ಶಹಾಪುರಃ ಸಿಟಿ ಬಸ್ ಸಂಚಾರ ಕಾರ್ಯಾರಂಭ ಆಯ ಸ್ಥಳಕ್ಕೆ 4, 5, 7 ರೂ. ಚಾರ್ಜ್ ನಿಗದಿ
ಶಹಾಪುರ ನಗರ ಸಾರಿಗೆ ಬಸ್ ಸಂಚಾರ ಆರಂಭ
ಯಾದಗಿರಿ, ಶಹಾಪುರಃ ನಗರದಲ್ಲಿ ನಾಲ್ಕು ಹೊಸ ನಗರ ಸಾರಿಗೆ ಬಸ್ ಸಂಚಾರ ಗುರುವಾರ ಪ್ರಾರಂಭಿಸಲಾಗಿದೆ ಎಂದು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಸಂತೋಷ ಗೋಗೇರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸದರಿ ನಗರ ಸಾರಿಗೆ ಬಸ್ಗಳು ಗೋಗಿಪೇಟ, ಸಗರ ಮಾರ್ಗದಲ್ಲಿ ಹೊರಟು ಶಹಾಪೂರ ಪಟ್ಟಣದ ಕೈಗಾರಿಕಾ ಪ್ರದೇಶದಿಂದ ಭೀಮರಾಯನಗುಡಿಗೆ ಸಂಚರಿಸಲಿವೆ. ಶಹಾಪೂರ ಪಟ್ಟಣದ ಪ್ರಮುಖ ಸ್ಥಳಗಳಾದ ಸುಬೇದಾರ ಆಸ್ಪತ್ರೆ, ಹೊಸ ಬಸ್ ನಿಲ್ದಾಣ, ಸಮುದಾಯ ಭವನ, ಬಸವೇಶ್ವರ ವೃತ್ತ, ಹಳೆ ಬಸ್ ನಿಲ್ದಾಣ, ಚರಬಸವೇಶ್ವರ ಕಮಾನ್, ಕೆಇಬಿ, ಹೊಸ ತಾಲ್ಲೂಕು ಕಚೇರಿ, ಪದವಿ ಮಹಾವಿದ್ಯಾಲಯ, ಎನ್ಜಿಒ ಕಾಲೋನಿ ಹಾಗೂ ಆರಬೋಳ ಕಲ್ಯಾಣ ಮಂಟಪ ಸೇರಿದಂತೆ ನಗರದ ಇತರ ಪ್ರಮುಖ ಸ್ಥಳಗಳಲ್ಲಿ ನಿಲುಗಡೆ ಕಲ್ಪಿಸಲಾಗಿರುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಶಹಾಪೂರ ಪಟ್ಟಣದ ವಲಯದಲ್ಲಿ ಮೊದಲನೇಯ ಹಂತಕ್ಕೆ 4 ರೂ., ಎರಡನೇ ಹಂತಕ್ಕೆ 5 ರೂ ಹಾಗೂ ಮೂರನೇ ಹಂತಕ್ಕೆ 7 ರೂಪಾಯಿ ದರವನ್ನು ನಿಗದಿಪಡಿಸಿ ಪ್ರತಿ 30 ನಿಮಿಷಕ್ಕೆ ಒಂದರಂತೆ ದಿನದಲ್ಲಿ ಒಟ್ಟು 28 ಸುತ್ತು ಬಸ್ಗಳು ಕಾರ್ಯಾಚರಣೆ ಮಾಡುತ್ತವೆ ಎಂದು ಅವರು ತಿಳಿಸಿದ್ದಾರೆ.
ಇದಲ್ಲದೆ ಕನ್ಯಾಕೋಳೂರು ಬಾಲಕಿಯರ ವಸತಿ ನಿಲಯದ ವಿದ್ಯಾರ್ಥಿನಿಯರ ಬೇಡಿಕೆಯಂತೆ ಹಾಗೂ ಶಾಸಕರ ಶಿಫಾರಸ್ಸಿನಂತೆ ಶಹಾಪೂರ ಪಟ್ಟಣದ ಹೊರ ವಲಯದ ಕನ್ಯಾಕೋಳೂರು ಬಾಲಕಿಯರ ವಸತಿ ನಿಲಯದಿಂದ ಶಹಾಪೂರಕ್ಕೆ ಬರಲು ಬೆಳಿಗ್ಗೆ 7:00, 8:25, 9:30 ಮಧ್ಯಾಹ್ನ 12.30, ಸಂಜೆ 4:30 ಹಾಗೂ 5:30 ಗಂಟೆಗೆ ಹಾಗೂ ಶಹಾಪೂರನಿಂದ ಬಾಲಕಿಯರ ವಸತಿ ನಿಲಯಕ್ಕೆ ಹೋಗಲು ಬೆಳಿಗ್ಗೆ 8:00, 11:30, ಮಧ್ಯಾಹ್ನ 3.30, ಸಂಜೆ 5:10 ಹಾಗೂ 7:30 ಗಂಟೆಗೆ ಟ್ರಿಪ್ಗಳ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರು ಸದರಿ ಬಸ್ ಸಂಚಾರದ ಹಾಗೂ ನಗರ ಸಾರಿಗೆ ವಾಹನಗಳ ಸದುಪಯೋಗ ಪಡಿಸಿಕೊಳ್ಳುವಂತೆ ಅವರು ಕೋರಿದ್ದಾರೆ.