ಅಂಕಣ

ಸಾಮಾಜಿಕ ಸಮಾನತೆಗಾಗಿ ಸೆಣಸಿ ಶಿಲುಬೆಗೇರಿದ ಮಹಾಮಾನವ ‘ಯೇಸು’

ಪ್ರೀತಿಯೇ ಯೇಸುವಿನ ಬೋಧನೆಯ ಜೀವಾಳ

– ರಾಘವೇಂದ್ರ ಹಾರಣಗೇರಾ
ಯೇಸುವಿನ ಬೋಧನೆಗಳನ್ನು, ಚಿಂತನೆಗಳನ್ನು ಆತನು ಜೀವಿಸಿದ್ದ ಕಾಲದ ಸಮಾಜದ ಸ್ಥಿತಿಯ ಹಿನ್ನೆಲೆಯಲ್ಲಿ ಅವಲೋಕಿಸಬೇಕು. ಅಂದಿನ ಯೆಹೂದ್ಯ ಸಮಾಜ ಬಡವರು, ದೀನದಲಿತರು ಮತ್ತು ಶ್ರೀಮಂತರು ಹಾಗೂ ಉನ್ನತ್ತ ವರ್ಗದವರೆಂಬ ವರ್ಗತಾರತಮ್ಯದಿಂದ ಕೂಡಿತ್ತು. ಪ್ಯಾಲೆಸ್ಟೈನ್ ದೇಶ ರೋಮ್ ಚಕ್ರಾಧಿಪತ್ಯ, ಧರ್ಮ ಚಕ್ರಾಧಿಪತ್ಯಗಳ ಬಿಗಿಯಾದ ನಿಯಮ ನಿರ್ಬಂಧಗಳಲ್ಲಿ ಸಿಕ್ಕಿಕೊಂಡು ಇಡೀ ದೇಶವೇ ತತ್ತರಿಸಿ ಹೋಗಿತ್ತು.

ದಯೆ, ಕರುಣೆ, ಸತ್ಯ, ನೀತಿ ಇಂತಹ ಮೌಲ್ಯಗಳು ಮಾಯಾವಾಗಿ ಅಜ್ಞಾನ, ಸ್ವಾರ್ಥ, ಅಧರ್ಮಗಳೇ ಹೆಚ್ಚಾಗಿದ್ದವು. ಅಲ್ಲಿನ ದೇವಾಲಯಗಳೆಲ್ಲಾ ವ್ಯಾಪಾರ ಕೇಂದ್ರಗಳಾಗಿ ಪರಿಣಮಿಸಿದ್ದವು. ಪುರೋಹಿತರ ದಬ್ಬಾಳಿಕೆ ಹೆಚ್ಚಾಗಿದ್ದವು. ವ್ಯರ್ಥವಾದ ಅರ್ಚನೆಗಳು ತಾಂಡವಾಡುತ್ತಿದ್ದವು. ಇದರಿಂದ ಸಾಮಾನ್ಯ ಜನತೆ ಅನೇಕ ಬಗೆಯ ಕಷ್ಟಗಳನ್ನು ಎದುರಿಸಬೇಕಾಗಿತ್ತು.

ಪುರೋಹಿತರು, ವಿದ್ವಾಂಸರು, ನ್ಯಾಯವಾದಿಗಳು ತಮ್ಮ ಆಚಾರ ಶುದ್ದಿಯ ದೆಸೆಯಿಂದ ಧರ್ಮಶಾಸ್ತ್ರವನ್ನು ಬಹಿರಂಗವಾಗಿ ಹಾಗೂ ಘೋಸಿತವಾಗಿ ಪರಿಪಾಲಿಸುವವರು ತಾವು ಎಂಬುದನ್ನು ತೊರ್ಪಡಿಸಿಕೊಳ್ಳುತ್ತ ಪ್ರತಿಷ್ಠಿತರೆನಿಸಿಕೊಂಡಿದ್ದರು. ಇಂತಹ ಸಮಾಜದಲ್ಲಿ ಜನಸಾಮಾನ್ಯರಿಗೆ, ಬಡವರಿಗೆ, ಕುಷ್ಟ ರೋಗಿಗಳಿಗೆ, ಅಂಗವಿಕಲರಿಗೆ, ವಿಧವೆಯರಿಗೆ, ಕುಲಕಸುಬುದಾರರಿಗೆ, ದೀನದಲತರರಿಗೆ ಯಾವುದೇ ರೀತಿಯಾದ ಉತ್ತಮ ಸ್ಥಾನಮಾನಗಳು ನೀಡಿರಲಿಲ್ಲ.

