಡಿದ್ದು, ಅಲ್ಲದೆ ಜಮೀನುಗಳು ನೆರೆ ಹಾವಳಿಗೆ ಪುನಶ್ಚೇತನಗೊಳ್ಳಲು ಕಷ್ಟದ ಕೆಲಸವಾಗಿದೆ. ಜಮೀನಿನಲ್ಲಿದ್ದ ಫಲವತ್ತಾದ ಮಣ್ಣು ಹರಿದುಕೊಂಡು ಹೋಗಿದ್ದು, ಹಲವಡೆ ದೊಡ್ಡ ದೊಡ್ಡ ಕ್ವಾರಿಗಳು ಬಿದ್ದಿವೆ.
ನೆಲೆಸಲು ಮನೆ ಇಲ್ಲ ದುಡಿದು ತಿನ್ನಲು ಇದ್ದ ಜಮೀನು ಸಂಪೂರ್ಣ ಬೆಳೆ ಹಾನಿ ಜೊತೆ ಫಲವತ್ತಾದ ಮಣ್ಣು ಹಾಳಾಗಿ ಹೋಗಿದೆ. ಇಂತಹ ವಿಷಮ ಸ್ಥಿತಿಯಲ್ಲ ಈ ಭಾಗದ ಜನರಿದ್ದು, ಸಿಎಂ ಯಡಿಯೂರಪ್ಪ ಈ ಕುರಿತು ಸಂತ್ರಸ್ತರ ಅಳಲು ಆಲಿಸದೆ ಹಾಗೇ ತೆರಳಿದ್ದು, ಮುಂಬರುವ ದಿನಗಳಲ್ಲಿ ಚನ್ನಾಗಿ ಪಾಠ ಕಲಿಸಲಾಗುವದು ಎಂದು ರೈತರು ಎಚ್ಚರಿಸಿದ್ದಾರೆ.
ಯಡಿಯೂರಪ್ಪನವರು ಕೂಡಲೇ ನೊಂದ ಸಂತ್ರಸ್ತರಿಗೆ ಪರಿಹಾರ ಕಲ್ಪಿಸಬೇಕು. ಸಮಸ್ಯೆಗೆ ಸ್ಪಂಧಿಸಲು ನೊಂದವರನ್ನು ಸಮಧಾನ ಪಡಿಸುವ ವ್ಯವಧಾನವು ಇಲ್ಲವೆಂದ ಮೇಲೆ ಅಧಿಕಾರ ಏಕೆ ಬೇಕು ತಕ್ಷಣ ರಾಜೀನಾಮೆ ನೀಡಬೇಕೆಂದು ಸುಬೇದಾರ ಆಗ್ರಹಿಸಿದ್ದಾರೆ. ಈ ಸಂದರ್ಭದಲ್ಲಿ ಭೀಮಾಶಂಕರ ಪಡಶೆಟ್ಟಿ. ಶಿವರಾಮ ಚವ್ಹಾಣ, ಶಿವರಡ್ಡಿ ಮಲ್ಲೇದ್, ಸಂಗಣ್ಣ ಮುಡಬೂಳ ಸೇರಿದಂತೆ ಇತರರು ಇದ್ದರು.
ಸಂತ್ರಸ್ತರ ಅಳಲು ಆಲಿಸದ ಸಿಎಂ-ರೈತರ ಪ್ರತಿಭಟನೆ
ಯಕ್ಷಿಂತಿ ಗ್ರಾಮಕ್ಕೆ ಆಗಮಿಸಿದ್ದ ಸಿಎಂ ಯಡಿಯೂರಪ್ಪ ಸಂತ್ರಸ್ತರ ಅಳಲು ಆಲಿಸದೆ ಅವರ ಜೊತೆ ಮಾತನಾಡದೆ ಹಾಗೇ ವಾಪಸ್ ಮರಳಿದ್ದಾರೆ. ಕೇಲವ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ್ದಾರೆ ಎಂದು ಜಮಾಯಿಸಿದ್ದ ರೈತರು ಸಿಎಂ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.
ಸಮರ್ಪಕವಾಗಿ ಕೆಲಸ ಮಾಡುವಂತೆ ಅಧಿಕಾರಿಗಳಿಗೆ ಸಿಎಂ ಸೂಚನೆ
ಸಮರ್ಪಕವಾಗಿ ನೆರೆ ಪರಿಹಾರ ವಿತರಣೆಗೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದೇನೆ. ರಾಜ್ಯ ಸರ್ಕಾರದಿಂದ ಈಗಾಗಲೇ 3800 ಕೋಟಿ ಅನುದಾನ ಬಿಡುಗಡೆಗೊಳಿಸಿದ್ದೇನೆ. ಈ ಭಾಗದ ನೆರೆ ಸಂತ್ರಸ್ಥರಿಗೆ ಪರಿಹಾರ ವಿತರಣೆಗೆ ಸೂಚಿಸಿದ್ದೇನೆ ಎಂದು ಸಿಎಂ ಯಡಿಯೂರಪ್ಪ ತಿಳಿಸಿದರು.
ಅಧಿಕಾರಿಗಳು ಕೆಲಸ ಮಾಡದಿದ್ದಲ್ಲಿ ಅವರ ವಿರುದ್ಧ ಶೀಸ್ತು ಕ್ರಮಕೈಗೊಳ್ಳಲಾಗುವುದು. ಸಂಬಂಧಿಸಿದ ಅಧಿಕಾರಿಗಳ ಜೊತೆ ಚರ್ಚೆ ನಡೆಸಿರುವೆ. ಸಂತ್ರಸ್ತರ ಬಗ್ಗೆ ಸಮಗ್ರ ವರದಿ ತಯಾರಿಸಿದ್ದು, ನೊಂದ ಕುಟುಂಬಗಳಿಗೆ ಸಮರ್ಪಕ ಪರಿಹಾರ ವಿತರಿಸಲಾಗುವದು. ಮನೆ ಕಳೆದುಕೊಂಡವರಿಗೆ ವಸತಿ ಸೌಕರ್ಯಕ್ಕಾಗಿ ಅನುದಾನ ನೀಡಲು ಸೂಚಿಸಿದ್ದೇನೆ ಎಂದು ತಿಳಿಸಿದರು.