ಕಾಂಗ್ರೆಸ್ನಲ್ಲಿ ನಿಷ್ಠಾವಂತ ಕಾರ್ಯಕರ್ತರಿಗೆ ಗೌರವವಿಲ್ಲ: ಜಿ.ಪಂ. ನೂತನ ಅಧ್ಯಕ್ಷ ಯಡಿಯಾಪುರ
ಯಾದಗಿರಿ: ಕಾಂಗ್ರೆಸ್ ಪಕ್ಷದಲ್ಲಿ ದಶಕಗಳ ಕಾಲ ನಿಷ್ಠಾವಂತರಾಗಿ ಕೆಲಸ ಮಾಡಿರುವ ಕಾರ್ಯಕರ್ತರಿಗೆ ಗೌರವ ಇಲ್ಲ ಎಂದು ಜಿ.ಪಂ. ನೂತನ ಅಧ್ಯಕ್ಷ ಬಸಣ್ಣಗೌಡ ಯಡಿಯಾಪುರ ಹೇಳಿದರು.
ಜಿ.ಪಂ. ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಕಳೆದ 30ವರ್ಷಗಳಿಂದ ಸುರಪುರ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಪಕ್ಷ ಸಂಘಟನೆ ಮಾಡಿದ್ದೇನೆ. ಕಳೆದ ಜಿ.ಪಂ. ಚುನಾವಣೆಯಲ್ಲಿ ಸ್ಪರ್ಧಿಸುವ ಮೂಲಕ ಸದಸ್ಯನಾಗಿ ಆಯ್ಕೆಯಾದೆ.
ಆದರೆ ಜಿಪಂ ಮೊದಲ ಅವಧಿಗೆ ಅಧ್ಯಕ್ಷನಾಗಬೇಕಿದ್ದ ನನಗೆ, ಪಕ್ಷದ ನಾಯಕರಾದ ಶಹಾಪುರ ಶಾಸಕ ಶರಣಬಸಪ್ಪ ದರ್ಶನಾಪುರ, ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಸಮರ್ಪಕವಾಗಿ ಬೆಂಬಲ ನೀಡಲಿಲ್ಲ. ಆದರೂ ನಾನು ಅವರ ನಿದೇರ್ಶನದಂತೆ ಪಕ್ಷದ ಅಭ್ಯರ್ಥಿ ಗೆಲುವಿಗೆ ಮತ ಚಲಾಯಿಸಿದೆ.
ಜಿ.ಪಂ. ನ 2ನೇ ಅವಧಿಗೆ ಅಧ್ಯಕ್ಷರನ್ನಾಗಿ ಮಾಡುವ ವಿಶ್ವಾಸವಿತ್ತು. ಆದರೆ ಕೊನೆಗಳಿಗೆಯಲ್ಲಿ ನನಗೆ ಅವಕಾಶ ಕಲ್ಪಿಸಲಿಲ್ಲ. ಇನ್ನು ಉಳಿದ ಅವಧಿಗೆ ನಡೆಯುವ ಚುನಾವಣೆಯಲ್ಲಿ ಉಭಯ ನಾಯಕರನ್ನು ನಾನು ಹಲವಾರು ಭೇಟಿಯಾಗಿ ಅಧ್ಯಕ್ಷರನ್ನಾಗಿ ಮಾಡಿ ಎಂದು ಮನವಿ ಮಾಡಿದೆ. ಆದಾಗ್ಯು ಕ್ಯಾರೆ ಅನ್ನದೆ ಅವಕಾಶ ಕಲ್ಪಿಸುವ ನಂಬಿಕೆ ತೋರಲಿಲ್ಲ.
ಪರಿಣಾಮ ನಾನು ಕಾಂಗ್ರೆಸ್ನ ಇನ್ನೋರ್ವ ಗೋಗಿ ಜಿ.ಪಂ. ಸದಸ್ಯ ಕಿಶನ್ ರಾಠೋಡ ಜೊತೆಗೂಡಿ ಸುರಪುರ ಶಾಸಕ ರಾಜುಗೌಡ ಹಾಗೂ ಯಾದಗಿರಿ ಶಾಸಕ ವೆಂಕಟರೆಡ್ಡಿ ಮುದ್ನಾಳ, ಮಾಜಿ ಶಾಸಕ ಗುರುಪಾಟೀಲ್ ಶಿರವಾಳ ಅವರನ್ನು ಸಂಪರ್ಕಿಸಿದೆ.
ಅವರೆಲ್ಲ ತಮ್ಮ ಬಿಜೆಪಿ ಪಕ್ಷದ 10 ಜನ ಜಿ.ಪಂ. ಸದಸ್ಯರೊಂದಿಗೆ ಮಾತುಕತೆ ನಡೆಸಿ ನನ್ನನ್ನು ಬೆಂಬಲಿಸುವಂತೆ ತಿಳಿಸಿ ಜಿಪಂ ಅಧ್ಯಕ್ಷರನ್ನಾಗಿ ಮಾಡಿದ್ದಾರೆ ಎಂದರು.
ಮುಂಬರುವ ದಿನಗಳಲ್ಲಿ ಬಿಜೆಪಿ ಪಕ್ಷದ ಸಂಘಟನೆಯಲ್ಲಿ ನಾನು ಪ್ರಾಮಾಣಿಕವಾಗಿ ತೊಡಗಿಸಿಕೊಳ್ಳುತ್ತೇನೆ ಎಂದು ಹೇಳಿರುವದು ಎಲ್ಲರ ಹುಬ್ಬೇರಿಸುವಂತೆ ಮಾಡಿದೆ ಎನ್ನಲಾಗಿದೆ.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಸದಸ್ಯರಿಗೆ ವಿಪ್ ಜಾರಿ ಮಾಡಿರುವ ಕುರಿತು ಮಾತನಾಡಿದ ಯಡಿಯಾಪುರ, ನನಗೆ ಹಾಗೂ ಕಿಶನ್ ರಾಠೋಡರನ್ನು ಯಾರು ಸಂಪರ್ಕಿಸಿಲ್ಲ. ನಮಗೆ ವಿಪ್ ತಲುಪಿಲ್ಲ. ಬರುವ ದಿನಗಳಲ್ಲಿ ಅವರು ನಮ್ಮಿಬ್ಬರ ವಿರುದ್ಧ ಕಾನೂನು ಹೋರಾಟ ಮಾಡಿದರೆ. ನಾವು ಕೂಡ ಸಮರ್ಥವಾಗಿ ಎದುರಿಸುತ್ತೇವೆ ಎಂದು ಸ್ಪಷ್ಟವಾಗಿ ಹೇಳಿದರು.
ಜಿ.ಪಂ. ನಲ್ಲಿ ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಶಾಸಕರ ಮಾರ್ಗದರ್ಶನದಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆಯ ನೀಡಿದರು.