ಇವರನ್ನು ಬಹಳಷ್ಟು ಹೀನಾಯವಾಗಿ ಕಾಣಲಾಗುತ್ತಿತ್ತು ಇವರ ಅವಶ್ಯಕತೆ ಮತ್ತು ಅಬಿಪ್ರಾಯಗಳಿಗೆ ಮನ್ನಣೆಗಳು ಇರಲಿಲ್ಲ ಸಾಮಾಜಿಕ, ಧಾರ್ಮಿಕ, ಆರ್ಥಿಕ ಸ್ವತಂತ್ರ ಹಕ್ಕುಗಳಿಂದ ವಂಚಿತರಾಗಿದ್ದರು. ಇಂತಹ ವ್ಯವಸ್ಥೆಯನ್ನು ಕುರಿತು ಯೇಸು ಬದುಕುವ ಹಲವಾರು ಹಕ್ಕುಗಳಿಂದ ವಂಚಿತರಾಗಿದ್ದ ಈ ಎಲ್ಲಾ ವರ್ಗದವರನ್ನು ಸಮಾನವಾಗಿ ಬದುಕುವ ಅವಕಾಶಗಳನ್ನು ಕಲ್ಪಿಸಿಕೊಡಲು ಬಹಳಷ್ಟು ಶ್ರಮಿಸಿದನು.

ಈ ಮೂಲಕ ಶಾಂತಿ ಸೌಹಾರ್ದಗಳಿಗೆ ಒಂದು ಪ್ರಬಲವಾದ ಅಡ್ಡಿಯಾಗಿರುವ ವರ್ಗತಾರತಮ್ಯವನ್ನು ಯೇಸು ಖಂಡತುಂಡವಾಗಿ ವಿರೋಧಿಸಿದನು. ಅಲ್ಲದೇ ಹಲವಾರು ವರ್ಗತಾರತಮ್ಯಗಳಿಗೆ ಅಂದಿನ ಯೆಹೂದ್ಯ ಸಮಾಜ ಹಚ್ಚಿದ್ದ ಧಾರ್ಮಿಕತೆಯ ಬಣ್ಣವನ್ನು ತೊಡೆದು ಹಾಕಿದನು. ಅನೇಕ ಹಿಂದುಳಿದ, ದಲಿತ, ಬಡವರು ಅವರ ಪೂರ್ವಜರ ಪಾಪದ ಪರಿಣಾಮವೇ ಈ ವರ್ಗದಲ್ಲಿ ಜನಿಸಿದ್ದಾರೆ. ಇವರಿಗೆ ಸ್ವರ್ಗದ ಬಾಗ್ಯ ಸಾದ್ಯವಿಲ್ಲವೆಂದು ಸೈದ್ಧಾಂತೀಕರಿಸಿ, ಅದನ್ನೇ ಪ್ರಚಾರ ಮಾಡುತ್ತಿದ್ದ ಸ್ವಯಂ ಸಂಭಾವಿತ್ತರ ಈ ಟೊಳ್ಳು ವಾದದಲ್ಲಿ ಹಾಗೂ ಆಚರಣೆಯಲ್ಲಿ ತಥ್ಯವಿಲ್ಲವೆಂದು ತನ್ನ ಸ್ಪಷ್ಟವಾದ ಬೋಧನೆಯಿಂದಲೂ, ಕಾರ್ಯಗಳಿಂದಲೂ ಯೇಸು ತೋರಿಸಿ ಕೊಟ್ಟನು.

