ಅತೃಪ್ತ ಶಾಸಕರ ಝಿರೋ ಟ್ರಾಫಿಕ್ ಕಥೆ ಉಲ್ಟಾ!
ಬೆಂಗಳೂರು : ಅತೃಪ್ತ ಶಾಸಕರು ಮುಂಬೈಯಿಂದ ಬೆಂಗಳೂರಿಗೆ ಬಂದಿರುವ ಸಂದರ್ಭದಲ್ಲಿ ರಾಜೀನಾಮೆ ನೀಡಲು ಸ್ಪೀಕರ್ ಕಚೇರಿಗೆ ಆಗಮಿಸಲು ಝಿರೋ ಟ್ರಾಫಿಕ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂಬ ವಿಚಾರ ಸದನದಲ್ಲಿ ಬಿಸಿಬಿಸಿ ಚರ್ಚೆಗೆ ಗ್ರಾಸವಾಗಿತ್ತು. ಝಿರೋ ಟ್ರಾಫಿಕ್ ವ್ಯವಸ್ಥೆ ಕಲ್ಪಿಸಿಲ್ಲ ಎಂದು ಸಮಜಾಯಿಷಿ ನೀಡಿದ ಗೃಹ ಸಚಿವ ಎಂ.ಬಿ.ಪಾಟೀಲ್ ವಿರುದ್ಧ ಖುದ್ದು ಸ್ಪೀಕರ್ ರಮೇಶಕುಮಾರ್ ಹಾಗೂ ಮಾಜಿ ಸಚಿವ ಹೆಚ್.ಕೆ.ಪಾಟೀಲ್ ಚಾಟಿ ಬೀಸಿದ್ದರು.
ವಿರಾಮದ ವೇಳೆ ಅಧಿಕಾರಿಗಳ ಜತೆ ಸ್ಪೀಕರ್ ಭೇಟಿಯಾದ ಗೃಹ ಸಚಿವ ಎಂ.ಬಿ.ಪಾಟೀಲ್ ಈ ಬಗ್ಗೆ ದಾಖಲೆಗಳ ಸಮೇತ ಸಮಜಾಯಿಷಿ ನೀಡಿದ್ದಾರೆ. ಬಳಿಕ ಈ ಬಗ್ಗೆ ಸದನದಲ್ಲಿ ಪ್ರತಿಕ್ರಿಯಿಸಿದ ಸ್ಪೀಕರ್ ರಮೇಶ್ ಕುಮಾರ್ ಅವರು ಸುಪ್ರೀಂಕೋರ್ಟ್ ಸೂಚನೆ ಮೇರೆಗೆ ಪೊಲೀಸರು ಅತೃಪ್ತ ಶಾಸಕರಿಗೆ ಭದ್ರತೆ ಕಲ್ಪಿಸಿದ್ದಾರೆ. ಆದ್ರೆ, ಝಿರೋ ಟ್ರಾಫಿಕ್ ವ್ಯವಸ್ಥೆ ನೀಡಿಲ್ಲ. ನಾಲ್ಕು ಕಡೆ ಟ್ರಾಫಿಕ್ ಸಿಗ್ನಲ್ ನಲ್ಲಿ ನಿಂತು ಅತೃಪ್ತ ಶಾಸಕರ ವಾಹನ ಬಂದಿದೆ. ಈ ಬಗ್ಗೆ ದಾಖಲೆಗಳ ಸಮೇತ ಗೃಹ ಸಚಿವರು ಸ್ಪಷ್ಟಪಡಿಸಿದ್ದಾರೆಂದಿದ್ದಾರೆ.