ಪ್ರೀತಿಯೆ ಯೇಸುವಿನ ಬೋಧನೆಯ ಜೀವಾಳವಾಗಿದೆ. ಯಹೂದಿ ಬಡವರನ್ನು, ದಲಿತರನ್ನು, ಶೋಷಿತರನ್ನು ಯೇಸು ಅಪಾರವಾಗಿ ಪ್ರೀತಿಸುತ್ತಿದ್ದನು. ಆದರಿಂದ ಎಲ್ಲರ ಸಮಾನ ಬದುಕಿಗಾಗಿ ಪ್ರಬಲರಿಂದ ಶಿಲುಬೆಗೇರಿದ ಮಹಾಮಾನವನಾಗಿ ಯೇಸು ಕಾಣುತ್ತಾನೆ. ಯೇಸು ಬರೀ ಉಪದೇಶ ಮಾಡುತ್ತಿರಲಿಲ್ಲ ನುಡಿದಂತೆ ನಡೆದು ತೋರಿಸುತ್ತಿದ್ದನು. ಇದರಿಂದ ಸಾಮಾನ್ಯ ಜನರು ಹೆಚ್ಚು ಪ್ರಬಾವಿತರಾದರು ಇವರ ವಿಚಾರಗಳು ಕೇಲವು ಸಮಾಜದ ಪ್ರತಿಷ್ಠಿತ ಜನರಿಗೆ, ಸಂಪ್ರದಾಯ ಶರಣರಿಗೆ ಹಿಡಿಸುತ್ತಿರಲಿಲ್ಲ. ಯೇಸು ಕ್ರಿಸ್ತನು ಸಾರಿದ “ ದೇವರ ರಾಜ್ಯವು” ಮಾನವ ಜನಾಂಗಕ್ಕಾಗಿರುವ ಆದರ್ಶ ರಾಜ್ಯವಾಗಿದ್ದು ಅದರಲ್ಲಿ ಸದಾ ಸ್ನೇಹ, ಪ್ರೀತಿ, ಸೌಹಾರ್ದತೆ, ಸಹಕಾರ, ಶಾಂತಿ, ನೆಮ್ಮದಿಗಳು ಮುಂತಾದವುಗಳು ಕಂಡುಬರುತ್ತವೆ. ತನ್ನ ಹನ್ನೇರಡು ಜನ ಶಿಷ್ಯರ ಬಳಗದೊಂದಿಗೆ ಅನೇಕ ವಿಧದಲ್ಲಿ ಉಪದೇಶ ಮಾಡಿದನು. ಯೇಸುವಿನ ಉಪದೇಶಗಳಲ್ಲಿ ಸರ್ವಶ್ರೇಷ್ಠವೂ, ಲೋಕ ಪೂಜ್ಯವೂ ಆದ ಗಿರಿ ಉಪದೇಶವು ಅತ್ಯಂತ ಮಹತ್ವದ್ದಾಗಿದೆ.

ಯೇಸುವಿನ ಪ್ರೀತಿ, ವಾತ್ಸಲ್ಯ, ಕರುಣೆ, ಸೇವೆ, ನಿಷ್ಟೆಗಳು ಇಡೀ ವಿಶ್ವಕ್ಕೆ ಆದರ್ಶವಾಗಿವೆ ಸತ್ಯಕ್ಕಾಗಿ ದಿವ್ಯ ಸಂದೇಶ ನೀಡಲು ಸದಾ ಸರ್ವರೀತಿಯಿಂದಲೂ ಪ್ರಯತ್ನಿಸಿ ಜಯಶೀಲನಾದ ಯೇಸುವನ್ನು ಕಂಡು ಅನೇಕ ವಿರೋಧಿಗಳು ಅವನನ್ನು ಬಂದಿಸಿ, ಧರ್ಮಗುರುವಿನ ಬಳಿಗೆ ಒಯ್ದು ಧರ್ಮದ್ರೋಹ, ರಾಜ್ಯದ್ರೋಹಗಳ ಆರೋಪ ಹೊರಿಸಿದರು. ಈ ಆರೋಪವನ್ನು ಹೊತ್ತು ಯೇಸು ಮರಣದಂಡನೆಗೆ ಗುರಿಯಾಗಬೇಕಾಯಿತು.

ಆದರೆ ವರ್ಗತಾರತಮ್ಯವನ್ನು ದಿಟ್ಟವಾಗಿ ವಿರೋದಿಸಿ ಸಾಮಾಜಿಕ ಸಮಾನತೆಗೆ ಮತ್ತು ಆ ಮೂಲಕ ಶಾಂತಿ ಸೌಹಾರ್ಧಗಳಿಗೆ ಯೇಸು ದಾರಿ ಮಾಡಿಕೊಟ್ಟನೆಂಬುದು ಚಾರಿತ್ರಿಕ ಸತ್ಯವಾಗಿ ಉಳಿಯಿತು. ಪ್ರತಿವರ್ಷ ಕ್ರಿಸ್ತ ಜಯಂತಿ ಆಚರಣೆ ಜಗತ್ತಿನಾದ್ಯಂತ ವೈವಿದ್ಯತೆಯಿಂದ ಕೂಡಿರುತ್ತದೆ. ಯೇಸು ಸಮಾಧಾನದ ಪ್ರಭು, ಪ್ರೀತಿ, ಸಹಕಾರಗಳ ಸಾಕಾರ ಮೂರ್ತಿ ಎಂಬುದನ್ನು ಕ್ರಿಸ್ತ ಜಯಂತಿ ಸಾರುತ್ತದೆ. ಆತನು ಬಡವ ಬಲ್ಲಿದರೆನ್ನದೆ ಎಲ್ಲರಿಗಾಗಿ ಉದಯಿಸಿದ ದೇವಕುಮಾರನೆಂದು ಕ್ರೈಸ್ತ ಬಾಂದವರು ಆರಾಧಿಸುತ್ತಾರೆ. ಸರ್ವರಿಗೂ ಯೇಸು ಕ್ರಿಸ್ತ ಜಯಂತಿಯ ಶುಭಾಶಯಗಳು.

Related Articles

Leave a Reply

Your email address will not be published. Required fields are marked *

Back to top button